[ಹಿಜಾಬ್‌ ವಿವಾದ] ಯಾವುದೇ ಉಡುಪು ಧರಿಸಲು ಮಹಿಳೆಯನ್ನು ಒತ್ತಾಯಿಸಲಾಗದು: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಪ್ರತಿಯೊಂದು ಧಾರ್ಮಿಕ ನಂಬಿಕೆಯ ಪ್ರತಿಯೊಬ್ಬ ಮಹಿಳೆಗೂ ತನಗೆ ಏನು ಇಷ್ಟವೋ ಅದನ್ನು ಧರಿಸುವ ಆಯ್ಕೆ ಇದೆ ಎಂದು ಹೇಳಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ.
Quran, Hijab and Karnataka High Court

Quran, Hijab and Karnataka High Court

ಹಿಜಾಬ್ ಧರಿಸುವುದನ್ನು ಇಸ್ಲಾಮಿನ ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಪರಿಗಣಿಸುವುದು ಮುಸ್ಲಿಂ ಮಹಿಳೆಯರನ್ನು ನಿರ್ದಿಷ್ಟ ಉಡುಪನ್ನು ಧರಿಸಲು ಒತ್ತಾಯಿಸಿದಂತಾಗುತ್ತದೆ ಎಂದು ರಾಜ್ಯ ಸರ್ಕಾರವು ಮಂಗಳವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ತಮ್ಮನ್ನು ಕಾಲೇಜಿಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಆಕ್ಷೇಪಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರ ಪೂರ್ಣ ಪೀಠವು ಎಂಟನೇ ದಿನವಾದ ಮಂಗಳವಾರ ಸಹ ಮುಂದುವರೆಸಿತು.

ವಾದ ಆರಂಭಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಒಂದೊಮ್ಮೆ ನ್ಯಾಯಾಲಯದ ಆದೇಶದ ಮೂಲಕ ಹಿಜಾಬ್‌ ಧರಿಸುವುದಕ್ಕೆ ಧಾರ್ಮಿಕ ಅನುಮೋದನೆ ನೀಡಿದರೆ ಮುಸ್ಲಿಮ್‌ ಮಹಿಳೆ ಆ ನಿರ್ದಿಷ್ಟ ಉಡುಪನ್ನು ಧರಿಸುವುದು ಕಡ್ಡಾಯವಾಗುತ್ತದೆ. ಇಷ್ಟವಿಲ್ಲದವರೂ ಹಿಜಾಬ್‌ ಹಾಕಬೇಕಾಗುತ್ತದೆ” ಎಂದರು. ಇದಕ್ಕೆ ಪೀಠವು “ಹಾಗೆಂದರೆ, ಹಿಜಾಬ್‌, ಅಗತ್ಯ ಧಾರ್ಮಿಕ ಆಚರಣೆ ಎಂದು ನ್ಯಾಯಾಲಯ ಹೇಳಿದರೆ ಅದನ್ನು ಧರಿಸದ ಮುಸ್ಲಿಮ್ ಮಹಿಳೆಯರ ಘನತೆ ಕುಗ್ಗಿಸಿದ್ದಕ್ಕೆ ಸಮನಾಗುತ್ತದೆ ಎಂದು ನೀವು ಹೇಳುತ್ತಿದ್ದೀರಾ?” ಎಂದು ಪೀಠವು ಮರು ಪ್ರಶ್ನೆ ಹಾಕಿತು. ಇದಕ್ಕೆ ನಾವದಗಿ ಅವರು ಸಕಾರಾತ್ಮಕವಾಗಿ ಉತ್ತರಿಸಿದರು.

