ರಾಜಕಾಲುವೆ ಒತ್ತುವರಿ ತೆರವುಗೊಳಿಸದ ಬಿಬಿಎಂಪಿ ವಿರುದ್ಧ ಹೈಕೋರ್ಟ್‌ ಕಿಡಿ: ವಸ್ತುಸ್ಥಿತಿ ವರದಿ ಸಲ್ಲಿಕೆಗೆ ಸೂಚನೆ

ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದಾರೆ. ರಾಜಕಾಲುವೆಯ ಒತ್ತುವರಿಯನ್ನು ತೆರವಿಗೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಪೀಠವು ಬಿಬಿಎಂಪಿ ಮತ್ತು ಸರ್ಕಾರಕ್ಕೆ ತಾಕೀತು ಮಾಡಿದೆ.
BBMP
BBMP

ಬೆಂಗಳೂರಿನಲ್ಲಿ ರಾಜಕಾಲುವೆಗೆ ಸೇರಿದ ಜಾಗದ ಒತ್ತುವರಿ ತೆರವುಗೊಳಿಸುವಲ್ಲಿ ಬಿಬಿಎಂಪಿ ವಿಫಲವಾಗಿರುವ ಕಾರಣದಿಂದಲೇ ನಗರದಲ್ಲಿ ಸುರಿದ ಭಾರಿ ಮಳೆಯಿಂದ ರಸ್ತೆ ಮತ್ತು ಕೆಲ ಪ್ರದೇಶಗಳು ಜಲಾವೃತವಾದ ಪರಿಸ್ಥಿತಿ ಉದ್ಭವಿಸಿತು ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಕಿಡಿಕಾರಿದೆ.

ಬೆಂಗಳೂರಿನ ಕೆರೆಗಳ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

2019ರ ಜೂನ್‌ 18ರಂದು ನೀಡಿರುವ ನಿರ್ದೇಶನದ ಅನ್ವಯ ನಗರದಲ್ಲಿನ ರಾಜಕಾಲುವೆಯ ಒತ್ತುವರಿಯನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಪ್ರಾಧಿಕಾರಗಳು ತಕ್ಷಣ ಕ್ರಮ ಕೈಗೊಂಡು ವಸ್ತುಸ್ಥಿತಿ ವರದಿ ಸಲ್ಲಿಸಬೇಕು. ರಾಜಕಾಲುವೆ ಮತ್ತು ಮಳೆ ನೀರು ಕಾಲುವೆಗೆ ತ್ಯಾಜ್ಯ ಸುರಿಯುವುದನ್ನು ತಡೆಗಟ್ಟಬೇಕು ಎಂದು ನಿರ್ದೇಶಿಸಿದ ಪೀಠವು ವಿಚಾರಣೆಯನ್ನು ಅಕ್ಟೋಬರ್‌ 10ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ವಕೀಲ ಜಿ ಆರ್ ಮೋಹನ್ ಮಧ್ಯಂತರ ಅರ್ಜಿ ಸಲ್ಲಿಸಿ, ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಉಂಟಾಗಿದ್ದ ಪ್ರವಾಹದ ಕುರಿತು ಪೀಠಕ್ಕೆ ಫೋಟೊಗಳ ಸಹಿತ ಮಾಹಿತಿ ಒದಗಿಸಿದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ರಾಜಕಾಲುವೆ ಮತ್ತು ಮಳೆ ನೀರು ಕಾಲುವೆ ಜಾಗದ ಒತ್ತುವರಿ ತೆರವುಗೊಳಿಸುವ ಸಂಬಂಧ ನ್ಯಾಯಾಲಯ ಹಲವು ಬಾರಿ ನಿರ್ದೇಶನ ನೀಡಿದೆ. ಅಲ್ಲದೆ, ಮಳೆನೀರು ಕಾಲುವೆಗಳ ಸಮೀಕ್ಷೆ ನಡೆಸುವ ಹಾಗೂ ಅವುಗಳ ಒತ್ತುವರಿಗಳನ್ನು ತೆರವುಗೊಳಿಸುವಂತೆ 2019ರ ಜೂನ್‌ 18ರಂದು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಿ, ಆ ಕುರಿತು ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಲು ಆರು ವಾರ ಕಾಲಾವಕಾಶ ನೀಡಿತ್ತು. ಆದರೆ, ಈವರೆಗೂ ನ್ಯಾಯಾಲಯದ ನಿರ್ದೇಶನಗಳು ಪಾಲನೆಯಾಗಿಲ್ಲ ಎಂದು ಪೀಠವು ಅಸಮಧಾನ ವ್ಯಕ್ತಪಡಿಸಿತು.

Also Read
ಬೆಂಗಳೂರು ಮಳೆ ಅವಾಂತರ: ವಾರ್ಡ್‌ವಾರು ದೂರು ಪರಿಹಾರ ಕೇಂದ್ರ ಆರಂಭಿಸಲು ಬಿಬಿಎಂಪಿಗೆ ಹೈಕೋರ್ಟ್‌ ಸೂಚನೆ

ಹೈಕೋರ್ಟ್ ನಿರ್ದೇಶನದಂತೆ ನಗರದಲ್ಲಿನ ಮಳೆ ನೀರು ಕಾಲುವೆಗಳ ಒತ್ತುವರಿಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ಉದ್ಭವಿಸಿದೆ. ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಪೀಠವು ರಾಜಕಾಲುವೆಯ ಒತ್ತುವರಿಯನ್ನು ತೆರವಿಗೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಬಿಬಿಎಂಪಿ ಮತ್ತು ಸರ್ಕಾರಕ್ಕೆ ತಾಕೀತು ಮಾಡಿದೆ.

Related Stories

No stories found.
Kannada Bar & Bench
kannada.barandbench.com