ವಾರ್ಡ್‌ಗಳ ಮರುವಿಂಗಡಣೆಯಾದರೆ ಕನಿಷ್ಠ ಒಂದು ವರ್ಷ ಬಿಬಿಎಂಪಿ ಚುನಾವಣೆ ತಡವಾಗಬಹುದು: ಹೈಕೋರ್ಟ್‌ಗೆ ಆಯೋಗ ಪ್ರತಿಕ್ರಿಯೆ

ಬಿಬಿಎಂಪಿ ಚುನಾವಣೆ ನಡೆಸಲು ನಿರ್ಧರಿಸಬೇಕಿರುವುದು ರಾಜ್ಯ ಚುನಾವಣಾ ಆಯೋಗವೇ ಹೊರತು ರಾಜ್ಯ ಸರ್ಕಾರವಲ್ಲ. ಕರ್ನಾಟಕ ಮುನಿಸಿಪಲ್‌ ಕಾರ್ಪೊರೇಷನ್‌ ತಿದ್ದುಪಡಿ ಕಾಯಿದೆ ಅನ್ವಯವಾಗುವುದು ಮುಂದಿನ ಚುನಾವಣೆಗಳಿಗೇ ಹೊರತು ಈಗಲ್ಲ - ಅರ್ಜಿದಾರರ ವಾದ
High Court of Karnataka
High Court of Karnataka

“ವಾರ್ಡ್‌ಗಳ ಮರುವಿಂಗಡಣೆಯಾದರೆ ಕನಿಷ್ಠ ಒಂದು ವರ್ಷ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಚುನಾವಣೆ ತಡವಾಗಬಹುದು” ಎಂದು ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಚುನಾವಣಾ ಆಯೋಗ ತಿಳಿಸಿತು.

ಬಿಬಿಎಂಪಿ ಚುನಾವಣೆಯನ್ನು ಕಾಲಬದ್ಧವಾಗಿ ನಡೆಸುವಂತೆ ರಾಜ್ಯ ಚುನಾವಣಾ ಆಯೋಗ ಮತ್ತು ಇತರರು ಸಲ್ಲಿಸಿದ್ದ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ ಓಕಾ ಹಾಗೂ ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ಪೀಠವು ನಡೆಸಿತು. ವಾದ-ಪ್ರತಿವಾದ ಆಲಿಸಿದ ಪೀಠವು ವಿಚಾರಣೆಯನ್ನು ನವೆಂಬರ್‌ 25ಕ್ಕೆ ಮುಂದೂಡಿತು. ಮತಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಮತ್ತೆ ಅದನ್ನು ಮರುವಿಂಗಡಣಾ ಆಯೋಗಕ್ಕೆ ಕಳುಹಿಸಿಕೊಡಬೇಕೆ ಎಂದು ಪೀಠವು ಪ್ರಶ್ನಿಸಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, “ಬಿಬಿಎಂಪಿ ಚುನಾವಣೆ ನಡೆಸುವ ಸಂಬಂಧ ನಿರ್ಧರಿಸಬೇಕಿರುವುದು ರಾಜ್ಯ ಚುನಾವಣಾ ಆಯೋಗವೇ ಹೊರತು ರಾಜ್ಯ ಸರ್ಕಾರವಲ್ಲ. ಕರ್ನಾಟಕ ಮುನಿಸಿಪಲ್‌ ಕಾರ್ಪೊರೇಷನ್‌ ಮೂರನೇ ತಿದ್ದುಪಡಿ ಕಾಯಿದೆ, 2020 ಅನ್ವಯವಾಗುವುದು ಮುಂದಿನ ಚುನಾವಣೆಗಳಿಗೆ ಹೊರತು ಈಗಿನ ಚುನಾವಣೆಗಲ್ಲ” ಎಂದು ತಿಳಿಸಿದರು.

“ಬೆಂಗಳೂರು ಭೌಗೋಳಿಕವಾಗಿ ಸಾಕಷ್ಟು ಬದಲಾಗಿದೆ. ಕಡಿಮೆ ಜನಸಂಖ್ಯೆ ಇದ್ದ ಪ್ರದೇಶಗಳು ಈಗ ಹೆಚ್ಚು ಜನವಸತಿಯ ಪ್ರದೇಶಗಳಾಗಿ ಮಾರ್ಪಾಡಾಗಿವೆ. ಸೆಪ್ಟೆಂಬರ್‌ 10ಕ್ಕೆ ಬಿಬಿಎಂಪಿ ಪದಾಧಿಕಾರಿಗಳ ಕಾಲಾವಧಿ ಮುಗಿದಿದೆ” ಎಂದು ರವಿವರ್ಮ ಕುಮಾರ್‌ ನ್ಯಾಯಾಲಯದ ಗಮನಸೆಳೆದರು.

Also Read
ಗ್ರಾಮ ಪಂಚಾಯಿತಿ ಚುನಾವಣೆ: ಮೂರು ವಾರಗಳಲ್ಲಿ ವೇಳಾಪಟ್ಟಿ ಪ್ರಕಟಿಸಲು ಆಯೋಗಕ್ಕೆ ಹೈಕೋರ್ಟ್ ಆದೇಶ

“2001ರ ಜನಸಂಖ್ಯಾ ದಾಖಲಾತಿ ಆಧರಿಸಿ 2015ರ ಬಿಬಿಎಂಪಿ ಚುನಾವಣೆ ನಡೆಸಲಾಗಿದೆ. ಗುರುತಿನ ಚೀಟಿಯ ಪಟ್ಟಿ ತಯಾರಿಸಲು ಹಲವಾರು ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ. ಈ ಸಂದರ್ಭದಲ್ಲಿ ವ್ಯತ್ಯಯವಾದರೆ ಸಾರ್ವಜನಿಕರ ಹಣ ಪೋಲಾಗಲಿದೆ” ಎಂದು ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಪೀಠದ ಗಮನಸೆಳೆದರು.

“ಮರುವಿಂಗಡಣೆಯಾದರೆ ಯಾವಾಗ ಚುನಾವಣೆ ನಡೆಸುತ್ತೀರಿ” ಎಂದು ಆಯೋಗವನ್ನು ನ್ಯಾಯಾಪೀಠ ಪ್ರಶ್ನಿಸಿತು. “ಕನಿಷ್ಠ ಒಂದು ವರ್ಷ ತಡವಾಗಬಹುದು” ಎಂದು ಫಣೀಂದ್ರ ಪ್ರತಿಕ್ರಿಯಿಸಿದರು. ಇತ್ತ ಪ್ರತಿಕ್ರಿಯೆ ದಾಖಲಿಸಲು ಹೆಚ್ಚುವರಿ ಕಾಲಾವಕಾಶ ನೀಡುವಂತೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಪೀಠವು ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com