ಹೈಕೋರ್ಟ್‌ ಆದೇಶದ ಯಾವ ಅಂಶಗಳನ್ನು ತೆಗೆದು ಹಾಕಲು ಬಂಧಿತ ಐಎಎಸ್‌ ಅಧಿಕಾರಿ ಮಂಜುನಾಥ್‌ ಸುಪ್ರೀಂ ಮುಂದೆ ಕೋರಿದ್ದಾರೆ?

ನೂಲಿ ಮತ್ತು ನೂಲಿ ವಕೀಲರ ಮೂಲಕ ಸಲ್ಲಿಸಲಾಗಿರುವ ಮನವಿಯಲ್ಲಿ ಕರ್ನಾಟಕ ಹೈಕೋರ್ಟ್‌ ಜುಲೈ 7ರಂದು ಮಾಡಿರುವ ಆಕ್ಷೇಪಾರ್ಹ ಆದೇಶಕ್ಕೆ ಮಧ್ಯಂತರ ನೀಡುವಂತೆ ಕೋರಲಾಗಿದೆ.
Supreme Court and J Manjunath
Supreme Court and J Manjunath

ಜಾಮೀನು ಮನವಿಯ ವಿಚಾರಣೆಯೊಂದರ ವೇಳೆ ತಮ್ಮ ಬಗ್ಗೆ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರು ಆದೇಶದಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ತೆಗೆದು ಹಾಕುವಂತೆ ಕೋರಿ ಅಮಾನತುಗೊಂಡು ನ್ಯಾಯಾಂಗ ಬಂಧನದಲ್ಲಿರುವ ಐಎಎಸ್‌ ಅಧಿಕಾರಿ ಮಂಜುನಾಥ್‌ ಅವರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮನವಿ ಸಲ್ಲಿಸಿದ್ದಾರೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಉಪ ತಹಶೀಲ್ದಾರ್‌ ಪಿ ಎಸ್‌ ಮಹೇಶ್‌ ಅವರ ಜಾಮೀನು ಮನವಿಯ ವಿಚಾರಣೆಯ ಸಂದರ್ಭದಲ್ಲಿ ಅಮಾನತುಗೊಂಡು ನ್ಯಾಯಾಂಗ ಬಂಧನದಲ್ಲಿರುವ ಐಎಎಸ್‌ ಅಧಿಕಾರಿ ಜೆ ಮಂಜುನಾಥ್‌ ಅವರ ಕುರಿತು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದರು.

'ನೂಲಿ ಅಂಡ್‌ ನೂಲಿ' ಕಾನೂನು ಸಲಹಾ ಸಂಸ್ಥೆ ಮೂಲಕ ಸಲ್ಲಿಸಲಾಗಿರುವ ಮನವಿಯಲ್ಲಿ ಕರ್ನಾಟಕ ಹೈಕೋರ್ಟ್‌ ಜುಲೈ 7ರಂದು ಮಾಡಿರುವ ಆಕ್ಷೇಪಾರ್ಹ ಆದೇಶಕ್ಕೆ ಮಧ್ಯಂತರ ಪರಿಹಾರವಾಗಿ ತಡೆ ನೀಡುವಂತೆ ಕೋರಲಾಗಿದೆ.

ಇಲ್ಲಿಯವರೆಗೂ ಅರ್ಜಿದಾರ ಮಂಜುನಾಥ್‌ ಅವರು ʼಪ್ರಸ್ತಾಪಿತ ಆರೋಪಿʼಯೇ ವಿನಾ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿಲ್ಲ. ಮಹೇಶ್‌ ಅವರ ಜಾಮೀನು ಮನವಿಯ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್‌ ತನ್ನ ಅಧಿಕಾರ ಮತ್ತು ವ್ಯಾಪ್ತಿ ಮೀರಿ ಕೆಲಸ ಮಾಡಿದ್ದು, ಅರ್ಜಿದಾರರ ವಿರುದ್ಧ ಹೇಳಿಕೆ ದಾಖಲಿಸುವ ಮೂಲಕ ಪ್ರಮಾದ ಎಸಗಿದೆ. ತನಿಖಾ ಸಂಸ್ಥೆಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದು, ಹೈಕೋರ್ಟ್‌ ಅಭಿಪ್ರಾಯ ಅನಗತ್ಯವಾಗಿತ್ತು ಎಂದು ವಾದಿಸಲಾಗಿದೆ.

