ಶಿಕ್ಷಣ ಎನ್ನುವುದು ಜಾತ್ಯತೀತ ಚಟುವಟಿಕೆಯಾಗಿದ್ದು, ಇಲ್ಲಿ ಧರ್ಮಕ್ಕೆ ಯಾವುದೇ ಪಾತ್ರ ನಿರ್ವಹಿಸಲು ಆಸ್ಪದವಿಲ್ಲ ಎಂದು ಕಾಲೇಜು ಅಭಿವೃದ್ಧಿ ಸಮಿತಿಯನ್ನು (ಸಿಡಿಸಿ) ಪ್ರತಿನಿಧಿಸಿರುವ ಹಿರಿಯ ವಕೀಲ ಸಜ್ಜನ್ ಪೂವಯ್ಯ ಹಿಜಾಬ್ ಕುರಿತಾದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮುಂದೆ ವಾದಿಸಿದರು.
ಹಿಜಾಬ್ ಧರಿಸಿ ಕಾಲೇಜಿಗೆ ತೆರಳುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ತಮ್ಮನ್ನು ಕಾಲೇಜಿಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಆಕ್ಷೇಪಿಸಿ ಮುಸ್ಲಿಮ್ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರ ಪೂರ್ಣ ಪೀಠವು ಒಂಭತ್ತನೇ ದಿನವಾದ ಬುಧವಾರ ಸಹ ಮುಂದುವರೆಸಿತು.
“ಸರ್ಕಾರದಿಂದ ಸಾರ್ವಜನಿಕ ಶಿಕ್ಷಣ ಪಡೆಯುತ್ತಿದ್ದರೆ ಹಿಜಾಬ್ ಧಾರಣೆ ಅಗತ್ಯ ಧಾರ್ಮಿಕ ಆಚರಣೆ ಎಂದು ತೋರಿಸಿದರೂ ಸಹ ಧಾರ್ಮಿಕ ವೇಷಭೂಷಣ ಧರಿಸಲು ಅವಕಾಶವಿಲ್ಲ. ಸಾರ್ವಜನಿಕ ಶಿಕ್ಷಣ ನೀಡುವುದು ಸರ್ಕಾರದ ಜಾತ್ಯತೀತ ಚಟುವಟಿಕೆಯಾಗಿದೆ. ಆದ್ದರಿಂದ, ಜಾತ್ಯತೀತ ಶಿಕ್ಷಣಕ್ಕೆ ಧರ್ಮದ ಹಸ್ತಕ್ಷೇಪವನ್ನು ಕನಿಷ್ಠವಾಗಿ ಇಡಬೇಕು” ಎಂದರು.
ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್ ಎಸ್ ನಾಗಾನಂದ್ ಅವರು ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮವಸ್ತ್ರ ಸೂಚಿಸುವುದರಿಂದ ಧಾರ್ಮಿಕ ಆಚರಣೆ ಹಕ್ಕಿನ ಉಲ್ಲಂಘನೆಯಾಗುತ್ತದೆಯೇ ಎಂಬುದರ ಕುರಿತು ವಾದ ಮಂಡನೆ ಮುಂದುವರಿಸಿದರು. “ಈ ಎಲ್ಲಾ ಕಾಲೇಜುಗಳಲ್ಲಿ 2004ರಿಂದಲೂ ಸಮವಸ್ತ್ರವನ್ನು ಕಡ್ಡಾಯ ಮಾಡಲಾಗಿದೆ” ಎಂದರು.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಎಂಬ ಸಂಘಟನೆಯ ಕೆಲವು ವ್ಯಕ್ತಿಗಳು ಶಾಲೆಗೆ ಹೋಗಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಆ ಬಳಿಕ ಹಿಜಾಬ್ ಧರಿಸದೇ ತರಗತಿ ಬರದಿರಲು ವಿದ್ಯಾರ್ಥಿನಿಯರು ನಿರಾಕರಿಸಿದ್ದಾರೆ. “ಹಿಜಾಬ್ ಧರಣಿಯನ್ನು ಮುನ್ನಡೆಸುತ್ತಿರುವ ಸಂಘಟನೆ ಅದು. ಅವರು ಶಿಕ್ಷಣ ಸಂಘಟನೆ ಅಥವಾ ವಿದ್ಯಾರ್ಥಿ ಪ್ರತಿನಿಧಿಗಳ ಸಂಘಟನೆಯಲ್ಲ. ಹೀಗೆ ಯಾವುದೋ ಸಂಘಟನೆ ಬಂದು ಈ ಗಲಾಟೆ ಸೃಷ್ಟಿಸುತ್ತಿದೆ” ಎಂದರು.