ಅಲ್ಲದೇ, ಮುಂದುವರೆದು “ಅದು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ. ನಮಗೆ ಬೇಕಾದುದನ್ನು ಧರಿಸುವ ಆಯ್ಕೆ ಮತ್ತು ನಮಗೆ ಬೇಡವಾದದ್ದನ್ನು ಧರಿಸದಿರುವ ಆಯ್ಕೆಗೆ ಧಕ್ಕೆ ಒದಗುತ್ತದೆ. ಧಾರ್ಮಿಕ ನಂಬಿಕೆಯುಳ್ಳ ಪ್ರತಿಯೊಬ್ಬ ಮಹಿಳೆಗೆ ಅಂತಹ ಆಯ್ಕೆ ಇದೆ. ನ್ಯಾಯಾಂಗದ ಆದೇಶದ ಮೂಲಕ ಧಾರ್ಮಿಕ ಅನುಮೋದನೆ ಸಾಧ್ಯವಿಲ್ಲ” ಎಂದರು.

ಇದಕ್ಕೂ ಮುನ್ನ ಹಿಜಾಬ್‌ ಧರಿಸುವುದು ಇಸ್ಲಾಮ್‌ನಲ್ಲಿ ಅಗತ್ಯ ಧಾರ್ಮಿಕ ಆಚರಣೆಯಲ್ಲ ಎಂಬುದರ ಸುತ್ತ ನಾವದಗಿ ವಾದಿಸಿದರು. “ಯಾವುದು ಅನಿವಾರ್ಯವಲ್ಲವೋ ಅದು ಕಡ್ಡಾಯವಲ್ಲ. ಯಾವುದು ಕಡ್ಡಾಯವಲ್ಲವೋ ಅದು ಅಗತ್ಯವಲ್ಲ. ಹೀಗಾಗಿ, ಇದು ಅಗತ್ಯ ಧಾರ್ಮಿಕ ಆಚರಣೆಯ ವ್ಯಾಪ್ತಿಗೆ ಬರುವುದಿಲ್ಲ” ಎಂದರು.

ಹಿಜಾಬ್‌ ಧರಿಸುವ ಹಕ್ಕು ಸಂವಿಧಾನದ 19(1)(ಎ) ಅಡಿ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ ಎಂಬ ಅರ್ಜಿದಾರರ ನಿಲುವು ಪರಸ್ಪರ ವಿನಾಶಕಾರಿ ಎಂದರು. “ಅರ್ಜಿದಾರರ ವಾದವನ್ನು ಅಂಗೀಕರಿಸಿದರೆ, ಹಿಜಾಬ್‌ ಧರಿಸಲು ಇಷ್ಟಪಡದ ವ್ಯಕ್ತಿಗಳು ಅದನ್ನು ಧರಿಸದಿರುವ ಮೂಲಭೂತ ಹಕ್ಕನ್ನು ಹೊಂದಿರುತ್ತಾರೆ. ಅಂದರೆ ಆಯ್ಕೆಯ ಅಂಶವಿದೆ. ಆದ್ದರಿಂದ 19(1)(ಎ) ವಾದವು ಪರಸ್ಪರ ಹಾನಿಕಾರಕ” ಎಂದರು.

ಇದಕ್ಕೆ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರು “ಒಂದೊಮ್ಮೆ 19(1) (ಎ) ಅಡಿ ಯಾರಾದರೂ ಹಿಜಾಬ್‌ ಧರಿಸಬೇಕು ಎಂದರೆ, ನೀವು ಅವರನ್ನು ನಿರ್ಬಂಧಿಸಿದರೆ ನೀವು ಅವರ ಮೂಲಭೂತ ಹಕ್ಕನ್ನು ನಿರ್ಬಂಧಿಸಿದಂತಾಗುವುದಿಲ್ಲವೇ?” ಎಂದರು. ಇದಕ್ಕೆ ನಾವದಗಿ ಅವರು ದೇಶದಲ್ಲಿ ಹಿಜಾಬ್‌ ನಿಷೇಧಿಸಿಲ್ಲ ಎಂದು ಪುನರುಚ್ಚರಿಸಿದರು. “ದೇಶದಲ್ಲಿ ಹಿಜಾಬ್‌ಗೆ ನಿಷೇಧವಿಲ್ಲ. 19(1)(ಎ) ವಿಧಿ ಅಡಿಯಲ್ಲಿ ಹಿಜಾಬ್ ಧರಿಸುವ ಹಕ್ಕು 19(2) ಅಡಿಯಲ್ಲಿ ಕೆಲವು ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ನಮ್ಮ ವಿಚಾರದಲ್ಲಿ ನಿಯಮ 11 (ಕರ್ನಾಟಕ ಶೈಕ್ಷಣಿಕ ನಿಯಮಾವಳಿ) ಸಾಂಸ್ಥಿಕ ಶಿಸ್ತಿಗೆ ಸಮಂಜಸವಾದ ನಿರ್ಬಂಧವನ್ನು ಹೊಂದಿದೆ” ಎಂದರು. ಅಲ್ಲದೇ, ಮುಸ್ಲಿಮ್‌ ವಿದ್ಯಾರ್ಥಿನಿಯರು ಕ್ಯಾಂಪಸ್‌ನಲ್ಲಿ ಹಿಜಾಬ್‌ ಧರಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದರು. “ತರಗತಿಯಲ್ಲಿ ಮತ್ತು ತರಗತಿಯ ಸಮಯದಲ್ಲಿ ಮಾತ್ರ ಹಿಜಾಬ್‌ ಧರಿಸುವಂತಿಲ್ಲ. ಅವರು ಯಾವುದೇ ಧರ್ಮದವರಾಗಿದ್ದರೂ ಎಲ್ಲರಿಗೂ ಅದು ಅನ್ವಯಿಸುತ್ತದೆ” ಎಂದರು.