ತನಿಖೆಯ ಆರಂಭಿಕ ಹಂತದಲ್ಲಿ ಸಾಂವಿಧಾನಿಕ ನ್ಯಾಯಾಲಯ ವ್ಯಕ್ತಪಡಿಸುವ ಅಭಿಪ್ರಾಯವು ನ್ಯಾಯಯುತ ತನಿಖೆಯ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಕ್ರಿಮಿನಲ್‌ ಪ್ರಕ್ರಿಯೆಯಲ್ಲಿ ನ್ಯಾಯಿಕ ತೀರ್ಮಾನವು (ಕನ್‌ಕ್ಲೂಷನ್‌) ಆರೋಪಿಯು ಜಾಮೀನು, ಎಫ್‌ಐಆರ್‌ ವಜಾ ಮುಂತಾದ ಪರಿಹಾರ ಹುಡುಕುವುದಕ್ಕೆ ಅಡ್ಡಿ ಉಂಟು ಮಾಡುತ್ತವೆ. ಇದು ಸಂವಿಧಾನದ ೨೧ನೇ ವಿಧಿಯಡಿ ಆರೋಪಿಯ ಅತ್ಯಮೂಲ್ಯವಾದ ಘನತೆಯ ಹಕ್ಕು, ನ್ಯಾಯಯುತ ವಿಚಾರಣೆ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತದೆ ಎಂದು ವಿವರಿಸಲಾಗಿದೆ.

ನ್ಯಾ. ಸಂದೇಶ್‌ ಅವರ ಪೀಠ ವ್ಯಕ್ತಪಡಿಸಿರುವ ಅಭಿಪ್ರಾಯದಿಂದಾಗಿ ಲಂಚ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸೆಷನ್ಸ್‌ ನ್ಯಾಯಾಲಯ ಮತ್ತು ಪ್ರಕರಣದಲ್ಲಿ ಮಂಜುನಾಥ್‌ ಅವರನ್ನು ಮೂರನೇ ಆರೋಪಿಯನ್ನಾಗಿಸುವ ಸಂಬಂಧ ಹೆಚ್ಚುವರಿ ಎಫ್‌ಐಆರ್‌ ದಾಖಲಿಸುವ ಪೊಲೀಸರ ಕೋರಿಕೆ ವಜಾ ಮಾಡುವಂತೆ ಹೈಕೋರ್ಟ್‌ನಲ್ಲಿ ಪ್ರತ್ಯೇಕವಾಗಿ ರಿಟ್‌ ಸಲ್ಲಿಸಿದ್ದು, ಇದರ ಮೇಲೆ ಪೂರ್ವಾಗ್ರಹ ಉಂಟಾಗಲಿದೆ ಎಂದು ಉಲ್ಲೇಖಿಸಲಾಗಿದೆ.

ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಸಂಗ್ರಹಿಸಿರುವ ದಾಖಲೆಯಲ್ಲಿ ಅರ್ಜಿದಾರ ಮಂಜುನಾಥ್‌ ಅವರು ಭಾಗವಹಿಸಿಲ್ಲ ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ. ದೂರಿನ ಬಗ್ಗೆ ಮಂಜುನಾಥ್‌ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ. ಟ್ರ್ಯಾಪ್‌ ನಡೆಸಿದ ದಿನ ಅಥವಾ ಅದಕ್ಕೂ ಮುನ್ನ ಮಂಜುನಾಥ್‌ ಅವರ ಸೂಚನೆಯಂತೆ ಯಾವುದೇ ಬೇಡಿಕೆ ಇಡಲಾಗಿಲ್ಲ ಎಂದು ಹೇಳಲಾಗಿದೆ.

ಇಲ್ಲಿಯವರಗೆ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರ ಮಂಜುನಾಥ್‌ ಅವರು ಲಂಚಕ್ಕೆ ಬೇಡಿಕೆ ಇಟ್ಟಿರುವುದು ಅಥವಾ ಅದನ್ನು ಪಡೆದುಕೊಂಡಿರುವುದರ ಕುರಿತು ತೋರಿಸಲು ಯಾವುದೇ ಪುರಾವೆಗಳು ಇಲ್ಲ. ಅದಾಗ್ಯೂ, ಅರ್ಜಿದಾರ ಮಂಜುನಾಥ್‌ ಅವರ ವಿರುದ್ಧ ಹೈಕೋರ್ಟ್‌ ಅನವಶ್ಯಕ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಹೇಳಲಾಗಿದೆ.

