[ಬಿಬಿಎಂಪಿ ವಾರ್ಡ್‌ ಪುನರ್‌ ವಿಂಗಡಣೆ] ರಾಜ್ಯ ಸರ್ಕಾರವು ಆಯೋಗಕ್ಕೆ ಬೆಂಬಲ ನೀಡದೇ ಇರುವುದು ದುರಂತ: ಹೈಕೋರ್ಟ್‌

ವಾರ್ಡ್‌ ಪುನರ್‌ ವಿಂಗಡಣೆಗಾಗಿ ರಚಿಸಲಾಗಿರುವ ಆಯೋಗದ ಅವಧಿ ಮುಗಿದ್ದು, ಅದು ವಾರ್ಡ್‌ ಪುನರ್‌ ವಿಂಗಡಣೆ ಅಧಿಸೂಚನೆ ಹೊರಡಿಸುವ ಅಧಿಕಾರ ಹೊಂದಿಲ್ಲ ಎಂದು ಆಕ್ಷೇಪಿಸಿದ ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ.
BBMP and Karnataka HC
BBMP and Karnataka HC

ʼರಾಜ್ಯ ಸರ್ಕಾರವು ನಿಮಗೆ ಬೆಂಬಲ ನೀಡದೇ ಇರುವುದು ದುರಂತʼ ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ರಾಜ್ಯ ಚುನಾವಣಾ ಆಯೋಗವನ್ನು ಉಲ್ಲೇಖಿಸಿ ಮೌಖಿಕವಾಗಿ ಹೇಳಿತು. ಬಿಬಿಎಂಪಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಬಲವಾಗಿ ವಾದ ಮಂಡಿಸಿದ ರಾಜ್ಯ ಚುನಾವಣಾ ಆಯೋಗಕ್ಕೆ ಪೂರಕವಾಗಿ ಸಮರ್ಥವಾಗಿ ವಾದಿಸದ ರಾಜ್ಯ ಸರ್ಕಾರವನ್ನು ಕುರಿತು ಪೀಠವು ಮೇಲಿನಂತೆ ಹೇಳಿತು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ವಾರ್ಡ್‌ಗಳ ಪುನರ್‌ ವಿಂಗಡಣೆ ಪ್ರಶ್ನಿಸಿ ವಕೀಲ ಎಸ್ ಇಸ್ಮಾಯಿಲ್ ಜಬಿವುಲ್ಲಾ, ಶಾಂತಿನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ, ಮಾಜಿ ಪಾಲಿಕೆ ಸದಸ್ಯರಾದ ಬಿ ಎನ್ ಮಂಜುನಾಥ್ ರೆಡ್ಡಿ, ಎನ್ ನಾಗರಾಜ್ ಹಾಗೂ ಇತರರು ಸೇರಿ ಸಲ್ಲಿಸಿರುವ ಒಟ್ಟು ಆರು ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ಈಗ ಯಾವುದೇ ರಾಜಕೀಯ ಪಕ್ಷಕ್ಕೆ ಚುನಾವಣೆ ಬೇಡದಾಗಿದೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ತಮಗೆ ಅನುಕೂಲವಾಗುವಂತೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಕ್ಷೇತ್ರ ಪುನರ್‌ ವಿಂಗಡಣೆಯಲ್ಲಿನ ಲೋಪ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ಮುಂದಿನ ಚುನಾವಣೆಯಲ್ಲಿ ಸರಿಪಡಿಸಬಹುದಾಗಿದೆ. ಸುಮಾರು ಎರಡು ವರ್ಷಗಳಿಂದ ಬಿಬಿಎಂಪಿಗೆ ಚುನಾವಣೆಯಾಗಿಲ್ಲ. ನಿರ್ದಿಷ್ಟ ಕಾಲಮಿತಿಯಲ್ಲಿ ಚುನಾವಣೆ ನಡೆಸಬೇಕಾದ ಸಾಂವಿಧಾನಿಕ ಚೌಕಟ್ಟಿಗೆ ಆಯೋಗ ಒಳಪಟ್ಟಿದೆ. ಹೀಗಾಗಿ, ಅರ್ಜಿದಾರರ ಮನವಿಗಳನ್ನು ಪರಿಗಣಿಸದೇ ಚುನಾವಣೆ ನಡೆಸಲು ಅನುಮತಿಸಬೇಕು” ಎಂದು ಮನವಿ ಮಾಡಿದರು.

