
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ಸ್ಟೋನಿ ಬ್ರೂಕ್ ರೆಸ್ಟುರಂಟ್ ಮಾಲೀಕ ವಿನಯ್, ಮೊದಲನೇ ಆರೋಪಿ ಪವಿತ್ರಗೌಡ ಸಹಾಯಕ ಪವನ್ ಹಾಗೂ ಚಿತ್ರದುರ್ಗದ ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ರಾಘವೇಂದ್ರ ಸೇರಿ ಐವರಿಗೆ ಬೆಂಗಳೂರಿನ ಸತ್ರ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಪ್ರಕರಣದಲ್ಲಿನ ಎಲ್ಲಾ ಆರೋಪಿಗಳಿಗೆ ಜಾಮೀನು ದೊರೆತಂತಾಗಿದೆ.
ಬೆಂಗಳೂರಿನ 3ನೇ ಆರೋಪಿ ಪುಟ್ಟಸ್ವಾಮಿ ಅಲಿಯಾಸ್ ಪವನ್, 4ನೇ ಆರೋಪಿ ರಾಘವೇಂದ್ರ, 5ನೇ ಆರೋಪಿ ನಂದೀಶ್, 9ನೇ ಆರೋಪಿ ಮತ್ತು 10ನೇ ಆರೋಪಿ ವಿ ವಿನಯ್ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು 57ನೇ ಹೆಚ್ಚವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಜೈಶಂಕರ್ ಪುರಸ್ಕರಿಸಿದ್ದಾರೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಪವಿತ್ರಾ ಗೌಡ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಪವನ್, ರೇಣುಕಾಸ್ವಾಮಿಯನ್ನು ಪತ್ತೆ ಮಾಡಿ, ಚಿತ್ರದುರ್ಗದಿಂದ ಕರೆತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ. ಇನ್‌ಸ್ಟಾಗ್ರಾಂ ಖಾತೆಯ ಮೂಲಕ ನಿರಂತರವಾಗಿ ರೇಣುಕಾಸ್ವಾಮಿಯ ಜೊತೆ ಸಂಪರ್ಕದಲ್ಲಿದ್ದ ಆರೋಪವನ್ನು ಈತ ಎದುರಿಸುತ್ತಿದ್ದಾನೆ. ರಾಘವೇಂದ್ರ ಎಂಬಾತ ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿದ್ದು, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರುವಲ್ಲಿ ಪ್ರಮುಖನಾಗಿದ್ದ. ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸಿದ ಹಾಗೂ ಮೃತದೇಹವನ್ನು ಸ್ಥಳಾಂತರಿಸಿದ ಆರೋಪ ನಂದೀಶ್ ಮೇಲಿದೆ.
ಅದೇ ರೀತಿ, ದರ್ಶನ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಧನರಾಜ್ ಡಿ ಅಲಿಯಾಸ್ ರಾಜು ಎಂಬಾತ ಮೆಗ್ಗರ್ ಯಂತ್ರದಿಂದ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಿರುವುದು ಮತ್ತು ಮೃತದೇಹ ಸ್ಥಳಾಂತರ ಮಾಡಿದ ಆರೋಪ ಎದುರಿಸುತ್ತಿದ್ದಾನೆ.
ದರ್ಶನ್ ಅವರ ನಿಕಟವರ್ತಿಯಾಗಿದ್ದ ಸ್ಟೋನಿಬ್ರೂಕ್ ರೆಸ್ಟುರಂಟ್ ಮಾಲೀಕ ವಿ ವಿನಯ್ ಇಡೀ ಘಟನೆಯಲ್ಲಿ ರೇಣುಕಾಸ್ವಾಮಿಯನ್ನು ಕರೆತರುವುದು, ಕೊಲೆಯ ಬಳಿಕ ಮೈಸೂರಿನಲ್ಲಿ ದರ್ಶನ್ ಭೇಟಿ ಮಾಡಿರುವುದು, ಹಣ ಪಡೆದು ಸಾಕ್ಷ್ಯ ನಾಶ ಕೃತ್ಯಕ್ಕೆ ಬಳಕೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಜೂನ್ 8ರಂದು ಘಟನೆಗೂ ಮುನ್ನ ದರ್ಶನ್, 14ನೇ ಆರೋಪಿ ಪ್ರದೋಷ್ ರಾವ್, ವಿನಯ್, ಸಾಕ್ಷಿಗಳಾದ ಚಿತ್ರನಟ ಚಿಕ್ಕಣ್ಣ ಮತ್ತಿತರರು