ಕಳೆದ 25 ವರ್ಷಗಳಲ್ಲಿ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿರುವುದರಿಂದ 2010ರಲ್ಲಿ ಮಂಜುನಾಥ್‌ ಅವರು ಐಎಎಸ್‌ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಹೈಕೋರ್ಟ್‌ ವ್ಯಕ್ತಪಡಿಸಿರುವ ಅಭಿಪ್ರಾಯದಿಂದ ಎಲ್ಲವೂ ವ್ಯರ್ಥವಾಗಿದೆ. ಆದೇಶದಲ್ಲಿ ನ್ಯಾ. ಸಂದೇಶ್‌ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ತೆಗೆಯದಿದ್ದರೆ ಮಂಜುನಾಥ ಅವರ ವೃತ್ತಿ ಬದುಕು ನಾಶವಾಗಲಿದ್ದು, ಜೀವನವು ಸಮಸ್ಯೆಗೆ ಸಿಲುಕಿಕೊಳ್ಳಲಿದೆ ಎಂದು ವಿವರಿಸಲಾಗಿದೆ.

ನ್ಯಾಯಾಲಯದ ಅನವಶ್ಯಕ ಅಭಿಪ್ರಾಯದಿಂದ ಮಾಧ್ಯಮ ವಿಚಾರಣೆಗೆ ಸಿಲುಕಿ ಮಂಜುನಾಥ್‌ ಸಂತ್ರಸ್ತರಾಗಿದ್ದಾರೆ. 2022ರ ಮೇ 20ರಂದು ಎಫ್‌ಐಆರ್‌ ದಾಖಲಿಸಿದ್ದರೂ ಮಂಜುನಾಥ್‌ ಅವರನ್ನು ಆರೋಪಿಯನ್ನಾಗಿಸಲು ಯಾವುದೇ ದಾಖಲೆಗಳು ಪೊಲೀಸರಿಗೆ ಲಭ್ಯವಾಗಿಲ್ಲ. ಮಾಧ್ಯಮ ವರದಿಗಳು ಮತ್ತು ಬಾಹ್ಯ ವಿಚಾರಗಳನ್ನು ಪರಿಗಣಿಸಿ ಜೂನ್‌ 26ರಂದು ಮಂಜುನಾಥ್‌ ಅವರನ್ನು ಎಫ್‌ಐಆರ್‌ನಲ್ಲಿ ಆರೋಪಿಯನ್ನಾಗಿಸಲು ಪೊಲೀಸರು ಕೋರಿಕೆ ಸಲ್ಲಿಸಿದ್ದಾರೆ.

ಮಂಜುನಾಥ್‌ ಅವರನ್ನು ಸಮರ್ಥಿಸಿಕೊಳ್ಳಲು ಒಂದು ಅವಕಾಶ ನೀಡದೇ ಅವರನ್ನು ಟೀಕಿಸಿ ಆಕ್ಷೇಪಾರ್ಹ ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ. ಈ ಮೂಲಕ ಸ್ವಾಭಾವಿಕ ನ್ಯಾಯ ತತ್ವ ಉಲ್ಲಂಘನೆಯಾಗಿದೆ. ಹಿರಿಯ ಅಧಿಕಾರಿಯು ಉತ್ತಮ ಆಡಳಿತ ಜಾರಿಗಾಗಿ ತಮ್ಮ ಬದುಕು ಸವೆಸಿದ್ದು, ಅವರನ್ನು ಆಲಿಸದೇ ಟೀಕೆ ಮಾಡಲಾಗಿದೆ. ಹೀಗಾಗಿ, ಆಕ್ಷೇಪಾರ್ಹ ಆದೇಶ ವಜಾಕ್ಕೆ ಅರ್ಹವಾಗಿದೆ ಎಂದು ಹೇಳಲಾಗಿದೆ.

