
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್‌ಗೆ ಮೈಸೂರಿಗೆ ತೆರಳಲು ಬೆಂಗಳೂರಿನ ಸತ್ರ ನ್ಯಾಯಾಲಯವು ಮತ್ತೆ ಶುಕ್ರವಾರ ಅನುಮತಿಸಿದೆ.
ದರ್ಶನ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು 57ನೇ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೈಶಂಕರ್ ಪುರಸ್ಕರಿಸಿದ್ದಾರೆ.
ಜನವರಿ 24ರಿಂದ ಫೆಬ್ರವರಿ 24ರವರೆಗೆ ಮೈಸೂರು, ಧರ್ಮಸ್ಥಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಲು ದರ್ಶನ್‌ಗೆ ಅನುಮತಿ ನೀಡುವಂತೆ ಅವರ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನಂತರ ಜನವರಿ 28ರಿಂದ ಫೆಬ್ರವರಿ 10ರವರೆಗೆ ಮೈಸೂರಿಗೆ ತೆರಳಿ ತನ್ನ ವೈದ್ಯರನ್ನು ಭೇಟಿ ಮಾಡಲು, ಫಾರ್ಮ್ ಹೌಸ್ ಹಾಗೂ ತಾಯಿ ಮನೆಯಲ್ಲಿ ನೆಲೆಸಲು ಅನುಮತಿ ನೀಡುವಂತೆ ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಈ ಎರಡೂ ಅರ್ಜಿಗಳನ್ನು ತಿರಸ್ಕರಿಸುವಂತೆ ಪ್ರಾಸಿಕ್ಯೂಷನ್ ಪರ ವಕೀಲರು ಮನವಿ ಮಾಡಿದ್ದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಜನವರಿ 28ರಿಂದ ಫೆಬ್ರವರಿ 10ರವರೆಗೆ ಕೇವಲ ಮೈಸೂರಿಗೆ ಪ್ರಯಾಣಿಸಲು ದರ್ಶನ್‌ಗೆ ಅನುಮತಿ ನೀಡಿ ಆದೇಶಿಸಿತು. ಈ ಮೂಲಕ ಮೂರನೇ ಬಾರಿ ಮೈಸೂರಿಗೆ ತೆರಳಲು ನ್ಯಾಯಾಲಯ ಅನುಮತಿಸಿದೆ. ಈ ಹಿಂದೆ ಎರಡು ಬಾರಿಗೆ ಮೈಸೂರಿಗೆ ತೆರಲು ದರ್ಶನ್‌ಗೆ ನ್ಯಾಯಾಲಯ ಅನುಮತಿಸಿ ಆದೇಶಿಸಿತ್ತು.