ವಾದ ಪೂರ್ಣಗೊಳಿಸುವ ಸಂದರ್ಭದಲ್ಲಿ ನಾವದಗಿ ಅವರು ಶಬರಿಮಲೆ ಮತ್ತು ಇತರೆ ಪ್ರಕರಣಗಳ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಸಾಂವಿಧಾನಿಕ ನೈತಿಕತೆಯ ಭಾಗವಾಗಿ ಶಾಲೆಗಳಲ್ಲಿ ಹಿಜಾಬ್‌ ಅನ್ನು ಒಪ್ಪಿಕೊಳ್ಳಬಹುದೇ ಎಂದು ಪೀಠಕ್ಕೆ ಪ್ರಶ್ನೆ ಹಾಕಿದರು.

“ಅಂತಿಮವಾಗಿ ಯಾರಾದರೊಬ್ಬರು ನಿರ್ದಿಷ್ಟ ನಂಬಿಕೆಯ ಎಲ್ಲಾ ಮಹಿಳೆಯರು ಅದನ್ನು ಧರಿಸುವಂತೆ ಘೋಷಿಸಬೇಕು ಎಂದು ಕೋರಿ ನ್ಯಾಯಾಲಯದ ಮೆಟ್ಟಿಲೇರಿದರೆ ನಾವೆಲ್ಲರೂ ಈಗ ಅಧೀನಕ್ಕೊಳಪಡಿಸಿರುವ ಆ ವ್ಯಕ್ತಿಯ ಘನತೆಯನ್ನು ಉಲ್ಲಂಘಿಸುವುದಿಲ್ಲವೇ” ಎಂದು ಪ್ರಶ್ನಿಸಿದರು. ಇದಕ್ಕೆ ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ಅವರು “ಹಿಂದೂ ವಿವಾಹಗಳಲ್ಲಿ ಮಂಗಳಸೂತ್ರ ಧಾರಣೆ ಅಗತ್ಯ ಎಂದು ನಾವು ಹೇಳಿದರೆ ದೇಶದಲ್ಲಿನ ಎಲ್ಲಾ ಹಿಂದೂಗಳು ಕಡ್ಡಾಯವಾಗಿ ಮಂಗಳಸೂತ್ರ ಧರಿಸಬೇಕು ಎಂದರ್ಥವಲ್ಲ. ನಾವು ಕಾನೂನಿನ ಅಂಶವನ್ನು ನಿರ್ಧರಿಸುತ್ತೇವೆ ಮತ್ತು ಅಲ್ಲಿಗೇ ಸೀಮಿತಗೊಳಿಸುತ್ತೇವೆ” ಎಂದರು.

