ಬೆಂಗಳೂರು ಮಳೆ ಅವಾಂತರ: ವಾರ್ಡ್‌ವಾರು ದೂರು ಪರಿಹಾರ ಕೇಂದ್ರ ಆರಂಭಿಸಲು ಬಿಬಿಎಂಪಿಗೆ ಹೈಕೋರ್ಟ್‌ ಸೂಚನೆ

ಮುಂಗಾರು ಆರಂಭಕ್ಕೂ ಮುನ್ನ ಬೆಂಗಳೂರಿನ ಕೆರೆಗಳಿಂದ ನೀರನ್ನು ಬಿಡುಗಡೆ ಮಾಡುವ ಸಂಬಂಧ ಕೆರೆಗಳಿಗೆ ಗೇಟ್‌ಗಳನ್ನು ಅಳವಡಿಸುವ ಕುರಿತ ಪ್ರಸ್ತಾವಕ್ಕೆ ಒಪ್ಪಿಗೆ ಪಡೆಯಲು ತುರ್ತಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ದೇಶಿಸಿದ ಹೈಕೋರ್ಟ್‌.
Bengaluru rain
Bengaluru rain
Published on

“ಬೆಂಗಳೂರಿನ ರಸ್ತೆಗಳಲ್ಲಿ (ಈಶಾನ್ಯ ಭಾಗ) ನೀರು ತುಂಬಿಕೊಂಡಿರುವುದಕ್ಕೆ ಏನು ಮಾಡಿದ್ದೀರಿ? ಭಾರಿ ಮಳೆಯಾಗಿರುವುದನ್ನು ನಾವು ಅಲ್ಲಗಳೆಯುತ್ತಿಲ್ಲ. ನೀರು ಚರಂಡಿಗೆ ಹೋಗುತ್ತಿಲ್ಲ. ಚರಂಡಿಗಳಲ್ಲಿ ಕಸ ತುಂಬಿಕೊಂಡಿದೆ. ಸಮಸ್ಯೆಗಳನ್ನು ಬಗೆಹರಿಸಲು ದೂರು ಪರಿಹಾರ ಕೇಂದ್ರ ಆರಂಭಿಸಿದ್ದೀರಾ? ಈ ರೀತಿ ಆದಾಗ ಮಾತ್ರ ಯಾರನ್ನಾದರೂ ಹೊಣೆಗಾರರನ್ನಾಗಿಸಬಹುದು” ಎಂದು ಕರ್ನಾಟಕ ಹೈಕೋರ್ಟ್‌ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು ಉದ್ದೇಶಿಸಿ ಬುಧವಾರ ಹೇಳಿತು.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆಯ ಸಂದರ್ಭದಲ್ಲಿ ನ್ಯಾ. ವಿಶ್ವಜಿತ್‌ ಶೆಟ್ಟಿ ಅವರು “ಚರಂಡಿಗಳೆಲ್ಲಾ ತುಂಬಿವೆ. ರಸ್ತೆಯಲ್ಲಿ ನೀರು ನಿಂತಿದೆ. ಜನರು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ದೂರು ಪರಿಹಾರ ಕೇಂದ್ರ ಆರಂಭಿಸಿದ್ದೀರಾ? ಸದ್ಯದ ಪರಿಸ್ಥಿತಿಯನ್ನು ಪರಿಗಣಿಸಿ ವಾರ್ಡ್‌ವಾರು ವಿಶೇಷ ವ್ಯವಸ್ಥೆ ಮಾಡಲಾಗಿದೆಯೇ?” ಎಂದು ಬಿಬಿಎಂಪಿ ವಕೀಲ ವಿ ಶ್ರೀನಿಧಿ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಶ್ರೀನಿಧಿ ಅವರು “ಭಾರಿ ಮಳೆಯಿಂದ ರಸ್ತೆಯಲ್ಲಿ ನೀರು ತುಂಬಿದ್ದು, ಬಿಬಿಎಂಪಿ ಅಧಿಕಾರಿಗಳು ನಿರಂತರವಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಸಮಸ್ಯೆ ಬಗೆಹರಿಸಲು ಎಲ್ಲಾ ಕ್ರಮಕೈಗೊಳ್ಳಲಾಗಿದೆ. ಸಂಬಂಧಪಟ್ಟ ಎಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದಾರೆ” ಎಂದರು.

ಆಗ ನ್ಯಾ. ಅಲೋಕ್‌ ಅರಾಧೆ ಅವರು “ಜನರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರತಿ ವಾರ್ಡ್‌ನಲ್ಲಿ ಎಂಜಿನಿಯರ್‌ ಒಳಗೊಂಡ ದೂರು ಪರಿಹಾರ ಕೇಂದ್ರಗಳನ್ನು ಆರಂಭಿಸಬೇಕು. ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯು ಸಮಗ್ರವಾದ ಕ್ರಮ ಕೈಗೊಳ್ಳಬೇಕು” ಎಂದರು.

Also Read
[ರಸ್ತೆ ಗುಂಡಿ] ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ ಎಂಬುದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು: ಹೈಕೋರ್ಟ್‌

ಅಂತಿಮವಾಗಿ ಪೀಠವು “ಬೆಂಗಳೂರಿಗರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರತಿ ವಾರ್ಡ್‌ನಲ್ಲಿ ದೂರು ಪರಿಹಾರ ಕೇಂದ್ರಗಳನ್ನು ಆರಂಭಿಸಬೇಕು. ಇದರಲ್ಲಿ ಎಂಜಿನಿಯರ್‌ಗಳು ಇರಬೇಕು. ಮುಂಗಾರು ಆರಂಭವಾಗುವುದಕ್ಕೂ ಮುನ್ನ ಬೆಂಗಳೂರಿನ ಕೆರೆಗಳಿಂದ ನೀರನ್ನು ಬಿಡುಗಡೆ ಮಾಡುವ ಸಂಬಂಧ ಕೆರೆಗಳಿಗೆ ಗೇಟ್‌ಗಳನ್ನು ಅಳವಡಿಸುವ ಕುರಿತು ಪ್ರಸ್ತಾವ ಸಿದ್ಧಪಡಿಸಲಾಗಿದೆ. ಹೀಗೆ, ಮಾಡುವುದರಿಂದ ಕೆರೆಗಳು ಮುಂಗಾರಿನ ಸಂದರ್ಭದಲ್ಲಿ ತುಂಬಿ ಹರಿಯುವುದಿಲ್ಲ. ಕೆರೆಗಳಿಗೆ ಗೇಟ್‌ ಅಳವಡಿಸುವ ಸಂಬಂಧ ಸರ್ಕಾರದಿಂದ ಒಪ್ಪಿಗೆ ಪಡೆಯಲು ತುರ್ತಾಗಿ ಪ್ರಸ್ತಾವ ಸಲ್ಲಿಸಬೇಕು” ಎಂದು ಆದೇಶದಲ್ಲಿ ದಾಖಲಿಸಿತು.

ಮುಂದುವರಿದು, “ಜುಲೈ 26ರ ನಂತರ ಇಲ್ಲಿಯವರೆಗೆ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಿರುವುದಕ್ಕೆ ಸಂಬಂಧಿಸಿದ ಸ್ಥಿತಿಗತಿ ವರದಿಯನ್ನು ಬಿಬಿಎಂಪಿಯು ಒಂದು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ಆದೇಶ ಮಾಡಿತು.

Kannada Bar & Bench
kannada.barandbench.com