ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಸುರೇಶ್ ಮಹಾಜನ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಈಗಾಗಲೇ ತೀರ್ಪು ನೀಡಿದೆ. ಹೀಗಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್ ಪುನರ್ ವಿಂಗಡಣೆಗೆ ಮಧ್ಯಂತರ ತಡೆ ನೀಡುವ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟನೆ ಕೋರುವುದು ಉತ್ತಮ ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಅರ್ಜಿದಾರಿಗೆ ಹೇಳಿದ್ದು, ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ವಾರ್ಡ್‌ಗಳ ಪುನರ್ ವಿಂಗಡಣೆ ಪ್ರಶ್ನಿಸಿ ವಕೀಲ ಎಸ್ ಇಸ್ಮಾಯಿಲ್ ಜಬಿವುಲ್ಲಾ, ಶಾಂತಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ, ಮಾಜಿ ಪಾಲಿಕೆ ಸದಸ್ಯರಾದ ಬಿ ಎನ್ ಮಂಜುನಾಥ್ ರೆಡ್ಡಿ, ಎನ್ ನಾಗರಾಜ್ ಹಾಗೂ ಇತರರು ಸೇರಿ ಸಲ್ಲಿಸಿರುವ ಒಟ್ಟು ಆರು ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ಸುರೇಶ್ ಮಹಾಜನ್ ಪ್ರಕರಣದಲ್ಲಿನ ಸುಪ್ರೀಂ ಕೋರ್ಟ್ ನಿರ್ದೇಶನವು ಮಧ್ಯಪ್ರದೇಶ ರಾಜ್ಯ ಚುನಾವಣಾ ಆಯೋಗಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯಿಸುತ್ತದೆ. ಸಾಂವಿಧಾನಿಕ ಬಾಧ್ಯತೆಯನ್ನು ಚಾಚೂತಪ್ಪದೇ ನಿರ್ವಹಿಸುವ ನಿಟ್ಟಿನಲ್ಲಿ ಸಂಬಂಧಿತ ಚುನಾವಣಾ ಆಯೋಗಗಳು ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಕಾಲಮಿತಿಯಲಿ ಚುನಾವಣೆ ನಡೆಸುವ ಮೂಲಕ ಅದನ್ನು ಪಾಲಿಸಬೇಕಿದೆ” ಎಂದರು.
2022ರ ಆಗಸ್ಟ್ 26ರಂದು ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಲಿದೆ. ಅಂದು ಹಾಲಿ ಅರ್ಜಿದಾರರು ಸ್ಪಷ್ಟನೆ ಕೋರುವುದು ಒಳಿತು ಎಂದು ನ್ಯಾ. ಚಂದನಗೌಡರ್ ಅವರು ಹೇಳಿದರು. ಅಲ್ಲದೇ, ನಿರ್ದಿಷ್ಟ ಆದೇಶ ಮಾಡಲು ಕ್ಷೇತ್ರ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ ನೈಜ ಮಾಹಿತಿಯನ್ನು ಒಳಗೊಂಡ ಚಾರ್ಟ್ ಅನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಪೀಠವು ಇದೇ ವೇಳೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
2022ರ ಮೇ 10ರಂದು ಮಧ್ಯಪ್ರದೇಶದ ಸುರೇಶ್ ಮಹಾಜನ್ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಅಥವಾ ಒಬಿಸಿ ಮೀಸಲಾತಿಗೆ ಸಂಬಂಧಿಸಿದ ತ್ರಿವಳಿ ಪರೀಕ್ಷೆ ಅನುಪಾಲನೆಯು ನಿರಂತರ, ಕ್ಲಿಷ್ಟ ಮತ್ತು ಸಾಕಷ್ಟು ಸಮಯ ಬೇಡುವ ಪ್ರಕ್ರಿಯೆಯಾಗಿದೆ. ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಯಾವುದೇ ಸಮಸ್ಯೆ ಅಥವಾ ಅಕ್ರಮಗಳು ನಡೆದಿದ್ದರೂ ಅದನ್ನು ಮುಂದಿನ ಚುನಾವಣೆಯಲ್ಲಿ ಸರಿಪಡಿಸಬಹುದಾಗಿದೆ. ಕ್ಷೇತ್ರ ಪುನರ್ ವಿಂಗಡಣೆಯ ಸಮಸ್ಯೆಯಿಂದಾಗಿ ರಾಜ್ಯ ಚುನಾವಣಾ ಆಯೋಗವು ಚುನಾವಣೆ ಪ್ರಕ್ರಿಯೆ ಆರಂಭಿಸದಂತೆ ತಡೆಹಿಡಿಯಲಾಗದು ಎಂದು ಹೇಳಿತ್ತು.