“ಸುಪ್ರೀಂ ಕೋರ್ಟ್‌ ಜುಲೈ ಮತ್ತು ಮೇನಲ್ಲಿ ಆದೇಶ ಮಾಡುವ ಮೂಲಕ ಬಿಬಿಎಂಪಿ ಚುನಾವಣೆಯ ಮೇಲೆ ನಿಗಾ ಇಟ್ಟಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಅತ್ಯಂತ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಆಯೋಗವು ಮತದಾರರ ಪಟ್ಟಿ ಸಿದ್ಧಪಡಿಸುತ್ತಿದೆ. ಕ್ಷೇತ್ರ ಪುನರ್‌ ವಿಂಗಡಣೆ ಸರಿಯಾಗಿದ್ದು, ಯಾವುದೇ ಅಕ್ರಮ ಪತ್ತೆಯಾದರೆ ಅದನ್ನು ಮುಂದಿನ ಚುನಾವಣೆಯಲ್ಲಿ ಸರಿಪಡಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯವು ಮಾರ್ಗಸೂಚಿ ಹೊರಡಿಸಬಹುದು” ಎಂದರು.

Senior Counsel K N Phanindra
Senior Counsel K N Phanindra

“ಬಿಬಿಎಂಪಿ ಕಾಯಿದೆ ಸೆಕ್ಷನ್‌ 7(1)(ಎ) ಮತ್ತು (ಬಿ) ಅಡಿ ವಾರ್ಡ್‌ಗಳ ಪುನರ್‌ ವಿಂಗಡಣೆ ಮಾಡಲಾಗಿದ್ದು, ಯಾವುದೇ ವಾರ್ಡ್‌ನ ಗಡಿಯು ಎರಡು ವಿಧಾನ ಸಭಾ ಕ್ಷೇತ್ರಗಳಿಗೆ ವಿಸ್ತರಿಸಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿನ ವಾರ್ಡ್‌ಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸರಾಸರಿ ಜನಸಂಖ್ಯೆ ನೀತಿ ಪಾಲಿಸಿದೆ. ಪ್ರತಿ ವಾರ್ಡ್‌ನಲ್ಲಿ ಸರಾಸರಿ 35,000 ಮತದಾರರು ಇರಬೇಕು. ಶೇ. 10ರಷ್ಟು ವ್ಯತ್ಯಾಸವಾಗಬಹುದಾಗಿದೆ” ಎಂದರು.

“ಮತದಾರರ ಪಟ್ಟಿ ತಯಾರಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಈ ಸಂಬಂಧ ಕಾರ್ಯಾದೇಶಗಳನ್ನು ನೀಡಲಾಗಿದೆ. ಈ ಹಂತದಲ್ಲಿ ವಾರ್ಡ್‌ ಪುನರ್‌ ವಿಂಗಡಣೆ ವಿಚಾರದಲ್ಲಿ ಮಧ್ಯಪ್ರವೇಶವಾದರೆ ಇಡೀ ಪ್ರಕ್ರಿಯೆ ಅನುಪಯುಕ್ತವಾಗಲಿದೆ. ಮೀಸಲಾತಿ ಅಧಿಸೂಚನೆಗೆ ಸಂಬಂಧಿಸಿದ ಯಾವುದೇ ತೆರನಾದ ಮಧ್ಯಂತರ ತಡೆಯಾಜ್ಞೆಯು 2022ರ ಜುಲೈ 28ರಂದು ಸುಪ್ರೀಂ ಕೋರ್ಟ್‌ ಮಾಡಿರುವ ಆದೇಶವನ್ನು ಉಲ್ಲಂಘಿಸಲಿದೆ. ಕೆಲವು ಅರ್ಜಿದಾರರಿಗೆ ದಾವೆ ಹೂಡುವ ಹಕ್ಕು (ಲೋಕಸ್‌ ಸ್ಟ್ಯಾಂಡಿ) ಇಲ್ಲ” ಎಂದು ವಾದಿಸಿದರು.

