ಮೊಟೊರೊಲಾ ಮೊಬೈಲ್‌ ಬ್ರ್ಯಾಂಡ್‌ ವಿರುದ್ದ ಮಾನಹಾನಿ ಸುದ್ದಿ ಪೋಸ್ಟ್‌ ಮಾಡದಂತೆ ಬೆಂಗಳೂರು ನ್ಯಾಯಾಲಯ ನಿರ್ಬಂಧ

ಮೊಟೊರೊಲಾ ಫೋನ್‌ಗಳ ಬಗ್ಗೆ ಯಾವುದೇ ತೆರನಾದ ನಕಾರಾತ್ಮಕ, ನಿಂದನಾತ್ಮಕ ವಿಚಾರಗಳ ಪ್ರಚಾರ, ಪ್ರಸಾರ, ಹಂಚಿಕೆ, ಸ್ಟ್ರೀಮಿಂಗ್‌ ಮಾಡದಂತೆ ಸಾಮಾಜಿಕ ಮಾಧ್ಯಮ ಮಧ್ಯಸ್ಥಿಕೆ ಸಂಸ್ಥೆಗಳಿಗೆ ನ್ಯಾಯಾಲಯ ಆದೇಶಿಸಿದೆ.
Motorola phone
Motorola phone
Published on

ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಮೊಟೊರೊಲಾ ಮೊಬೈಲ್‌ ಫೋನ್‌ಗಳ ಬಗ್ಗೆ ಮಾನಹಾನಿ ವಿಚಾರ ಪ್ರಚಾರ ಮಾಡದಂತೆ ವಿಷಯ ಸೃಷ್ಟಿಕರ್ತರು (ಕಂಟೆಂಟ್‌ ಕ್ರಿಯೇಟರ್‌) ಮತ್ತು ಇನ್‌ಫ್ಲುಯನ್ಸರ್‌ಗಳ ವಿರುದ್ಧ ಬೆಂಗಳೂರಿನ ಸತ್ರ ನ್ಯಾಯಾಲಯವು ಈಚೆಗೆ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ.

ಮೊಟೊರೊಲಾ ಫೋನ್‌ಗಳ ಬಗ್ಗೆ ಯಾವುದೇ ತೆರನಾದ ನಕಾರಾತ್ಮಕ, ನಿಂದನಾತ್ಮಕ ವಿಚಾರಗಳ ಪ್ರಚಾರ, ಪ್ರಸಾರ, ಹಂಚಿಕೆ, ಸ್ಟ್ರೀಮಿಂಗ್‌ ಮಾಡದಂತೆ ಸಾಮಾಜಿಕ ಮಾಧ್ಯಮ ಮಧ್ಯಸ್ಥಿಕೆ ಸಂಸ್ಥೆಗಳಿಗೆ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಬಿ ಎಸ್‌ ವೇದಮೂರ್ತಿ ಆದೇಶಿಸಿದ್ದಾರೆ.

ಮೊಟೊರೊಲಾ ಫೋನ್‌ಗಳ ಬಗ್ಗೆ ಪ್ರಚಾರ/ಪ್ರಸಾರ/ ಹಂಚಿಕೆ ಮಾಡಿರುವ ಸುದ್ದಿಗಳನ್ನು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆ ಮತ್ತು ಸರ್ಚ್‌ ಎಂಜಿನ್‌ಗಳಿಂದ ಮುಂದಿನ ವಿಚಾರಣೆ ಜೂನ್‌ 2ರ ಒಳಗೆ ತೆಗೆಯಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಎಕ್ಸ್‌ ಕಾರ್ಪ್‌, ಇನ್‌ಸ್ಟಾಗ್ರಾಂ, ಗೂಗಲ್‌ ಎಲ್‌ಎಲ್‌ಸಿ, ಫೇಸ್‌ಬುಕ್‌, ಮೆಟಾ ಪ್ಲಾಟ್‌ಫಾರ್ಮ್‌ಗಳು, ಥ್ರೆಡ್ಸ್‌ ಮತ್ತು ವಿವಿಧ ಯೂಟ್ಯೂಬ್‌ ಚಾನಲ್‌ಗಳು ಹಾಗೂ ವಿವಿಧ ವಿಷಯ ಸೃಷ್ಟಿಕರ್ತರ ವಿರುದ್ಧ ಮೊಟೊರೊಲಾ ಮೊಬಿಲಿಟಿ ಇಂಡಿಯಾವು ದಾವೆ ಹೂಡಿದೆ.

ಮೊಟೊರೊಲಾ ಫೋನ್‌ ಬಳಕೆಗೆ ಯೋಗ್ಯವಲ್ಲ, ಸ್ಫೋಟಗೊಳ್ಳುವುದರಿಂದ ಅದನ್ನು ಖರೀದಿಸದಂತೆ ಗ್ರಾಹಕರಿಗೆ ಎಚ್ಚರಿಸಿ ನೂರಾರು ವಿಡಿಯೊ, ಪೋಸ್ಟ್‌, ರೀಲ್‌, ಟ್ವೀಟ್‌ಗಳನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಸುದ್ದಿ ವೇದಿಕೆಗಳಲ್ಲಿ ಅಪ್‌ಲೋಡ್‌ ಮಾಡಲಾಗಿದೆ ಎಂದು ಕಂಪನಿ ಆರೋಪಿಸಿದೆ. ಈ ವಿಡಿಯೊಗಳನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದು, ಬ್ರ್ಯಾಂಡ್‌ ವಿರುದ್ಧ ಪ್ರಚೋದನಾಕಾರಿ ಮತ್ತು ಆಕ್ಷೇಪಾರ್ಹ ಭಾಷೆ ಬಳಸಿದ್ದಾರೆ ಎಂದು ದೂರಿನಲ್ಲಿ ಆಕ್ಷೇಪಿಸಲಾಗಿದೆ.  

ಮೊಟೊರೊಲಾ ಉತ್ಪನ್ನದ ಘನತೆ, ಮಾರುಕಟ್ಟೆ ಮನೋಭಾವ, ಮಾರಾಟಕ್ಕೆ ಹಾನಿ ಮಾಡುವ ಉದ್ದೇಶದಿಂದ ಸುಳ್ಳು ಮತ್ತು ವ್ಯವಸ್ಥಿತವಾದ ದುರುದ್ದೇಶಪೂರಿತ ಪೋಸ್ಟ್‌ಗಳನ್ನು ಮಾಡಲಾಗಿದೆ. ಜಾಗತಿಕ ಬ್ರ್ಯಾಂಡ್‌ ಆದ ತಾನು ಜನರ ನಡುವೆ ಗಳಿಸಿರುವ ನಂಬುಗೆ ಮತ್ತು ವಿಶ್ವಾಸಕ್ಕೆ ಹಾನಿ ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ಮೊಟೊರೊಲಾ ಆಕ್ಷೇಪಿಸಿದೆ.

ಮೋಟೊರೋಲಾವನ್ನು ವಕೀಲ ಬಿ ಎಸ್‌ ಭರತ್‌ ಗೌಡ ಪ್ರತಿನಿಧಿಸಿದ್ದರು.

Attachment
PDF
Motorola Mobility India Pvt Ltd vs X Corp
Preview
Kannada Bar & Bench
kannada.barandbench.com