ಶಬರಿಮಲೆ ತೀರ್ಪಿಗೆ ಸಂಬಂಧಿಸಿದಂತೆ ತೀರ್ಪು ಮರುಪರಿಶೀಲನಾ ಅರ್ಜಿಯ ಇತ್ಯರ್ಥವಾಗಿದೆಯೇ ಎಂದು ಪೀಠವು ನಾವದಗಿ ಅವರನ್ನು ಪ್ರಶ್ನಿಸಿತು. ಆಗ ಅವರು “ಏಳು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ತೀರ್ಪನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ಆದರೆ, ಇಂದಿನವರೆಗೆ ಶಬರಿಮಲೆ ಪ್ರಕರಣದ ತೀರ್ಪು ಕಾನೂನಾಗಿದೆ” ಎಂದರು.

ಆಗ ಮುಖ್ಯ ನ್ಯಾಯಮೂರ್ತಿ ಅವಸ್ಥಿ ಅವರು “ಅದು ಸರಿ. ಆದರೆ, ಶಬರಿಮಲೆ ಪ್ರಕರಣದಲ್ಲಿ ವಿಸ್ತೃತ ಪೀಠಕ್ಕೆ ವರ್ಗಾಯಿಸಿರುವ ಪ್ರಶ್ನೆಗಳಿಗೆ ನಮ್ಮ ಮುಂದಿರುವ ಪ್ರಕರಣದ ಕೆಲವು ವಿಚಾರಗಳು ಸಂಧಿಸುತ್ತವೆ” ಎಂದರು.

ಕಾಲೇಜೊಂದರ ಶಿಕ್ಷಕರ ಪರವಾಗಿ ವಾದಿಸಿದ ಹಿರಿಯ ವಕೀಲ ಆರ್‌ ವೆಂಕಟರಮಣಿ ಅವರು “ಶಿಕ್ಷಕನಾಗಿ ನಾನು ತರಗತಿಯಲ್ಲಿ ಸ್ವತಂತ್ರ ಮನಸ್ಸು ಇರಲು ಬಯಸುತ್ತೇನೆ. ಶಿಸ್ತನ್ನು ತರಲು ಸರ್ಕಾರ ಮತ್ತು ಶಾಲೆಯ ಕಡೆಯಿಂದ ಯಾವುದೇ ಕ್ರಮ -ತಟಸ್ಥತೆ ಹೊಂದಿರುವವರೆಗೆ - ಅಗತ್ಯ. ಸಮುದಾಯಗಳಲ್ಲಿರುವ ವಿವಿಧ ಸ್ಥಳಗಳಿಗೆ ಸಾರ್ವಜನಿಕ ಸುವ್ಯವಸ್ಥೆಯ ಅಗತ್ಯವಿದೆ” ಎಂದರು.

ಅಗತ್ಯ ಧಾರ್ಮಿಕ ಆಚರಣೆ ಮತ್ತು ಸಂವಿಧಾನದ 25ನೇ ವಿಧಿಗೆ ಸಂಬಂಧಿಸಿದ ವಾದದ ಕುರಿತು ವೆಂಕಟರಮಣಿ ಅವರು “ಧರ್ಮದಲ್ಲಿ ಏನೇನು ಸೇರಿದೆ, ಯಾವುದು ಅಗತ್ಯ ಮತ್ತು ಯಾವುದು ಅಗತ್ಯವಲ್ಲ ಎಂಬ ವಿಚಾರದಲ್ಲಿ ಸರ್ಕಾರ ಮೂಗು ತೂರಿಸಬಾರದು. ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯದಲ್ಲಿ ಏರುಪೇರಾದಾಗ ಸರ್ಕಾರ ಮಧ್ಯಪ್ರವೇಶಿಸಬಹುದು” ಎಂದರು.

ಸಂವಿಧಾನದ 19(1)(ಎ) ವಿಧಿಯಡಿ ಅರ್ಜಿದಾರರು ಎತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು “ವಾಕ್‌ ಸ್ವಾತಂತ್ರ್ಯ ಎಂದರೆ ನಾವು ಕಗ್ಗತ್ತಲ ಕಾಲಕ್ಕೆ ಮರಳಬೇಕು ಎಂದಲ್ಲ. ನಾವು ಮುನ್ನಡೆಯಬೇಕೆ ವಿನಾ ಕಗ್ಗತ್ತಲ ಕಾಲಕ್ಕೆ ಮರಳುವುದಲ್ಲ” ಎಂದರು.