ಹೈಕೋರ್ಟ್‌ ಸ್ವ ನಿಯಂತ್ರಣದ ಮೂಲಕ ಅದನ್ನು ತಪ್ಪಿಸಬಹುದಿತ್ತು. ಆದರೆ, ಹಾಗೆ ಮಾಡಿಲ್ಲ. ಹೀಗಾಗಿ, ಹೈಕೋರ್ಟ್‌ನಿಂದ ಆಕ್ಷೇಪಾರ್ಹ ಆದೇಶದ 3, 4 ಮತ್ತು 8ನೇ ಪ್ಯಾರಾಗಳನ್ನು ಕೈಬಿಟ್ಟು ಪರಿಹಾರ ಕಲ್ಪಿಸಬೇಕು. ಹೀಗೆ ಮಾಡುವುದರಿಂದ ಪ್ರಕರಣದ ಅರ್ಹತೆ ಕುಂದುವುದಿಲ್ಲ. ಆದರೆ, ಇದು ಸಾರ್ವಜನಿಕರ ಮನಸ್ಸಿನಲ್ಲಿ ಮಂಜುನಾಥ್‌ ಅವರ ಘನತೆಯನ್ನು ಮರುಪ್ರತಿಷ್ಠಾಪಿಸಲಿದೆ. ಅಲ್ಲದೇ, ಮಂಜುನಾಥ್‌ ಅವರು ನ್ಯಾಯಯುತ ಮತ್ತು ಶಾಸನಬದ್ಧವಾದ ಪರಿಹಾರ ಹುಡುಕಲು ಅನುವಾಗಲಿದೆ. ಸುಪ್ರೀಂ ಕೋರ್ಟ್‌ ಆಕ್ಷೇಪಾರ್ಹ ಆದೇಶದಲ್ಲಿ ಮಧ್ಯಪ್ರವೇಶ ಮಾಡದಿದ್ದರೆ ಅರ್ಜಿದಾರ ವಿರುದ್ಧ ಪೂರ್ವಾಗ್ರಹ ಉಂಟಾಗಲಿದೆ ಎಂದು ಹೇಳಲಾಗಿದೆ.

