ರೇಣುಕಾಸ್ವಾಮಿ ಕೊಲೆ: ಪ್ರಾಸಿಕ್ಯೂಷನ್‌ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಯತ್ನವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ

ತಾನು ನೀಡಿದ ಹೇಳಿಕೆ ಕುರಿತಂತೆ ಸಂದೀಪ್ ಪ್ರತ್ಯೇಕ ಪ್ರಮಾಣ ಪತ್ರ ಸಲ್ಲಿಸಬೇಕು. ಅವರು ಪ್ರಮಾಣ ಪತ್ರ ಸಲ್ಲಿಸಿದ ನಂತರ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಆದೇಶಿಸಿರುವ ನ್ಯಾಯಾಲಯ.
Renukaswamy
Renukaswamy
Published on

ನಟ ದರ್ಶನ್ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ‌ ಪ್ರಕರಣದ ಪ್ರಾಸಿಕ್ಯೂಷನ್ ಸಾಕ್ಷಿಯ (ತನಿಖಾಧಿಕಾರಿ‌ ಪಟ್ಟಿ ಮಾಡಿರುವ ಸಾಕ್ಷಿ) ಮೇಲೆ ಪ್ರಭಾವ ಬೀರುವ ಮತ್ತು ಸಾಕ್ಷ್ಯ ತಿರುವ ಯತ್ನ ನಡೆದಿದೆ.

ಈ ವಿಚಾರವನ್ನು ಒತ್ತಡಕ್ಕೆ ಒಳಗಾದ ಸಾಕ್ಷಿಯೇ ನ್ಯಾಯಾಲಯದ‌ ಮುಂದೆ ಬಹಿರಂಗಪಡಿಸಿದರು.‌ ಅದನ್ನು ಗಂಭೀರವಾಗಿ ಪರಿಗಣಿಸಿರುವ ನಗರದ 58ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸತ್ರ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದ ಅಥವಾ ಸಂಬಂಧಪಡದ ವ್ಯಕ್ತಿಯಾಗಲಿ ಯಾವುದೇ ರೀತಿಯಲ್ಲಿ ಸಾಕ್ಷ್ಯ ತಿರುಚಲು ಪ್ರಯತ್ನಿಸಿದರೆ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಠಿಣ ಎಚ್ವರಿಕೆ ನೀಡಿದೆ.

ಅಲ್ಲದೇ, ಸಾಕ್ಷಿಗೆ ವಿಚಾರಣೆಯ ಉದ್ದಕ್ಕೂ ಅಗತ್ಯ ರಕ್ಷಣೆ ಒದಗಿಸುವಂತೆ ಪ್ರಕರಣದ ತನಿಖಾಧಿಕಾರಿಗಳಿಗೆ ನಿರ್ದೇಶನ‌ ನೀಡಿತು. ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಾಸಿಕ್ಯೂಷನ್ ಸಾಕ್ಷಿಗಳ ವಿಚಾರಣೆಯನ್ನು ನ್ಯಾಯಾಲಯ ಮಂಗಳವಾರವೂ ಮುಂದುವರಿಸಿತ್ತು.

ಈ ವೇಳೆ ನ್ಯಾಯಾಲಯವು 49ನೇ ಸಾಕ್ಷಿಯಾಗಿರುವ ಚಿತ್ರದುರ್ಗದ ದುರ್ಗಾ ಬಾರ್ ರೆಸ್ಟೋರೆಂಟ್‌ನ (ರೇಣುಕಾಸ್ವಾಮಿ ಮತ್ತು ಆತನನ್ನು ಅಪಹರಿಸಿದ ಆರೋಪಿಗಳು ಊಟ ಮಾಡಿದ) ಕ್ಯಾಷಿಯರ್‌ ಸಂದೀಪ್‌ ಮಂಗಳವಾರ ವಿಚಾರಣೆಗೆ  ಹಾಜರಾಗಿದ್ದರು. ಆತನನ್ನು ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್, ಮುಖ್ಯ ಪರೀಕ್ಷೆಗೆ ಸಂದೀಪ್ ಅವರನ್ನು ಗುರಿಪಡಿಸಿದರು. ಕಟಕಟೆಯಲ್ಲಿ ನಿಂತು ನ್ಯಾಯಾಲಯಕ್ಕೆ ಸತ್ಯ ನುಡಿಯುವುದಾಗಿ ಪ್ರಮಾಣ ಮಾಡಿದ ನಂತರ, ತಾನು ಒಂದು ವಿಷಯವನ್ನು ನ್ಯಾಯಾಲಯಕ್ಕೆ ಹೇಳಲು ಬಯಸಿದ್ದೇನೆ. ಅದಕ್ಕೆ ಅನುಮತಿ ನೀಡಬೇಕು ಎಂದು ಸಂದೀಪ್ ಮನವಿ ಮಾಡಿದರು. ಅದಕ್ಕೆ ನ್ಯಾಯಾಲಯವು ಅನುಮತಿಯನ್ನೂ ನೀಡಿತು.

ಆಗ ಸಂದೀಪ್,  "ನಮಗೆ ಪರಿಚಯವಿರುವ ಆಕರ್ಷ್ ಎಂಬ ವ್ಯಕ್ತಿಯ ಮೂಲಕ ದೂರವಾಣಿ ಮೂಲಕ‌ ಮಾತನಾಡಿದ ಕೆಲ ವ್ಯಕ್ತಿಗಳು, ಪ್ರಕರಣಕ್ಕೆ ಸಂಬಂಧಿಸಿದ ನೀಡುವ  ಸಾಕ್ಷ್ಯ ಹೇಳಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಕೇಳಿದ್ದಾರೆ. ಹಾಗೆಯೇ, ತಾವು ಹೇಳಿದಂತೆ ಸಾಕ್ಷ್ಯ ನುಡಿಯಬೇಕು ಎಂಬುದಾಗಿ ನನಗೆ ಸೂಚಿಸಿದರು" ಎಂದು ಹೇಳಿದರು.

Also Read
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಹೈಕೋರ್ಟ್‌ ನೋಟಿಸ್‌

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರಾದ ಸುಜಾತಾ ಅವರು,‌ ಆಕರ್ಷ್ ಎಂಬಾತನ‌ ಮೂಲಕ ಕೆಲ ಅಪರಿಚಿತ ವ್ಯಕ್ತಿಗಳು ಸಂದೀಪ್ ಸಾಕ್ಷಿಯ ಹೇಳಿಕೆಯನ್ನು ತಿರುಚಲು ಪ್ರಯತ್ನಿಸಿದ್ದಾರೆ ಎಂಬುದು ತೋರುತ್ತದೆ. ತಾನು ನೀಡಿದ ಹೇಳಿಕೆ ಕುರಿತಂತೆ ಸಂದೀಪ್ ಪ್ರತ್ಯೇಕ ಪ್ರಮಾಣ ಪತ್ರ ಸಲ್ಲಿಸಬೇಕು. ಅವರು ಪ್ರಮಾಣ ಪತ್ರ ಸಲ್ಲಿಸಿದ ನಂತರ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಆದೇಶ ಬರೆಸಿದ್ದಾರೆ.

ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದ ಅಥವಾ ಸಂಬಂಧವಿಲ್ಲದ  ವ್ಯಕ್ತಿಗಳು ಯಾವುದೇ ರೀತಿಯಲ್ಲಿ ಸಾಕ್ಷ್ಯ ತಿರುಚಿದರೆ ಯತ್ನಿಸಿದರೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

Kannada Bar & Bench
kannada.barandbench.com