ಆ ಸಂಘಟನೆಯ ಬಗ್ಗೆ ಮಾಹಿತಿ ಇದೆಯೇ ಎಂದು ಪೀಠವು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರನ್ನು ಪ್ರಶ್ನಿಸಿತು. ಇದಕ್ಕೆ ನಾವದಗಿ ಅವರು ತಮ್ಮ ಬಳಿ ಇರುವ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸುವುದಾಗಿ ತಿಳಿಸಿದರು.
ಮುಸ್ಲಿಮ್ ವಿದ್ಯಾರ್ಥಿನಿಯರ ಶಿರವಸ್ತ್ರ ತೆಗೆಸಿ ಅವರನ್ನು ಅನುಚಿತವಾಗಿ ನಡೆಸಿಕೊಳ್ಳಲಾಗಿದೆ ಎಂಬ ವರದಿಗಳು ಆಧಾರರಹಿತವಾಗಿವೆ. “ವಿದ್ಯಾರ್ಥಿಗಳಿಗೆ ಹಾಜರಾತಿ ನೀಡುವುದಿಲ್ಲವೆನ್ನುವ ಬೆದರಿಕೆ ಇದೆ ಎನ್ನಲಾಗಿದೆ. ಇದರಲ್ಲಿ ಬೆದರಿಕೆ ಏನಿದೆ? ಅವರು ಶಾಲೆಗೆ ಬರದಿದ್ದರೆ ಗೈರು ಹಾಜರಾತಿ ಹಾಕಲಾಗುತ್ತದೆ. ಇಂಟರ್ನಲ್ ಅಂಕ ನೀಡುವುದಿಲ್ಲ ಎಂಬ ಬೆದರಿಕೆ ಹಾಕಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಹಾಗೆ ಆಗಿಲ್ಲ. ಇವೆಲ್ಲ ಆಧಾರರಹಿತ ಆರೋಪಗಳು” ಎಂದರು.
ಸಾರ್ವಜನಿಕ ಸುವ್ಯವಸ್ಥೆ ವಿಚಾರ ಉಲ್ಲೇಖಿಸಿದ ನಾಗಾನಂದ್ ಅವರು “ಎಲ್ಲ ಪ್ರತಿನಿಧಿಗಳನ್ನು ಹೊಂದಿರುವ ಪ್ರಜಾಸತ್ತಾತ್ಮಕ ಸಂಸ್ಥೆಯು (ಸಿಡಿಸಿ) ನಿರ್ಧಾರ ತೆಗೆದುಕೊಂಡಿದೆ. ಶಾಲೆಯಲ್ಲಿ ಸಾರ್ವಜನಿಕ ಸುವ್ಯವಸ್ಥೆಗಾಗಿ ಉಡುಪಿನಲ್ಲಿ ಏಕರೂಪತೆ ಇರಬೇಕು ಎಂಬ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದಾರೆ. ಅವ್ಯವಸ್ಥೆಯ ಕಾರಣದಿಂದಾಗಿ ಮಾತ್ರವೇ ಆ ಆದೇಶ ತೆಗೆದುಕೊಳ್ಳಲಾಗಿದೆ ಎಂದು ಹೇಳುವ ಅಗತ್ಯವಿಲ್ಲ” ಎಂದರು.
“ಹಿಂದೂಗಳ ಬಲಪಂಥೀಯ ಸಂಘಟನೆಯೊಂದು ಕೇಸರಿ ಶಲ್ಯ ಧರಿಸುವುದಾಗಿ ಹೇಳುತ್ತಿದೆ. ಮುಂದೆ ಮೊಹಮ್ಮದೀಯ ಹುಡುಗರು ತಲೆಗೆ ಟೋಪಿ ಧರಿಸಬೇಕೆಂದು ಹೇಳಬಹುದು. ಇದು ಎಲ್ಲಿ ಕೊನೆಗೊಳ್ಳುತ್ತದೆ. ನಾವು ಸಮಾಜವನ್ನು ಈ ರೀತಿ ಧ್ರುವೀಕರಿಸಬಹುದೇ” ಎಂದು ಪ್ರಶ್ನಿಸಿದರು.
