ಬೆಂಗಳೂರಿನಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಸಂತ್ರಸ್ತರಾಗಿರುವವರಿಗೆ ನಿಯಮದ ಪ್ರಕಾರ ಪರಿಹಾರ ವಿತರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಕ್ಷಣ ಕಾರ್ಯಪ್ರವೃತ್ತವಾಗಬೇಕು. ಅಲ್ಲದೇ, ಪರಿಹಾರ ವಿತರಿಸಿದ ಸ್ಥಿತಿಗತಿ ವರದಿಯನ್ನು ಸಲ್ಲಿಸಬೇಕು ಎಂಬುದು ಸೇರಿದಂತೆ ಹಲವು ನಿರ್ಣಯಗಳನ್ನು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ ಎನ್ ಕೇಶವನಾರಾಯಣ ಅವರ ನೇತೃತ್ವದ ವಿಪತ್ತು ಸಂತ್ರಸ್ತರಿಗೆ ಕಾನೂನು ಸೇವೆಗಳ ಸಮಿತಿಯು ನಿರ್ದೇಶಿಸಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಕಚೇರಿಯಲ್ಲಿ ಈಚೆಗೆ ಬೆಂಗಳೂರಿನ ಪ್ರಾದೇಶಿಕ ಆಯುಕ್ತ ಅಮ್ಲಾನ್ ಬಿಸ್ವಾಸ್ ಸೇರಿದಂತೆ ವಿವಿಧ ಪ್ರಾಧಿಕಾರಗಳ ಅಧಿಕಾರಿಗಳ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಕೆ ಎನ್ ಕೇಶವನಾರಾಯಣ ಅವರ ನೇತೃತ್ವದ ಸಮಿತಿಯು ಆರು ಕೆಳಗಿನ ನಿರ್ಧಾರಗಳನ್ನು ಕೈಗೊಂಡಿದೆ.
ಬೆಂಗಳೂರಿನಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವುದನ್ನು ಗುರುತಿಸಲಾಗಿರುವ ಪ್ರದೇಶಗಳು, ನಷ್ಟ ಇತ್ಯಾದಿ ಮಾಹಿತಿಯನ್ನು ಕೆಎಸ್‌ಎಲ್‌ಎಸ್‌ಎ ಮತ್ತು ಬೆಂಗಳೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (ಎನ್‌ಎಎಲ್‌ಎಸ್‌ಎ) ಯೋಜನೆಯ ಭಾಗವಾಗಿ ಮಧ್ಯಪ್ರವೇಶಿಸಲು ಇದು ಅನುಕೂಲವಾಗಲಿದೆ.
ಜನವಸತಿ ಮತ್ತು ರಸ್ತೆಯಲ್ಲಿ ತುಂಬಿಕೊಂಡಿರುವ ನೀರು ಖಾಲಿ ಮಾಡಲು ಬಿಬಿಎಂಪಿ ಮತ್ತು ಸಂಬಂಧಿತ ಸರ್ಕಾರಿ ಸಂಸ್ಥೆಗಳು ಸರ್ವ ಪ್ರಯತ್ನ ಮಾಡಬೇಕು.
ಕೊಳಚೆ ಮತ್ತು ಹಿಂದುಳಿದ ವರ್ಗದ ಜನರು ವಾಸಿಸುವ ಪ್ರದೇಶದಲ್ಲಿ ವಾಸಿಸುವ ಜನರಿಗೆ ಉಚಿತ ಬಿಸಿಯೂಟ, ಸ್ವಚ್ಛ ಕುಡಿಯುವ ನೀರು, ಬಟ್ಟೆ, ಬೆಡ್ ಶೀಟುಗಳು ಮತ್ತು ಮೂಲಭೂತ ಅಗತ್ಯತೆಗಳನ್ನು ಪೂರೈಸಲು ಬಿಬಿಎಂಪಿ ತಕ್ಷಣ ಕ್ರಮಕೈಗೊಳ್ಳಬೇಕು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಕಾರದೊಂದಿಗೆ ಸಂಬಂಧಿತ ಸರ್ಕಾರಿ ಇಲಾಖೆಗಳು ಮತ್ತು ಬಿಬಿಎಂಪಿ ತಕ್ಷಣ ಆರೋಗ್ಯ ಶಿಬಿರ ಆಯೋಜಿಸಬೇಕು.
ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರಿಗೆ ಪರಿಹಾರ ಕಿಟ್‌ಗಳನ್ನು ವಿತರಿಸಲು ಕೋರಿ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಗೆ ಕೆಎಸ್‌ಎಲ್‌ಎಸ್‌ನ ಸದಸ್ಯ ಕಾರ್ಯದರ್ಶಿ ಅವರು ಪತ್ರ ಬರೆಯಬೇಕು ಎಂದು ಎಂಬ ಗೊತ್ತುವಳಿಗಳನ್ನು ಅಂಗೀಕರಿಸಲಾಗಿದೆ.
ಎನ್‌ಎಎಲ್‌ಎಸ್‌ಎ (ಕಾನೂನು ಸೇವಾ ಪ್ರಾಧಿಕಾರಗಳ ಮೂಲಕ ವಿಪತ್ತು ಸಂತ್ರಸ್ತರಿಗೆ ಕಾನೂನು ಸೇವೆಗಳು) ಯೋಜನೆ 2010ರ ಜಾರಿಗಾಗಿ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯಾದ ಕೆ ಎನ್ ಕೇಶವನಾರಾಯಣ ಅವರನ್ನು ನೇಮಕ ಮಾಡಲಾಗಿದೆ.