ಜುಲೈ 7ರ ಆದೇಶದಲ್ಲಿ ಡಿ ಸಿ ಕೈಬಿಡಲು ಕೋರಿರುವ ಅಂಶಗಳು

ಲಂಚ ಪ್ರಕರಣದಲ್ಲಿನ ಎರಡನೇ ಆರೋಪಿ ಚಂದ್ರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗಿಯಲ್ಲ. ಐದು ಲಕ್ಷ ರೂಪಾಯಿ ಲಂಚ ಪಡೆಯುವಾಗ ಟ್ರ್ಯಾಪ್‌ ಮಾಡಿ ಉಪ ತಹಶೀಲ್ದಾರ್‌ ಮಹೇಶ್‌ ಮತ್ತು ಚಂದ್ರು ಅವರನ್ನು ಬಂಧಿಸಲಾಗಿತ್ತು. ದೂರುದಾರ ಅಜಂ ಪಾಷಾ ಮತ್ತು ಜಿಲ್ಲಾಧಿಕಾರಿ ಮಂಜುನಾಥ್‌ ನಡುವಿನ ಸಂಭಾಷಣೆಯ ವೇಳೆ, ಡಿ ಸಿ ಸಹಾಯಕ ಮಹೇಶ್‌ ಮತ್ತು ಕೇಸ್‌ ವರ್ಕರ್‌ ಸಂದೀಪ್‌ ಸಹ ಇದ್ದರು. ಕಚೇರಿ ಬಿಡುವಾಗ ಜಿಲ್ಲಾಧಿಕಾರಿಯು ಅಜಂ ಪಾಷಾ ಬರಲಿ ನಾಳೆ ಕೆಲಸ ಮಾಡಿಕೊಡುತ್ತೇನೆ. ಅವರು ಬರದಿದ್ದರೆ ಕೆಲಸ ಮಾಡುವುದಿಲ್ಲ ಎಂದು ಕಾರಿನಲ್ಲಿ ತೆರಳಿದ್ದರು. ಈ ಮಧ್ಯೆ, ಅಜಂ ಪಾಷಾ ಮಧ್ಯಪ್ರವೇಶಿಸಿದ್ದು, ಇದಕ್ಕೆ ಜಿಲ್ಲಾಧಿಕಾರಿ ನಾಳೆ ನೋಡುವುದಾಗಿ ಹೇಳಿ ಹೊರಟುಬಿಟ್ಟರು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಅಜಂ ಪಾಷಾ ಅವರು ಕೆಲಸ ಮಾಡಿಕೊಡಲು ಮೂರು ಲಕ್ಷ ರೂಪಾಯಿ ನೀಡಲಾಗುವುದು ಎಂದು ಹೇಳಿದ್ದರು. ಆಗ ಮಹೇಶ್‌ ಹಾಗಾದರೆ ಬೇರೆ ಯಾರ ಬಳಿಯಾದರೂ ಕೆಲಸ ಮಾಡಿಸಿಕೊಳ್ಳಿ ಎಂದಿದ್ದರು. ಆನಂತರ ಐದು ಲಕ್ಷ ರೂಪಾಯಿಗೆ ಒಪ್ಪಿಸಿ, ಅಷ್ಟು ಕೊಡಲು ಒಪ್ಪಿದರೆ ನಾಳೆಯೇ ಆದೇಶ ಮಾಡಿಸಲಾಗುವುದು ಎಂದು ಪಾಷಾಗೆ ಹೇಳಿದ್ದರು. ಇದು ಈ ಇಬ್ಬರ ನಡುವಿನ ಸಂಭಾಷಣೆಯಾಗಿದ್ದು, ಟ್ರ್ಯಾಪ್‌ ಆದ ತಕ್ಷಣ ಸಂಬಂಧಿತ ದಾಖಲೆಯನ್ನು ವಶಕ್ಕೆ ಪಡೆಯಲಾಗಿತ್ತು. ದಾಖಲೆ ವಶಕ್ಕೆ ಪಡೆದಾಗ ಆದೇಶ ಸಿದ್ಧವಾಗಿದ್ದು, ಜಿಲ್ಲಾಧಿಕಾರಿ ಮಂಜುನಾಥ್‌ ಸಹಿ ಮಾಡಿರಲಿಲ್ಲ. ಹೀಗಾಗಿ, ಲಂಚ ಸ್ವೀಕರಿಸದಿದ್ದರೆ ಅವರು ಸಹಿ ಮಾಡಲು ಸಿದ್ಧವಿರಲಿಲ್ಲ ಎಂಬುದಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮಹೇಶ್‌ ಮತ್ತು ಚಂದ್ರುವನ್ನು ಬಂಧಿಸಿ, ಮಹೇಶ್‌ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು, ಚಂದ್ರು ಜಿಲ್ಲಾಧಿಕಾರಿ ಕಚೇರಿಯ ಅಪೀಲ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಆದರೆ, ರಾಜ್ಯ ಸರ್ಕಾರದ ಪರ ವಕೀಲರು ಚಂದ್ರು ಅವರು ಜಿಲ್ಲಾಧಿಕಾರಿ ಕಚೇರಿಯ ಉದ್ಯೋಗಿಯಲ್ಲ ಎಂದು ಹೇಳಿದ್ದಾರೆ. ಅಜಂ ಪಾಷಾ ಅವರಿಂದ ಐದು ಲಕ್ಷ ರೂಪಾಯಿ ಸ್ವೀಕರಿಸಿದ ಚಂದ್ರು ಅವರು ಮಹೇಶ್‌ ಸೂಚನೆಯಂತೆ ಲಂಚದ ಹಣ ಸ್ವೀಕರಿಸಿರುವುದಾಗಿ ಹೇಳಿದ್ದಾರೆ. ಆದರೆ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡದ ಮೂರನೇ ವ್ಯಕ್ತಿ ಲಂಚದ ಹಣ ಸ್ವೀಕರಿಸಬಹುದೇ ಎಂಬುದಕ್ಕೆ ಎಸಿಬಿ ಅಥವಾ ಸರ್ಕಾರದ ಬಳಿ ಉತ್ತರವಿಲ್ಲ. ಅಲ್ಲದೇ, ಚಂದ್ರು ನೇಮಕಾತಿಗೆ ಸಂಬಂಧಿಸಿದಂತೆ ನೇಮಕಾತಿ ಆದೇಶ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದ್ದರೂ ಇದುವರೆಗೂ ಅದನ್ನು ಸಲ್ಲಿಸಲಾಗಿಲ್ಲ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಇದೆಲ್ಲವನ್ನೂ ಪರಿಶೀಲಿಸಿ ಎಸಿಬಿ ವಕೀಲರಿಗೆ ನ್ಯಾಯಾಲಯವು ಈ ವಿಚಾರ ತಿಳಿಸಿದ್ದು, ಬಳಿಕವಷ್ಟೇ ಜಿಲ್ಲಾಧಿಕಾರಿಯನ್ನು ಪ್ರಕರಣದಲ್ಲಿ ಮೂರನೇ ಆರೋಪಿ ಮಾಡಲಾಗಿದೆ. ಆನಂತರ ಸಿಆರ್‌ಪಿಸಿ ಸೆಕ್ಷನ್‌ 41ಎ ಅಡಿ ನೋಟಿಸ್‌ ನೀಡಲಾಗಿದೆ. ಸಂಜ್ಞೇಯ ಅಪರಾಧವಾಗಿದ್ದರೂ ಸಹ ಕೇವಲ ನೋಟಿಸ್‌ ನೀಡಲಾಗಿದ್ದು, ಆ ಮೂಲಕ ಜಿಲ್ಲಾಧಿಕಾರಿಯು ನೋಟಿಸ್‌ ವಜಾ ಮಾಡುವಂತೆ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲು ಅನುವು ಮಾಡಲಾಗಿದೆ. ಆದರೆ, ಹೈಕೋರ್ಟ್‌ ಜಿಲ್ಲಾಧಿಕಾರಿ ಮನವಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ಮಾಡಲು ನಿರಾಕರಿಸಿದ ಬಳಿಕವಷ್ಟೇ ಎಸಿಬಿಯು ಮಂಜುನಾಥ್‌ ಅವರನ್ನು ಬಂಧಿಸಿದೆ. ಈಗ ಎಸಿಬಿಯ ವಿಶೇಷ ವಕೀಲರು ಜಿಲ್ಲಾಧಿಕಾರಿ ಬಂಧಿಸಿದ ಬಳಿಕವೂ ಅವರ ಮನೆಯ ಮೇಲೆ ಶೋಧನಾ ದಾಳಿ ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಯಾವುದೇ ದಾಖಲೆ ಹಾಜರುಪಡಿಸಿಲ್ಲ ಎಂದು ಆದೇಶದಲ್ಲಿ ದಾಖಲಿಸಲಾಗಿದೆ.

