ಲಂಚ ಪ್ರಕರಣ: ಇ ಡಿ ಅಧಿಕಾರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಬೆಂಗಳೂರು ನ್ಯಾಯಾಲಯ

ಚೀನಾ ಸಾಲ ಅಪ್ಲಿಕೇಶನ್ ಪ್ರಕರಣದಲ್ಲಿ ದೂರುದಾರರ ಕಂಪನಿಯ ಹೆಸರು ಕೈ ಬಿಡಲು ಇ ಡಿ ಅಧಿಕಾರಿ ಲಲಿತ್ ಬಜಾದ್ ₹50 ಲಕ್ಷ ಕೇಳಿದ್ದರು.
ಲಂಚ ಪ್ರಕರಣ: ಇ ಡಿ ಅಧಿಕಾರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಬೆಂಗಳೂರು ನ್ಯಾಯಾಲಯ
Published on

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ ಡಿ) ಮಾಜಿ ಅಧಿಕಾರಿ ಲಲಿತ್‌ ಬಜಾದ್‌ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರು ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ [ಸಿಬಿಐ/ ಎಸಿಬಿ ಮೂಲಕ ಸರ್ಕಾರ ಮತ್ತು ಲಲಿತ್‌ ಬಜಾದ್‌ ನಡುವಣ ಪ್ರಕರಣ].

ಬಜಾದ್‌ ಅವರನ್ನು ಇ ಡಿಯ ಜಾರಿ ನಿರ್ದೇಶನಾಲಯದ ಅಧಿಕಾರಿಯಾಗಿ ಬೆಂಗಳೂರು ವಿಭಾಗದಲ್ಲಿ ನೇಮಕ ಮಾಡಿದ್ದಾಗ ದೂರುದಾರರನ್ನು ಪ್ರಕರಣದಿಂದ ಕೈಬಿಡಬೇಕಾದರೆ ₹50 ಲಕ್ಷ ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಜೊತೆಗೆ ₹5 ಲಕ್ಷ  ಲಂಚ ಪಡೆದಿದ್ದರು ಎಂಬುದು ನಿಸ್ಸಂದೇಹವಾಗಿ ಸಾಬೀತಾಗಿದೆ ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್‌ ಸಂಗ್ರೇಶಿ ತಿಳಿಸಿದ್ದಾರೆ.

Also Read
[ಆರ್ಯನ್ ಖಾನ್ ಲಂಚ ಪ್ರಕರಣ] ವಾಂಖೆಡೆ ವಿರುದ್ಧದ ತನಿಖೆ 3 ತಿಂಗಳಲ್ಲಿ ಪೂರ್ಣ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಸಿಬಿಐ

 ಈ ಹಿನ್ನೆಲೆಯಲ್ಲಿ ಬಜಾದ್‌ ಅವರಿಗೆ ₹5.5 ಲಕ್ಷ ದಂಡ ವಿಧಿಸಿದೆ. "ಆರೋಪಿ-ಲಲಿತ್ ಬಜಾದ್‌ ಅವರು ಎಸಗಿದ ಅಪರಾಧಕ್ಕಾಗಿ 1988ರ ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 7ರ [ಲಂಚ] ಅಡಿಯಲ್ಲಿ 3 ವರ್ಷಗಳ ಅವಧಿಗೆ ಸಾದಾ ಜೈಲು ಶಿಕ್ಷೆ ಮತ್ತು ರೂ. 5,00,000/- ದಂಡ ವಿಧಿಸಲಾಗುತ್ತಿದೆ.  ದಂಡ ಪಾವತಿಸಲು ವಿಫಲವಾದರೆ, ಅವರು ಇನ್ನೂ 6 ತಿಂಗಳ ಕಾಲಾ ಸಾದಾ ಸಜೆ ಅನುಭವಿಸಬೇಕಾಗುತ್ತದೆ” ಎಂದು  ನ್ಯಾಯಾಲಯ ಹೇಳಿದೆ.