ಅವಧಿ ಮುಗಿದ ಮೇಲೆ ಅಧಿಸೂಚನೆ ಸಲ್ಲ

ಇದಕ್ಕೂ ಮುನ್ನ, ಬಿ ಎನ್‌ ಮಂಜುನಾಥ್‌ ರೆಡ್ಡಿ ಮತ್ತಿತರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ ಅವರು “ವಾರ್ಡ್‌ ಪುನರ್‌ ವಿಂಗಡಣೆಗಾಗಿ ರಚಿಸಲಾಗಿರುವ ಆಯೋಗದ ಅವಧಿ ಮುಗಿದಿದ್ದು, ಅದು ವಾರ್ಡ್‌ ಪುನರ್‌ ವಿಂಗಡಣೆ ಅಧಿಸೂಚನೆ ಹೊರಡಿಸುವ ಅಧಿಕಾರ ಹೊಂದಿಲ್ಲ” ಎಂದು ಆಕ್ಷೇಪಿಸಿದರು.

A S Ponnanna, Senior Counsel
A S Ponnanna, Senior Counsel

“ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ಕ್ಷೇತ್ರಗಳಲ್ಲಿ ಜನಸಂಖ್ಯೆ ಹೆಚ್ಚಿದ್ದರೂ ವಾರ್ಡ್‌ಗಳ ಸಂಖ್ಯೆ ಕಡಿತ ಮಾಡಿ, ಮತದಾರರ ಸಂಖ್ಯೆ ಹೆಚ್ಚಿಸಲಾಗಿದೆ. ಆಡಳಿತ ಪಕ್ಷದ ಶಾಸಕರು ಇರುವ ವಿಧಾನಸಭಾ ಕ್ಷೇತ್ರಗಳಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಇಲ್ಲಿ ಮತದಾರರ ಸಂಖ್ಯೆ ಕಡಿತ ಮಾಡಲಾಗಿದೆ. ಆಡಳಿತ ಪಕ್ಷಕ್ಕೆ ರಾಜಕೀಯವಾಗಿ ಅನುಕೂಲ ಮಾಡಿಕೊಳ್ಳಲು ಹೀಗೆ ಮಾಡಲಾಗಿದೆ. ವಾರ್ಡ್‌ಗಳ ಗಡಿಯನ್ನು ಸರಿಯಾಗಿ ಮಾಡಿಲ್ಲ. ಕ್ಷೇತ್ರಗಳನ್ನು ಮನಸೋ ಇಚ್ಛೆ ಎಳೆದಾಡಲಾಗಿದ್ದು, ಕೆಲವು ಸಮುದಾಯಗಳನ್ನು ಪ್ರತ್ಯೇಕಗೊಳಿಸಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ಮಾಡಲಾಗಿದೆ. ಪ್ರತಿ ವಾರ್ಡ್‌ನಲ್ಲೂ ಸಮಾನವಾಗಿ ಮತದಾರರ ನಿಗದಿಪಡಿಸಬೇಕು. ಒಂದು ಕಡೆ ಹೆಚ್ಚು, ಮತ್ತೊಂದು ಕಡೆ ಕಡಿಮೆ ಮಾಡಬಾರದು” ಎಂದು ಹೇಳಿದರು.

ಹಿರಿಯ ವಕೀಲರಾದ ಅಶೋಕ್‌ ಹಾರನಹಳ್ಳಿ, ಅರವಿಂದ್‌ ಕಾಮತ್‌ ಮತ್ತಿತರರು “ಕಾನೂನುಬಾಹಿರವಾಗಿ ವಾರ್ಡ್‌ಗಳನ್ನು ಪುನರ್‌ ವಿಂಗಡಣೆ ಮಾಡಲಾಗಿದೆ. ಇದಕ್ಕೆ ನ್ಯಾಯಾಲಯ ಅನುಮತಿಸಬಾರದು” ಎಂದು ಕೋರಿದರು.