ಜಿಲ್ಲಾಧಿಕಾರಿಯ ವಿರುದ್ದ ಸಾಕಷ್ಟು ದಾಖಲೆಗಳಿದ್ದರೂ ಅವರ ವಿರುದ್ಧ ಪ್ರಕರಣ ದಾಖಲಿಸದ ಎಸಿಬಿ ನಡೆಯನ್ನು ಗಮನಿಸಲಾಗಿದ್ದು, ಡಿ ಸಿ ಕಚೇರಿಯ ಗುಮಾಸ್ತ ಮತ್ತು ಜಿಲ್ಲಾಧಿಕಾರಿಯ ಕಚೇರಿಯ ಸಹೋದ್ಯೋಗಿ ಅಧಿಕಾರಿಯ ವಿರುದ್ಧ ಎಸಿಬಿ ಪ್ರಕರಣ ದಾಖಲಿಸಿದೆ. ನ್ಯಾಯಾಲಯಕ್ಕೆ ಸಹಕರಿಸಬೇಕಾದ ಎಸಿಬಿ ವಕೀಲರು ಪೀಠವು ಜಾಮೀನು ಮನವಿ ಪರಿಗಣಿಸಬೇಕೆ ವಿನಾ ಬೇರೆ ದಾಖಲೆಗಳನ್ನಲ್ಲ ಎಂದು ಹೇಳಿದ್ದಾರೆ. ತನಿಖಾ ಸಂಸ್ಥೆಯು ಸಾರ್ವಜನಿಕ ಹಿತಾಸಕ್ತಿ ಪರಿಗಣಿಸದಿದ್ದಾಗ ಸಾಂವಿಧಾನಿಕ ನ್ಯಾಯಾಲಯವು ತನಿಖೆಯ ಮೇಲೆ ನಿಗಾ ಇಡಲಿದೆ. ಇದು ಪರಿಸ್ಥಿತಿ ಸೃಷ್ಟಿಸಿರುವ ವಾತಾವರಣವಾಗಿದೆ ಎಂದು ನ್ಯಾಯಾಲಯ ಹೇಳಿದ್ದಾಗಿ ಆದೇಶದಲ್ಲಿ ವಿವರಿಸಲಾಗಿದೆ.

