
ಬಿಡುಗಡೆಗೆ ಸಜ್ಜಾಗಿರುವ ʼಹಾಲ್ʼ ಮಲಯಾಳಂ ಚಿತ್ರದ ಕೆಲ ದೃಶ್ಯಗಳನ್ನು ಕತ್ತರಿಸುವಂತೆ ಅಥವಾ ಮಾರ್ಪಡಿಸುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಫ್‌ಸಿ) ಸೂಚಿಸಿರುವುದು ಸಮರ್ಥನೀಯವೇ ಎಂಬುದನ್ನು ನಿರ್ಧರಿಸುವುದಕ್ಕಾಗಿ ಅಕ್ಟೋಬರ್ 25ರ ಸಂಜೆ ಚಿತ್ರ ವೀಕ್ಷಿಸುವುದಾಗಿ ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಜುಬಿ ಥಾಮಸ್ ಮತ್ತಿತತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಚಲನಚಿತ್ರದಲ್ಲಿ ಕಂಡುಬರುವ ಸಂಸ್ಥೆಯೊಂದರ ಹೆಸರನ್ನು ಮಸುಕುಗೊಳಿಸುವುದು, ಗೋಮಾಂಸ ಬಿರಿಯಾನಿ ತಿನ್ನುವ ದೃಶ್ಯವನ್ನು ತೆಗೆದುಹಾಕುವುದು ಮತ್ತು ಪ್ರಮುಖ ನಟಿ ಮುಸ್ಲಿಂ ಉಡುಪಿನಲ್ಲಿ ಕಾಣಿಸಿಕೊಳ್ಳುವ ಹಾಡಿನ ಸನ್ನಿವೇಶವನ್ನು ತೆಗೆದುಹಾಕುವುದು ಸೇರಿದಂತೆ ಆರು ಮಾರ್ಪಾಡುಗಳನ್ನು ಸಿಬಿಎಫ್‌ಸಿ ಸೂಚಿಸಿತ್ತು. ಸೆನ್ಸಾರ್ ಮಂಡಳಿಯ ಕೆಲ ದೃಶ್ಯಗಳನ್ನು ಕತ್ತರಿಸಲು ಅಥವಾ ಮಾರ್ಪಡಿಸಲು ಸೂಚಿಸಿದರೆ, ಚಿತ್ರಕ್ಕೆ 'ಎ' (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ನೀಡುವುದಾಗಿ ಅದು ಹೇಳಿತ್ತು. ಇದನ್ನು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಕಳೆದ ವಿಚಾರಣೆ ವೇಳೆ ಚಿತ್ರ ವೀಕ್ಷಿಸುವುದಾಗಿ ನ್ಯಾಯಮೂರ್ತಿ ವಿ ಜಿ ಅರುಣ್ ಹೇಳಿದ್ದರು.
ಅಕ್ಟೋಬರ್ 25, ಶನಿವಾರ ಅರ್ಜಿದಾರರಾದ ಚಲನಚಿತ್ರ ನಿರ್ಮಾಪಕರು ಮತ್ತು ಪ್ರತಿವಾದಿಯಾದ ಸಿಬಿಎಫ್‌ಸಿಯ ಸದಸ್ಯರು ಮತ್ತವರ ವಕೀಲರ ಸಮ್ಮುಖದಲ್ಲಿ ಚಿತ್ರ ವೀಕ್ಷಿಸುವುದಾಗಿ ನ್ಯಾಯಾಲಯ ಮಂಗಳವಾರ ತಿಳಿಸಿದ್ದು ಪದಮುಗಲ್ ಕಲರ್ ಪ್ಲಾನೆಟ್ ಸ್ಟುಡಿಯೋದಲ್ಲಿ ಪ್ರದರ್ಶನ ನಡೆಯುವ ಸಾಧ್ಯತೆಯಿದೆ. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 30, 2025ರಂದು ನಡೆಯಲಿದೆ.
ಹಾಲ್ ಚಿತ್ರ ಮುಸ್ಲಿಂ ಹುಡುಗ ಮತ್ತು ಕ್ರಿಶ್ಚಿಯನ್ ಹುಡುಗಿಯ ನಡುವಿನ ಅಂತರ್ಧರ್ಮೀಯ ಪ್ರೇಮಕಥೆಯನ್ನು ಹೇಳುತ್ತದೆ. ಶೇನ್ ನಿಗಮ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಕ್ಯಾಥೋಲಿಕ್ ಕಾಂಗ್ರೆಸ್ ತಮರಚ್ಚೇರಿ ಡಯಾಸಿಸ್ ಕೂಡ ವಿರೋಧಿಸಿದ್ದು ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆಗೆ ನ್ಯಾಯಾಲಯ ಸಮ್ಮತಿಸಿತ್ತು. ಚಿತ್ರದಲ್ಲಿ ಕೆಲ ಧಾರ್ಮಿಕ ನಾಯಕರನ್ನು ನಕಾರಾತ್ಮಕವಾಗಿ ಬಿಂಬಿಸಿದ್ದು ಲವ್ ಜಿಹಾದ್ ಉತ್ತೇಜಿಸುವಂತಿದೆ ಎಂದು ಕ್ರೈಸ್ತ ಸಂಘಟನೆ ಹೇಳಿತ್ತು.