ಸ್ಟೋನಿಬ್ರೂಕ್ ರೆಸ್ಟುರಂಟ್‌ನಲ್ಲಿ ಊಟ ಮಾಡಿದ್ದರು. ಈ ಸ್ಥಳದಲ್ಲಿ ದರ್ಶನ್‌ಗೆ ರೇಣುಕಾಸ್ವಾಮಿಯು ಚಿತ್ರದುರ್ಗದಿಂದ ಕರೆತಂದಿರುವ ವಿಚಾರವನ್ನು ವಿನಯ್ ಮೂಲಕ ಪವನ್ ತಲುಪಿಸಿದ್ದ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ. ಕೊಲೆ ನಡೆದ ಪಟ್ಟಣಗೆರೆ ಷೆಡ್ ಮಾಲೀಕರಾದ ಜಯಣ್ಣ ಅವರ ಹತ್ತಿರದ ಸಂಬಂಧಿ ವಿನಯ್ ಆಗಿದ್ದಾನೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಜೂನ್ 11ರಂದು ದರ್ಶನ್ ಮತ್ತಿತರರನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದರು. ಜೂನ್ 22ರಿಂದ ದರ್ಶನ್ ಹಾಗೂ ಇತರೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ದರ್ಶನ್‌ಗೆ ಅಕ್ಟೋಬರ್ 30ರಂದು ಹೈಕೋರ್ಟ್ ವೈದ್ಯಕೀಯ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಅಕ್ಟೋಬರ್ 14ರಂದು ವಿಚಾರಣಾಧೀನ ನ್ಯಾಯಾಲಯವು ದರ್ಶನ್, ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್‌ಗೆ ಜಾಮೀನು ನಿರಾಕರಿಸಿತ್ತು. ಎಂಟನೇ ಆರೋಪಿ ರವಿಶಂಕರ್ ಅಲಿಯಾಸ್ ರವಿ, 13ನೇ ಆರೋಪಿ ದೀಪಕ್ ಕುಮಾರ್ ಅಲಿಯಾಸ್ ದೀಪಕ್‌ಗೆ ಜಾಮೀನು ಮಂಜೂರು ಮಾಡಿತ್ತು. ಅದಕ್ಕೂ ಮುನ್ನ, ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ ಮತ್ತು ನಿಖಿಲ್ ನಾಯಕ್‌ಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಡಿಸೆಂಬರ್ 13ರಂದು ದರ್ಶನ್, ಪವಿತ್ರಾಗೌಡ, ಆರ್ ನಾಗರಾಜು, ಎಂ ಲಕ್ಷ್ಮಣ್, ಅನು ಕುಮಾರ್ ಅಲಿಯಾಸ್ ಅನು, ಜಗದೀಶ್ ಅಲಿಯಾಸ್ ಜಗ್ಗ, ಪ್ರದೋಷ್ ರಾವ್ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಪ್ರಕರಣದ ಹಿನ್ನೆಲೆ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪವಿತ್ರ ಗೌಡ, ದರ್ಶನ್ ಅಲಿಯಾಸ್ ಡಿ ಬಾಸ್, ಪುಟ್ಟಸ್ವಾಮಿ ಅಲಿಯಾಸ್ ಪವನ್, ರಾಘವೇಂದ್ರ, ನಂದೀಶ್, ಜಗದೀಶ್ ಅಲಿಯಾಸ್ ಜಗ್ಗ, ಅನುಕುಮಾರ್, ರವಿ ಶಂಕರ್ ಅಲಿಯಾಸ್ ರವಿ, ಧನರಾಜ್ ಡಿ ಅಲಿಯಾಸ್ ರಾಜು, ವಿನಯ್ ವಿ, ನಾಗರಾಜು, ಲಕ್ಷ್ಮಣ, ದೀಪಕ್, ಪ್ರದೂಷ್, ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ, ನಿಖಿಲ್ ನಾಯಕ್ ಆರೋಪಿಗಳಾಗಿದ್ದು, ಐಪಿಸಿ ಸೆಕ್ಷನ್‌ಗಳಾದ 302 (ಕೊಲೆ), 201 (ಸಾಕ್ಷ್ಯ ನಾಶ), 120 (ಬಿ) (ಕ್ರಿಮಿನಲ್ ಪಿತೂರಿ), 364 (ಅಪಹರಣ), 355 (ಕ್ರಿಮಿನಲ್ ಉದ್ದೇಶದಿಂದ), 384 (ಸುಲಿಗೆ), 143 (ಅಕ್ರಮ ಕೂಟ), 147 (ದೊಂಬಿ), 148 (ಮಾರಕಾಸ್ಟ್ರ ಬಳಕೆ) ಜೊತೆಗೆ 149 (ಏಕೈಕ ಉದ್ದೇಶದಿಂದ ಎಲ್ಲರೂ ಒಟ್ಟುಗೂಡಿ ಕೃತ್ಯ ಎಸಗಿರುವುದು) ಅಡಿ ಪ್ರಕರಣ ದಾಖಲಿಸಲಾಗಿದೆ.