ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಹೈಕೋರ್ಟ್‌ ನೋಟಿಸ್‌

ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ಅನುಮತಿ ನೀಡಿ ಆದೇಶಿಸಬೇಕು ಎಂದು ಕೋರಿದ ಪ್ರಾಸಿಕ್ಯೂಷನ್.
Darshan and Karnataka HC
Darshan and Karnataka HC
Published on

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ರೇಣುಕಾಸ್ವಾಮಿ ಅವರ ತಾಯಿ ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ನಿರಾಕರಿಸಲಾಗಿದೆ ಎಂದು ಆಕ್ಷೇಪಿಸಿ ಪ್ರಾಸಿಕ್ಯೂಷನ್‌ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಆರೋಪಿಗಳಾದ ಪವಿತ್ರಾಗೌಡ ಮತ್ತು ದರ್ಶನ್‌ ಅವರಿಗೆ ನೋಟಿಸ್ ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.

ಪ್ರಾಸಿಕ್ಯೂಷನ್‌ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್ ಅವರು ಭಾರತೀಯ ಸಾಕ್ಷ್ಯ ಅಧಿನಿಯಮ–1872ರ ಸೆಕ್ಷನ್‌ 154ರ ಅನುಸಾರ ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಕರೆಸಿದ್ದ ಸಾಕ್ಷಿಯು (ರತ್ನಪ್ರಭಾ) ನ್ಯಾಯಾಲಯದ ಮುಂದೆ ಪ್ರಾಸಿಕ್ಯೂಷನ್‌ಗೆ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಸಾಕ್ಷಿ ತನ್ನ ಹೇಳಿಕೆಯಿಂದ ಹಿಂದೆ ಸರಿದಾಗ, ನಮ್ಮ ಮನವಿಯ ಮೇರೆಗೆ ನ್ಯಾಯಾಲಯ ತನ್ನ ವಿವೇಚನೆಯನ್ನು ಬಳಸಿ ಪಾಟಿ ಸವಾಲು ನಡೆಸಲು ಅನುಮತಿ ನೀಡಬೇಕಿತ್ತು. ಆದರೆ, ನಮ್ಮ ಮನವಿಯನ್ನು ಸತ್ರ ನ್ಯಾಯಾಲಯ ತಳ್ಳಿ ಹಾಕಿದೆ” ಎಂದರು.

Also Read
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವರ್ಷದಲ್ಲಿ ಗಣನೀಯ ಪ್ರಗತಿಯಾಗದಿದ್ದರೆ ದರ್ಶನ್‌ ಜಾಮೀನು ಕೋರಬಹುದು: ಸುಪ್ರೀಂ

ಈ ಕುರಿತಂತೆ ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ಅರ್ಜಿಯನ್ನು ಸಿಟಿ ಸಿವಿಲ್‌ ನ್ಯಾಯಾಲಯ 57ನೇ ನ್ಯಾಯಾಲಯ 2026ರ ಜನವರಿ 17ರಂದು ತಿರಸ್ಕರಿಸಿದೆ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ಅನುಮತಿ ನೀಡಿ ಆದೇಶಿಸಬೇಕು ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ಪೀಠ ಪ್ರತಿವಾದಿಗಳಾದ ಪವಿತ್ರಾಗೌಡ, ದರ್ಶನ್‌ ಸೇರಿದಂತೆ ಉಳಿದ ಆರೋಪಿಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಜೂನ್ 18ಕ್ಕೆ ಮುಂದೂಡಿತು.

Kannada Bar & Bench
kannada.barandbench.com