ಜನಸಂಖ್ಯೆ ವ್ಯತ್ಯಾಸಕ್ಕೆ ಆಧಾರವೇನಿದೆ: ಸರ್ಕಾರಕ್ಕೆ ಪ್ರಶ್ನೆ

2011ರ ಜನಗಣತಿ ಆಧರಿಸಿ ವಾರ್ಡ್‌ ಪುನರ್‌ ವಿಂಗಡಣೆ ಮಾಡಿರುವಾಗ ಒಂದು ಕ್ಷೇತ್ರದಲ್ಲಿ ಜನಸಂಖ್ಯೆ ಹೆಚ್ಚಳವಾಗಿರುವುದು ಮತ್ತು ಇನ್ನೊಂದು ಕಡೆ ಜನಸಂಖ್ಯೆ ಕಡಿಮೆಯಾಗಲು ಹೇಗೆ ಸಾಧ್ಯ? ಹೀಗೆಂದು ಹೇಳಲು ಸರ್ಕಾರದ ಬಳಿ ಯಾವ ಆಧಾರವಿದೆ ಎಂದು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ಶ್ರೀನಿವಾಸ್‌ ಅವರನ್ನು ಪೀಠವು ಪ್ರಶ್ನಿಸಿತು.

ಯಾವ ಆಧಾರದಲ್ಲಿ ವಾರ್ಡ್‌ಗಳ ಗಡಿಯನ್ನು ನಿಗದಿ ಮಾಡಲಾಗಿದೆ. ರೈಲ್ವೆ ಲೈನು, ಪ್ರಮುಖ ರಸ್ತೆಗಳು, ಚರಂಡಿಗಳನ್ನು ಪರಿಗಣಿಸದೇ ಹೇಗೆ ವಾರ್ಡ್‌ಗಳನ್ನು ಪ್ರತ್ಯೇಕಿಸಲಾಗಿದೆ ಎಂಬುದಕ್ಕೆ ಪೂರಕವಾದ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯವು ಆದೇಶಿಸಿತು. ಮೂರು ತಾಸಿಗೂ ಹೆಚ್ಚು ಕಾಲ ವಾದ ಆಲಿಸಿದ ಪೀಠವು ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿತು.

ವೈಜ್ಞಾನಿಕ ವಿಧಾನದಲ್ಲೇ ಮರುವಿಂಗಡಣೆ

ಅರ್ಜಿ ಸಂಬಂಧ ಲಿಖಿತ ಆಕ್ಷೇಪಣೆ ಸಲ್ಲಿಸಿರುವ ರಾಜ್ಯ ಸರ್ಕಾರವು ಅತ್ಯಂತ ವೈಜ್ಞಾನಿಕವಾಗಿ ಕ್ಷೇತ್ರಗಳ ಮರುವಿಂಗಡಣೆ ಮಾಡಲಾಗಿದೆ. 2011ರ ಜನಗಣತಿ ಆಧರಿಸಿ ವಾರ್ಡ್ ಜನಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಕ್ಷೇತ್ರಗಳ ಮರುವಿಂಗಡಣೆಯಲ್ಲಿ ಬಿಬಿಎಂಪಿ ಕಾಯಿದೆಯ ಸೆಕ್ಷನ್ 7 ಉಲ್ಲಂಘನೆ ಆಗಿಲ್ಲ. ವಾರ್ಡ್‌ಗಳ ಭೌಗೋಳಿಕ ಪ್ರದೇಶಗಳ ಬಗ್ಗೆ ವೈಜ್ಞಾನಿಕ ಮತ್ತು ತರ್ಕಬದ್ಧ ಸಮೀಕ್ಷೆ ನಡೆಸಲಾಗಿದೆ. ವಾರ್ಡ್ ಕಚೇರಿ ಮತ್ತಿತರ ಸಂಪರ್ಕಗಳಿಗೆ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ವಾರ್ಡ್‌ಗಳನ್ನು ರಚಿಸಲಾಗಿದೆ. ಅರ್ಜಿದಾರರ ಆಕ್ಷೇಪ, ವಿರೋಧಗಳೆಲ್ಲವೂ ಆಧಾರರಹಿತವಾಗಿವೆ. ಅರ್ಜಿದಾರರು ಸಲ್ಲಿಸಿರುವ ದಾಖಲೆ-ಪುರಾವೆಗಳು ಕಾನೂನು ಮಾನ್ಯತೆ ಹೊಂದಿಲ್ಲ ಎಂದಿದೆ.