ಬಳಿಕ ಸಿಡಿಸಿ ಪರವಾಗಿ ವಾದ ಆರಂಭಿಸಿದ ಪೂವಯ್ಯ ಅವರು “ಸರ್ಕಾರಿ ಪಿಯು ಕಾಲೇಜಿನ ಸಮಿತಿ ಅಧ್ಯಕ್ಷತೆಯನ್ನು ಮಾತ್ರ ಶಾಸಕರು ವಹಿಸುತ್ತಾರೆ. ಶಾಸಕರು ಆ ಸಂದರ್ಭದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಸೇರಿರಬಹುದು ಅಥವಾ ಸೇರದಿರಬಹುದು. ಶಾಸಕರು ಯಾವುದೇ ಪಕ್ಷದ ಸದಸ್ಯರಾಗಿ ಅಲ್ಲಿ ಕುಳಿತುಕೊಳ್ಳುವುದಿಲ್ಲ” ಎಂದರು.
ಧಾರ್ಮಿಕ ಚಿಹ್ನೆ ಅಥವಾ ಉಡುಪಿನ ಹಕ್ಕಿಗೆ ಸಂವಿಧಾನದ 25ನೇ ವಿಧಿ ರಕ್ಷಣೆ ಒದಗಿಸುತ್ತದೆ. ಆದರೆ. ಅದು 25(2)ನೇ ವಿಧಿಗೆ ಒಳಪಟ್ಟಿರುತ್ತದೆ ಎಂದರು. “ಆತ್ಮಸಾಕ್ಷಿಯ ಸ್ವಾತಂತ್ರ್ಯ ಪರಿಪೂರ್ಣವಾಗಿದೆ. ಆದರೆ ಧಾರ್ಮಿಕ ಆಚರಣೆಯ ಹಕ್ಕು, ಧರ್ಮ ಪ್ರಚಾರ ಮಾಡುವ ಹಕ್ಕು, ಧರ್ಮವನ್ನು ಪ್ರಕಟಿಸುವುದು ಇವೆಲ್ಲವೂ 25(2)ನೇ ವಿಧಿಗೆ ಒಳಪಟ್ಟಿರುತ್ತವೆ” ಎಂದು ವಿವರಿಸಿದರು.
ಕರ್ನಾಟಕ ಶಿಕ್ಷಣ ಕಾಯಿದೆ ನಿಬಂಧನೆಗಳನ್ನು ಉಲ್ಲೇಖಿಸಿದ ಪೂವಯ್ಯ ಅವರು ಶಾಲೆಗಳಲ್ಲಿ ಜಾತ್ಯತೀತ ದೃಷ್ಟಿಕೋನಕ್ಕೆ ಆದ್ಯತೆ ನೀಡಬೇಕು. ನಾವು ಶಾಲೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಲಿಂಗ ತಟಸ್ಥವಾದ ಸಮವಸ್ತ್ರ ಸೂಚಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಜೆ ಎಂ ಖಾಜಿ ಅವರು ನೀವು ವಿದ್ಯಾರ್ಥಿನಿಯರೇ ಇರುವ ಶಾಲೆಗೆ ಸಂಬಂಧಿಸಿದಂತೆ ಹೇಳುತ್ತಿದ್ದೀರಾ ಎಂದು ಪ್ರಶ್ನಿಸಿದರು. “ಇದು ಸಂಪೂರ್ಣವಾಗಿ ವಿದ್ಯಾರ್ಥಿನಿಯರ ಶಿಕ್ಷಣ ಸಂಸ್ಥೆ. ಎಲ್ಲರೂ ಕಳೆದ ವರ್ಷದ ಡಿಸೆಂಬರ್‌ವರೆಗೆ ಹಿಜಾಬ್ ಬೇಕು ಎಂದಿರಲಿಲ್ಲ. ಯಾವಾಗ ಈ ವಿವಾದ ಭುಗಿಲೆದ್ದಿತೋ ಆಗ ಇದು ಆರಂಭವಾಯಿತು” ಎಂದು ಪೂವಯ್ಯ ಪ್ರತಿಕ್ರಿಯಿಸಿದರು.