Also Read
ಅಗತ್ಯ ಧಾರ್ಮಿಕ ಆಚರಣೆ ಪರೀಕ್ಷೆಗೆ ಸಂಬಂಧಿಸಿದ ಶಬರಿಮಲೆ ತೀರ್ಪು ಈ ನೆಲದ ಕಾನೂನು: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಅವರು ಹಿಂದೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿರಲಿಲ್ಲ. ಸಾಂದರ್ಭಿಕವಾಗಿ ಹುಡುಗಿಯರ ಪೋಷಕರು ಈ ಬಗ್ಗೆ ಕೇಳಿದ್ದಾರೆ. ಹೆಣ್ಣು ಮಕ್ಕಳು ಗಾಯನ, ನೃತ್ಯ ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ನೋಡಿಕೊಳ್ಳುವಂತೆ ಪಾಲಕರು ಶಿಕ್ಷಕರಿಗೆ ತಿಳಿಸಿದ್ದರು ಎಂದರು. “ಮುಸ್ಲಿಮ್‌ ಹೆಣ್ಣು ಮಕ್ಕಳು ಹಾಡಬಾರದು ಎಂಬುದು ಅವರ ಅರ್ಥವೇ ಎಂಬುದು ನನಗೆ ಗೊತ್ತಿಲ್ಲ. ರಾಷ್ಟ್ರಗೀತೆ ಹಾಡಿದರೆ ಅವರು ಅದನ್ನು ಹಾಡಬಾರದೇ? ಇದು ಇಸ್ಲಾಮ್‌ಗೆ ವಿರುದ್ಧವೇ? ದೇಶ, ಭಾರತ ಮಾತೆ ಕುರಿತ ಭಕ್ತಿ ಗೀತೆಯ ಬಗ್ಗೆ ಹೇಳಿಕೊಟ್ಟರೆ ಅವರು ಹಾಡಬಾರದೇ? ಎಂದು ಕೇಳಿದರು.

ವಿವಿಧ ಧರ್ಮಗಳಲ್ಲಿನ ಆಚರಣೆಗಳನ್ನು ಉದಾಹರಿಸಿದ ನಾಗಾನಂದ್‌ ಅವರು ಅಗತ್ಯ ಧಾರ್ಮಿಕ ಆಚರಣೆ ಮತ್ತು ಸಾಂಸ್ಕೃತಿಕ ಅಗತ್ಯತೆಯ ನಡುವಿನ ವ್ಯತ್ಯಾಸ ಗುರುತಿಸಲು ಪ್ರಯತ್ನಿಸಿದರು. “ಇಸ್ಲಾಮ್‌ನಲ್ಲಿ ನೀವು ಪ್ರಾರ್ಥಿಸಬೇಕು. ಪ್ರಾರ್ಥಿಸಿ. ಬೆಳಗಿನ ಜಾವ ಐದು ಗಂಟೆಯಲ್ಲಿ ಧ್ವನಿವರ್ಧಕಗಳಲ್ಲಿ ಕೂಗುತ್ತಾ ಪ್ರಾರ್ಥಿಸಲು ಬಯಸಿದರೆ, ನನಗೆ ಬೆಳಗ್ಗೆ ಏಳಲು ಇಚ್ಛೆಯಿಲ್ಲ ಎಂದು ನಾನು ಹೇಳಬಹುದು. ನಿಮ್ಮ ಧರ್ಮ ಆಚರಣೆಗಾಗಿ ನೀವು ಮತ್ತೊಬ್ಬರ ಶಾಂತಿಗೆ ಭಂಗ ಉಂಟು ಮಾಡಿದರೆ ಎಲ್ಲೆ ಎಲ್ಲಿರುತ್ತದೆ?” ಎಂದು ಪ್ರಶ್ನಿಸಿದರು. ನಾಳೆ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದುವರಿಯಲಿದೆ.

Related Stories

No stories found.
Kannada Bar & Bench
kannada.barandbench.com