

ಹಿಂದುತ್ವವಾದಿ ಸಂಘಟನೆ ಆರ್‌ಎಸ್‌ಎಸ್ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವರಾದ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಹಾಗೂ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್‌ಗೆ ಬೆಂಗಳೂರು ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. [ತೇಜಸ್ ಎ ಮತ್ತು ಪ್ರಿಯಾಂಕ್ ಖರ್ಗೆ ಇನ್ನಿತರರ ನಡುವಣ ಪ್ರಕರಣ]
ಎ ತೇಜಸ್ ಎಂಬುವವರು ನೀಡಿದ್ದ ಖಾಸಗಿ ದೂರಿನ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶ ಕೆ ಎನ್ ಶಿವಕುಮಾರ್ ಶನಿವಾರ ಆದೇಶ ಹೊರಡಿಸಿದರು. ಪ್ರಕರಣದ ಮುಂದಿನ ವಿಚಾರಣೆ 14.01.2026ರಂದು ನಡೆಯಲಿದೆ.
ದಿನಾಂಕ 4- 10- 2025 ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಪ್ರಕರಣದ ಮೊದಲನೇ ಆರೋಪಿ, ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಪತ್ರ ಬರೆದು ಆರ್‌ಎಸ್‌ಎಸ್ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಬೇಕು ಎಂದು ಕೋರಿದ್ದರು. ಸರ್ಕಾರಿ ಶಾಲೆ, ಸರ್ಕಾರಿ ಮೈದಾನಗಳಲ್ಲಿ ಅದು ಯಾವುದೇ ಬೈಠಕ್ ನಡೆಸದಂತೆ ನಿರ್ಬಂಧ ವಿಧಿಸಬೇಕು ಎಂದು ಹೇಳಿದ್ದರು. ಸಮಾಜದಲ್ಲಿ ಆರ್‌ಎಸ್‌ಎಸ್ ಸದಸ್ಯರು ಭಯದ ವಾತಾವರಣ ಉಂಟು ಮಾಡುತ್ತಾರೆ. ಮಕ್ಕಳು ಮತ್ತು ಯುವಕರಲ್ಲಿ ನಕಾರಾತ್ಮಕ ಶಕ್ತಿ ತುಂಬುತ್ತಾರೆ. ಮೂಲಭೂತವಾದಿ ಸಿದ್ಧಾಂತ ಹೊಂದಿರುತ್ತಾರೆ. ಹೀಗಾಗಿ ಅವರ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಬೇಕು ಎಂದು ಪತ್ರ ಬರೆದಿದ್ದು ಅದನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು ಎಂದು ದೂರುದಾರರು ಆರೋಪಿಸಿದ್ದರು.
ಅಲ್ಲದೆ ದಿನಾಂಕ 13.10.2025 ರಂದು “ಆರ್‌ಎಸ್‌ಎಸ್ ಸದಸ್ಯನ ಸ್ನೇಹಿತನಾಗಿರಲಿ, ನಿಮ್ಮ ಕುಟುಂಬದ ಸದಸ್ಯನಾಗಿರಲಿ, ಸಹೋದರನಾಗಿರಲಿ ಅಥವಾ ಮಗನಾಗಿರಲಿ — ಅವರು ನಿಜವಾದ ವಿಷಕಾರಿ ವ್ಯಕ್ತಿಗಳು ಮತ್ತು ನಿಜವಾದ ನಿಂದಕರಾಗಿದ್ದಾರೆ ಕೇರಳದಲ್ಲಿ ತಂತ್ರಜ್ಞರೊಬ್ಬರ ಆತ್ಮಹತ್ಯೆಗೆ ಅದು ಹೊಣೆಗಾರ. ಅವರಿಂದ ಲೈಂಗಿಕ ದೌರ್ಜನ್ಯ ಹಾಗೂ ಹಿಂಸೆ ನಡೆದಿದೆ” ಎಂದು ಪ್ರಕರಣದ ಮೊದಲನೇ ಆರೋಪಿ ಟ್ವೀಟ್ ಮಾಡಿದ್ದರು ಎಂದಿದ್ದರು. ಅಲ್ಲದೆ 14- 10- 2025ರಂದು ಕೂಡ ಆರ್‌ಎಸ್‌ಎಸ್ ವಿರುದ್ಧ ಟ್ವೀಟ್ ಮಾಡಿದ್ದರು ಎಂಬುದಾಗಿ ಅವರು ವಿವರಿಸಿದ್ದರು.
ಈ ಟ್ವೀಟನ್ನು ಅನುಕರಿಸಿದ್ದ ಎರಡನೇ ಆರೋಪಿ ಹಾಗೂ ಸಚಿವ ದಿನೇಶ್ ಗುಂಡೂರಾವ್ ಅವರು ಪನ್ಸಾರೆ, ಗೌರಿ ಲಂಕೇಶ್, ಕಲಬುರ್ಗಿ ಅವರ ಹತ್ಯೆ ಪ್ರಸ್ತಾಪಿಸಿ ಆರ್‌ಎಸ್‌ಎಸ್ ವಿರುದ್ಧ ಆರೋಪ ಮಾಡಿದ್ದರು. ಮೂರನೇ ಆರೋಪಿ ಮಹಮ್ಮದ್ ನಲಪಾಡ್ ಅವರು ಯೂಟ್ಯೂಬ್ ವಾಹಿನಿಯೊಂದರಲ್ಲಿ ಮಾತನಾಡುತ್ತ ಆರ್‌ಎಸ್ಎಸ್ ವಿರುದ್ಧ ಅವಹೇಳನ ಮಾಡಿದ್ದರು ಎಂದು ಅರ್ಜಿದಾರ ಹೇಳಿದ್ದರು.
ಇವರ ಹೇಳಿಕೆಗಳನ್ನು ರಾಜ್ಯದಾದ್ಯಂತ ಸಾರ್ವಜನಿಕರು ಓದಿದ್ದು, ವೀಕ್ಷಿಸಿದ್ದು ಇದು ಆರ್‌ಎಸ್‌ಎಸ್ ಬಗ್ಗೆ ಕೀಳುಭಾವನೆ ಉಂಟು ಮಾಡುವಂತೆ ಮಾಡಿದೆ. ಆರೋಪಿತರು ರಾಜ್ಯದ ಸಚಿವರಾಗಿದ್ದು, ಸಾರ್ವಜನಿಕರ ಮೇಲೆ ಪ್ರಭಾವ ಬೀರುವ ಹುದ್ದೆಯಲ್ಲಿ ಇರುವುದರಿಂದ ಅವರು ನೀಡಿರುವ ಹೇಳಿಕೆಗಳಿಂದ ಸಾರ್ವಜನಿಕರು ಪ್ರಭಾವಿತರಾಗುತ್ತಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಕೋರಿದ್ದರು.