ಮೈಸೂರಿನಲ್ಲಿ ಚಿಕಿತ್ಸೆ ಪಡೆಯಲು, ತಾಯಿ ಜೊತೆ ಸಮಯ ಕಳೆಯಲು ನಟ ದರ್ಶನ್‌ಗೆ ಅನುಮತಿಸಿದ ಬೆಂಗಳೂರಿನ ಸತ್ರ ನ್ಯಾಯಾಲಯ

“ದರ್ಶನ್‌ ಸಲ್ಲಿಸಿರುವ ಅರ್ಜಿಯನ್ನು ಭಾಗಶಃ ಪುರಸ್ಕರಿಸಿಲಾಗಿದೆ. ಡಿಸೆಂಬರ್‌ 20ರಿಂದ ಜನವರಿ 5ರವರೆಗೆ ಮೈಸೂರಿಗೆ ತೆರಳಲು ದರ್ಶನ್‌ಗೆ ಅನುಮತಿಸಲಾಗಿದೆ” ಎಂದು ನ್ಯಾಯಾಲಯವು ಆದೇಶಿಸಿದೆ.
Actor Darshan with his girlfriend Pavitra Gowda
Actor Darshan with his girlfriend Pavitra Gowda
Published on

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್‌ ಅವರಿಗೆ ಡಿಸೆಂಬರ್‌ 20ರಿಂದ ಜನವರಿ 5ರವರೆಗೆ 15 ದಿನ ಮೈಸೂರಿಗೆ ತೆರಳಲು ಬೆಂಗಳೂರಿನ ಸತ್ರ ನ್ಯಾಯಾಲಯವು ಗುರುವಾರ ಅನುಮತಿಸಿದೆ.

ಅನಾರೋಗ್ಯ ಪೀಡಿತರಾಗಿರುವ ತಾಯಿ ಜೊತೆ ಕಾಲಕಳೆಯಲು ಹಾಗೂ ಬೆನ್ನುಹುರಿ ಸಮಸ್ಯೆಗೆ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹಾಗೂ ತನ್ನ ಫಾರ್ಮ್‌ ಹೌಸ್‌ಗೆ ಭೇಟಿ ನೀಡಲು ಮೈಸೂರಿಗೆ ತೆರಳಲು ಅನುಮತಿಸಬೇಕು ಎಂದು ಕೋರಿ ದರ್ಶನ್‌ ಸಲ್ಲಿಸಿದ್ದ ಅರ್ಜಿಯನ್ನು 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಜೈಶಂಕರ್‌ ಅವರು ಪುರಸ್ಕರಿಸಿದ್ದಾರೆ.

“ದರ್ಶನ್‌ ಸಲ್ಲಿಸಿರುವ ಅರ್ಜಿಯನ್ನು ಭಾಗಶಃ ಪುರಸ್ಕರಿಸಿಲಾಗಿದೆ. ಡಿಸೆಂಬರ್‌ 20ರಿಂದ ಜನವರಿ 5ರವರೆಗೆ ಮೈಸೂರಿಗೆ ತೆರಳಲು ದರ್ಶನ್‌ಗೆ ಅನುಮತಿಸಲಾಗಿದೆ” ಎಂದು ನ್ಯಾಯಾಲಯವು ಆದೇಶಿಸಿದೆ.

ಡಿಸೆಂಬರ್‌ 13ರಂದು ಜಾಮೀನು ಆದೇಶ ಪ್ರಕಟಿಸುವಾಗ ಹೈಕೋರ್ಟ್‌, ದರ್ಶನ್‌ ಸೇರಿ ಎಲ್ಲಾ ಆರೋಪಿಗಳು ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗುವಂತಿಲ್ಲ ಎಂಬ ಷರತ್ತು ವಿಧಿಸಿದೆ. ಈ ಹಿನ್ನೆಲೆಯಲ್ಲಿ ಈ ಷರತ್ತಿನಲ್ಲಿ ವಿನಾಯಿತಿ ನೀಡುವಂತೆ ಕೋರಿದ್ದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

Also Read
ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ಗೆ ಜಾಮೀನು ನೀಡುವ ವೇಳೆ ನ್ಯಾಯಾಲಯ ಪರಿಗಣಿಸಿದ ಅಂಶಗಳೇನು?

ಇದೇ ಸಂದರ್ಭದಲ್ಲಿ 6ನೇ ಆರೋಪಿ ಜಗದೀಶ್‌ ಅಲಿಯಾಸ್‌ ಜಗ್ಗ ಮತ್ತು 7ನೇ ಅನುಕುಮಾರ್‌ ಅಲಿಯಾಸ್‌ ಅನುಗೆ ಚಿತ್ರದುರ್ಗಕ್ಕೆ ತೆರಳಲು ಅನುಮತಿಸಿದ್ದು, ಜನವರಿ 10ರಂದು ಪ್ರಕರಣದ ವಿಚಾರಣೆಯ ದಿನ ನ್ಯಾಯಾಲಯಕ್ಕೆ ಹಾಜರಾಗುವಂತೆ ನಿರ್ದೇಶಿಸಿದೆ.

14ನೇ ಆರೋಪಿ ಪ್ರದೋಶ್‌ ಎಸ್.ರಾವ್‌ ಅವರು ಮಹೀಂದ್ರಾ ಸ್ಕಾರ್ಪಿಯೊ ಕಾರನ್ನು ಬಿಡುಗಡೆ ಮಾಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿ, ಕಾರು ಬಿಡುಗಡೆಗೆ ಆದೇಶಿಸಿದೆ. ತನಿಖೆಯ ಸಂದರ್ಭದಲ್ಲಿ ಪೊಲೀಸರು ವಾಹನಗಳನ್ನು ಜಫ್ತಿ ಮಾಡಿದ್ದಾರೆ.

Attachment
PDF
Darshan Bail condition relaxed
Preview
Kannada Bar & Bench
kannada.barandbench.com