ಅರ್ಜಿದಾರರ ಆಕ್ಷೇಪ

ಗೋವಿಂದರಾಜನಗರ, ಪದ್ಮನಾಭನಗರ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‌ಗೆ ಸರಾಸರಿ 30 ಸಾವಿರ ಜನಸಂಖ್ಯೆ ನಿಗದಿಪಡಿಸಿದ್ದು, ವಾರ್ಡ್‌ಗಳ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಆದರೆ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾತ್ರ ಪ್ರತಿ ವಾರ್ಡ್‌ಗೆ ಸರಾಸರಿ 39 ಸಾವಿರ ಜನಸಂಖ್ಯೆ ನಿಗದಿಪಡಿಸಲಾಗಿದೆ. ಜತೆಗೆ, ಹಿಂದೆ ಇದ್ದ 7 ವಾರ್ಡ್‌ಗಳಲ್ಲಿ ಪ್ರಸಿದ್ಧ ಕೆ.ಆರ್. ಮಾರ್ಕೆಟ್ ವಾರ್ಡ್ ಕೈಬಿಟ್ಟು, ವಾರ್ಡ್‌ಗಳ ಸಂಖ್ಯೆಯನ್ನು 6ಕ್ಕೆ ಇಳಿಸಲಾಗಿದೆ. ಈ ಮೂಲಕ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ವಾರ್ಡ್‌ಗಳ ರಚನೆಯಲ್ಲಿ ತಾರತಮ್ಯ ಎಸಗಲಾಗಿದೆ ಎನ್ನುವುದು ಅರ್ಜಿದಾರರೊಬ್ಬರ ಆರೋಪವಾಗಿದೆ.

ಪದ್ಮನಾಭ ನಗರ, ಶಾಂತಿನಗರ ಹಾಗೂ ಬಿಟಿಎಂ ಲೇಔಟ್ ವಿಧಾನಸಭೆ ಕ್ಷೇತ್ರಗಳ ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಣೆಯನ್ನೂ ಪ್ರಶ್ನಿಸಿ ತಕರಾರು ಅರ್ಜಿ ಸಲ್ಲಿಸಲಾಗಿದ್ದು, ವಾರ್ಡ್‌ಗಳ ಜನಸಂಖ್ಯೆ ನಿಗದಿಯಲ್ಲಿ ಏಕರೂಪತೆ ಕಾಯ್ದುಕೊಂಡಿಲ್ಲ. ಹಿಂದೆ ಕಡಿಮೆ ಜನಸಂಖ್ಯೆಯಿದ್ದ ವಾರ್ಡ್‌ಗಳಲ್ಲಿ ಸದ್ಯ ಹೆಚ್ಚಿಸಲಾಗಿದೆ. ಹೆಚ್ಚು ಜನಸಂಖ್ಯೆ ಇದ್ದ ವಾರ್ಡ್‌ಗಳಲ್ಲಿ ಜನಸಂಖ್ಯೆಯನ್ನು ತೀವ್ರ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ವಿಧಾನಸಭೆ ಕ್ಷೇತ್ರದ ಮತದಾರರನ್ನು ಬೇರೊಂದು ವಿಧಾನಸಭೆ ಕ್ಷೇತ್ರದ ವಾರ್ಡ್‌ಗಳ ಮತದಾರರಾಗಿ ಸೇರಿಸಲಾಗಿದೆ ಎಂದು ಆಕ್ಷೇಪಿಸಲಾಗಿದೆ.

Kannada Bar & Bench
kannada.barandbench.com