ವಿದ್ಯಾರ್ಥಿಗಳಿಗೆ ಧಾರ್ಮಿಕ ಉಡುಪು ಧರಿಸಲು ಅವಕಾಶ ಮಾಡಿಕೊಟ್ಟರೆ ಶಾಲೆಗಳ ಜಾತ್ಯತೀತ ಚಹರೆಗೆ ಧಕ್ಕೆಯಾಗುತ್ತದೆ. ನಮ್ಮ ಶಾಲೆಯಲ್ಲಿ 100 ಮುಸ್ಲಿಂ ಮಕ್ಕಳಿದ್ದಾರೆ. ಐವರು ಹಿಜಾಬ್ ಧರಿಸಲು ಬಯಸುತ್ತಾರೆ. ನಾನು ಅವರಿಗೆ ಅವಕಾಶ ನೀಡಿದರೆ, ಉಳಿದ 95 ಮಂದಿ ಧರ್ಮವನ್ನು ನಂಬದವರು, ಹಿಜಾಬ್ ಧರಿಸಿದವರು ಮಾತ್ರ ಧಾರ್ಮಿಕರು ಎಂದು ಅರ್ಥವೇ? ಹಾಗಾದರೆ ಒಗ್ಗಟ್ಟು ಮತ್ತು ಸಾರ್ವಜನಿಕ ಸುವ್ಯವಸ್ಥೆ ಎಲ್ಲಿದೆ?” ಎಂದರು.
ಧರ್ಮದ ಆಧಾರದಲ್ಲಿ ವಿದ್ಯಾರ್ಥಿಗಳ ನಡುವೆ ತಾರತಮ್ಯ ಸೃಷ್ಟಿಸಬಾರದು ಎಂದ ಪೂವಯ್ಯ “ಮುಸ್ಲಿಂ ವಿದ್ಯಾರ್ಥಿನಿ ಹಿಜಾಬ್ ಧರಿಸಿರುವುದರಿಂದ ಈಗ ಹಿಂದೂ ವಿದ್ಯಾರ್ಥಿ ಕೇಸರಿ ಶಲ್ಯ ಧರಿಸಬೇಕೆಂದು ಹೇಳುವ ಪರಿಸ್ಥಿತಿ ನಮ್ಮಲ್ಲಿದೆ. ಇದಕ್ಕೆ ಅಂತ್ಯ ಎಲ್ಲಿದೆ?” ಎಂದರು.
“ಹಿಜಾಬ್ ಧಾರಣೆ ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಭಾವಿಸಿದರೂ ಸಂವಿಧಾನದ ಅಡಿ ಯಾವುದೇ ಧಾರ್ಮಿಕ ಚಿಹ್ನೆ ಶಾಲೆಗೆ ಪ್ರವೇಶಿಸದಂತೆ ಖಚಿತಪಡಿಸುವ ಬಾಧ್ಯತೆ ಹೊಂದಿದ್ದೇವೆ. 25 (2) ನೇ ವಿಧಿಯಡಿ ವಿಶೇಷವಾಗಿ ಸಾರ್ವಜನಿಕ ಶಾಲೆಯಾಗಿ ಈ ಹಕ್ಕನ್ನು ಹೊಂದಿದ್ದೇವೆ” ಎಂದು ತಮ್ಮ ವಾದ ಸರಣಿ ಮುಗಿಸಿದರು.
ಉಳಿದಂತೆ, ದಿನದಂತ್ಯದಲ್ಲಿ ಮಧ್ಯಪ್ರವೇಶಕಾರರ ವಾದವನ್ನು ಆಲಿಸದಿರಲು ಪೀಠವು ನಿರ್ಧರಿಸಿತು. ಅವರು ಲಖಿತ ವಾದವನ್ನು ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿತು. “ಆರು ತಿಂಗಳವರೆಗೆ ಈ ಪ್ರಕರಣವನ್ನು ನಾವು ಆಲಿಸಲಾಗದು” ಎಂದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರು ವಿಚಾರಣೆಯನ್ನು ನಾಳೆ 2.30ಕ್ಕೆ ಮುಂದೂಡಿದರು.