ಇದಲ್ಲದೆ ಆರೋಪಿ ಐಪಿಸಿ ಸೆಕ್ಷನ್‌ 384ರ [ಸುಲಿಗೆ] ಅಡಿ 1 ವರ್ಷದ ಅವಧಿಗೆ ಸಾದಾ ಜೈಲು ಶಿಕ್ಷೆ ಮತ್ತು ರೂ. 50,000/- ದಂಡ ಪಾವತಿಸಬೇಕು. ದಂಡ ಪಾವತಿಸದೆ ಹೋದಲ್ಲಿ ಅವರು ಇನ್ನೂ 1 ತಿಂಗಳ ಅವಧಿಗೆ ಸಾದಾ ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದು ಅದು ತಿಳಿಸಿದೆ. ಎರಡೂ ಶಿಕ್ಷೆಗಳು ಏಕಕಾಲದಲ್ಲಿ ಜಾರಿಗೆ ಬರುತ್ತವೆ ಎಂದು ಅದು ಇದೇ ವೇಳೆ ಸ್ಪಷ್ಟಪಡಿಸಿದೆ.

Also Read
ಎಪಿಪಿಯಿಂದ ₹2,000 ಲಂಚ ಸ್ವೀಕಾರ ಪ್ರಕರಣ: ಲೋಕಾಯುಕ್ತಕ್ಕೆ ನೋಟಿಸ್‌, ಆಕ್ಷೇಪಣೆ ಸಲ್ಲಿಕೆಗೆ ಹೈಕೋರ್ಟ್‌ ಸೂಚನೆ

ಅಪೊಲೊ ಫಿನ್‌ವೆಸ್ಟ್ ಎಂಬ ಕಂಪನಿಯ ಮಾಲೀಕರಿಂದ ₹50 ಲಕ್ಷಕ್ಕೆ ಬೇಡಿಕೆ ಇಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಬಜಾದ್ ಅವರನ್ನು ಜೂನ್ 2021ರಲ್ಲಿ ಸಿಬಿಐ ಬಂಧಿಸಿತ್ತು. ಬಜಾದ್ ಅವರು ಅಪೊಲೊ ಫಿನ್ವೆಸ್ಟ್ ಮಾಲೀಕರನ್ನು ಭೇಟಿಯಾಗಿ, ₹50 ಲಕ್ಷ ಪಾವತಿಸದಿದ್ದರೆ, ಚೀನೀ ಸಾಲ ಆ್ಯಪ್ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕಂಪನಿಯನ್ನು ಸಿಲುಕಿಸಲಾಗುವುದು ಎಂದು ಬೆದರಿಸಿದ್ದರು. ಪ್ರಕರಣ ಒಂದು ದಶಕಕ್ಕೂ ಹೆಚ್ಚು ಕಾಲ ಮುಂದುವರೆಯಲಿದ್ದು ಅವರ ಬ್ಯಾಂಕ್‌ ಖಾತೆ ಸ್ಥಗಿತಗೊಳಿಸಲಾಗುವುದು ಎಂದು ಬೆದರಿಸಿದ್ದರು ಎಂದು ದೂರುದಾರರು ತಿಳಿಸಿದ್ದರು.

ಕೊನೆಗೆ, ಅಪೊಲೊ ಫಿನ್‌ವೆಸ್ಟ್ ಮಾಲೀಕರು ಅವರಿಗೆ ₹5 ಲಕ್ಷ ಲಂಚ ನೀಡಿದ್ದರು. ವಾದ ಆಲಿಸಿದ ನ್ಯಾಯಾಲಯ ಇ ಡಿ ಅಧಿಕಾರಿ ತಮ್ಮ ಸೇವೆಯ ಅವಧಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು ₹5 ಲಕ್ಷ ಸುಲಿಗೆ ಮಾಡಿದ್ದಾರೆ ಎಂದು ತೀರ್ಪು ನೀಡಿದೆ. ಲಲಿತ್ ಬಜಾದ್ ಪರವಾಗಿ ವಕೀಲ ಸಂಕೇತ್ ಎಂ ಏಣಗಿ ವಾದ ಮಂಡಿಸಿದರು. ಸಿಬಿಐಯನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com