Also Read
ಸಹೋದ್ಯೋಗಿ ನ್ಯಾಯಮೂರ್ತಿ ಬಳಿ ದೆಹಲಿ ವ್ಯಕ್ತಿಯಿಂದ ನನ್ನ ಮಾಹಿತಿ ಸಂಗ್ರಹ: ಆದೇಶದಲ್ಲಿ ದಾಖಲಿಸಿದ ನ್ಯಾ. ಸಂದೇಶ್‌

ಪಾಷಾ ಅವರು ಮಂಜುನಾಥ್‌ ಅವರನ್ನು ಭೇಟಿ ಮಾಡಿದ್ದು, ಮಹೇಶ್‌ ಅವರನ್ನು ಭೇಟಿ ಮಾಡಲು ಡಿ ಸಿ ಸೂಚಿಸಿದ್ದರು. ಅದರಂತೆ ಪಾಷಾ ಅವರು ಮಹೇಶ್‌ ಅವರನ್ನು ಭೇಟಿ ಮಾಡಿದ್ದರು. ಅದರಂತೆ ಮಹೇಶ್‌ ಅವರು ಪಾಷಾ ಪರವಾಗಿ ಡಿ ಸಿ ಆದೇಶ ಮಾಡಲು 15 ಲಕ್ಷ ರೂಪಾಯಿ ಲಂಚ ನೀಡುವಂತೆ ಸೂಚಿಸಿದ್ದರು. ಸಾಕಷ್ಟು ಚರ್ಚೆ ಬಳಿಕ 8 ಲಕ್ಷ ಅಂತಿಮವಾಗಿ 5 ಲಕ್ಷ ರೂಪಾಯಿ ಲಂಚ ನೀಡಲು ತೀರ್ಮಾನವಾಗಿತ್ತು. ರಾಜ್ಯ ಸರ್ಕಾರ ಮತ್ತು ಎಸಿಬಿ ಪ್ರಕಾರ ಲಂಚದ ಹಣ ಪಡದ ವ್ಯಕ್ತಿ ಡಿ ಸಿ ಕಚೇರಿಯ ಉದ್ಯೋಗಿಯಲ್ಲ. ಆದರೆ, ಮಹೇಶ್‌ ಹೇಳುವ ಪ್ರಕಾರ ಚಂದ್ರು ಡಿ ಸಿ ಕಚೇರಿಯ ಅಫೀಲು ವಿಭಾಗದ ಉದ್ಯೋಗಿ ಎಂದು ಈಗಾಗಲೇ ನ್ಯಾಯಾಲಯ ಹೇಳಿದೆ. ಅಲ್ಲದೇ, ಮಹೇಶ್‌ ಸೂಚನೆಯಂತೆ ಲಂಚದ ಹಣ ಪಡೆದಿರುವುದಾಗಿ ಚಂದ್ರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಎಲ್ಲಾ ದಾಖಲೆಗಳು ಇರುವಾಗ ಎಸಿಬಿಯು ಡಿ ಸಿ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಮತ್ತು ಅಸಹಾಯಕತೆ ವ್ಯಕ್ತಪಡಿಸಿದೆ. ಹೀಗಾಗಿ, ಎಸಿಬಿ ಎಡಿಜಿಪಿ ಅವರ ಬಗ್ಗೆ ಅಭಿಪ್ರಾಯ ವ್ಯಕ್ಯಪಡಿಸಿದ್ದು, ಇದುವರೆಗೆ ಎಸಿಬಿ ಹೊರಡಿಸಿರುವ ಶೋಧನಾ ವಾರೆಂಟ್‌ ಮತ್ತು ಬಿ ವರದಿಗಳ ವರದಿ ಸಲ್ಲಿಸಲು ಆದೇಶಿಸಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ. ಈ ಅಂಶಗಳನ್ನು ಕೈಬಿಡಬೇಕು ಎಂದು ಮಂಜುನಾಥ್‌ ಅವರು ಮನವಿ ಮಾಡಿದ್ದಾರೆ.

Related Stories

No stories found.
Kannada Bar & Bench
kannada.barandbench.com