[ಬೆಂಗಳೂರು ಗಲಭೆ ಪ್ರಕರಣ] ಪೊಲೀಸರತ್ತ ಪೆಟ್ರೋಲ್ ತುಂಬಿದ ಬಾಟಲಿ ದಾಳಿಯು ಭಯೋತ್ಪಾದನಾ ಕೃತ್ಯ: ಕರ್ನಾಟಕ ಹೈಕೋರ್ಟ್‌

ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ ಮೇಲ್ನೋಟಕ್ಕೆ ಆರೋಪಿಗಳು ಕೃತ್ಯ ಎಸಗುವ ಉದ್ದೇಶದಿಂದಲೇ ಘಟನಾ ಸ್ಥಳದಲ್ಲಿ ಸೇರಿದ್ದರು ಎಂಬುದನ್ನು ನಿರೂಪಿಸುತ್ತದೆ ಎಂದಿರುವ ಹೈಕೋರ್ಟ್‌.
Bangalore Riots 2020
Bangalore Riots 2020
Published on

ಪೊಲೀಸ್ ಸಿಬ್ಬಂದಿ ಮತ್ತು ಪೊಲೀಸ್ ಠಾಣೆಗಳ ಮೇಲೆ ಪೆಟ್ರೋಲ್ ತುಂಬಿದ ಬಾಟಲಿಗಳನ್ನು ಬಳಸಿ ದಾಳಿ ನಡೆಸಿರುವುದು ಮೇಲ್ನೋಟಕ್ಕೆ ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯಿದೆ (ಯುಎಪಿಎ) ಸೆಕ್ಷನ್ 15ರ ಅಡಿ ‘ಭಯೋತ್ಪಾದನಾ ಕೃತ್ಯ’ ಎನಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಹೇಳಿದೆ.

ಬೆಂಗಳೂರಿನ ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ ಆರೋಪ ಸಂಬಂಧ ಭಾರತೀಯ ತನಿಖಾ ದಳ (ಎನ್‌ಐಎ) ದಾಖಲಿಸಿರುವ ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿ ಅತೀಕ್ ಅಹ್ಮದ್ ಮತ್ತಿತರ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿ ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಶಿವಶಂಕರ್ ಅಮರಣ್ಣವರ್ ಅವರ ನೇತೃತ್ವದ ವಿಭಾಗೀಯ ಪೀಠವು ಆದೇಶ ಮಾಡಿದೆ.

“ಪೊಲೀಸ್ ಠಾಣೆಯ ಮುಂದೆ ಉದ್ರಿಕ್ತರು ಗುಂಪುಗೂಡುವುದು ಮತ್ತು ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯ ಮೇಲೆ ಕಬ್ಬಿಣದ ರಾಡ್‌, ಪೆಟ್ರೋಲ್ ತುಂಬಿದ ಬಾಟಲ್‌ಗಳು ಮುಂತಾದ ಮಾರಕಾಸ್ತ್ರಗಳಿಂದ ದಾಳಿ ನಡೆಸುವುದು, ಗಲಭೆ ಉಂಟು ಮಾಡುವುದು ಇವೆಲ್ಲವೂ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಮಾಡಿದ ಭಯೋತ್ಪಾದನಾ ಕೃತ್ಯಗಳೆನಿಸುತ್ತವೆ. ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ ಮೇಲ್ನೋಟಕ್ಕೆ ಆರೋಪಿಗಳು ಕೃತ್ಯ ಎಸಗುವ ಉದ್ದೇಶದಿಂದಲೇ ಘಟನಾ ಸ್ಥಳದಲ್ಲಿ ಸೇರಿದ್ದರು ಎಂಬುದನ್ನು ನಿರೂಪಿಸುತ್ತದೆ’’ ಎಂದು ಪೀಠ ಹೇಳಿದೆ.

“ಜಾಮೀನು ನಿಯಮವಾದರೆ ಜೈಲು ಅಪವಾದ” ಎಂಬುದು ಸಾಂಪ್ರದಾಯಿಕ ಚಿಂತನೆ ಮತ್ತು ಜಾಮೀನು ಅರ್ಜಿ ಪರಿಶೀಲಿಸುವಾಗ ಆರೋಪ ದಂಡನಾ ಅಪರಾಧವೇ ಎಂಬುದನ್ನು ಪರಿಗಣಿಸಬೇಕಾಗುತ್ತದೆ. ಯುಎಪಿಎ ಕಾಯಿದೆ ಅಡಿ ಜಾಮೀನು ನೀಡುವಾಗ ಸೀಮಿತ ವ್ಯಾಪ್ತಿ ಇರುತ್ತದೆ. ಆರೋಪಕ್ಕೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಸಾಕಷ್ಟು ದಾಖಲೆ ಇರುವುದು ಕಂಡು ಬಂದಿದ್ದು, ಆರೋಪ ಸಮರ್ಥಿಸುವ ಅಂಶಗಳೂ ಇವೆ” ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಹಾಲಿ ಪ್ರಕರಣದಲ್ಲಿ ಯುಎಪಿಎ ಕಾಯಿದೆ ಸೆಕ್ಷನ್ 43ಡಿ(5) ಅನ್ವಯವಾಗುತ್ತದೆ. ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವ ಅಂಶಗಳು, ಅರ್ಜಿದಾರರ ವಿರುದ್ಧ ಮಾಡಿರುವ ಆರೋಪಗಳು ಮೇಲ್ನೋಟಕ್ಕೆ ನಿಜ ಎನಿಸುತ್ತಿವೆ ಎಂದೂ ನ್ಯಾಯಾಲಯ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಮೊಹಮ್ಮದ್ ತಾಹೀರ್ ಅವರು “ಎನ್‌ಐಎ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಕೆಲವು ಸಾಕ್ಷಿಗಳು ನೀಡಿರುವ ಹೇಳಿಕೆಗಳು ಮತ್ತು ಅದೇ ಸಾಕ್ಷಿಗಳು ಸಿಸಿಬಿ ಪೊಲೀಸರ ಮುಂದೆ ನೀಡಿದ್ದ ಹೇಳಿಕೆಗಳಿಗೆ ವ್ಯತ್ಯಾಸವಿದೆ. ಎನ್‌ಐಎ ತನಗೆ ಹೇಗೆ ಬೇಕೋ ಹಾಗೆ ಸಾಕ್ಷಿಗಳ ಹೇಳಿಕೆಗಳನ್ನು ತಿರುಚಿದೆ. ಲಭ್ಯವಿರುವ ಸಾಕ್ಷ್ಯಗಳ ಪ್ರಕಾರ ಆರೋಪಿಗಳು ದೊಂಬಿ ಅಥವಾ ಗಲಭೆಯಲ್ಲಿ ಭಾಗವಹಿಸಿರಲಿಲ್ಲ” ಎಂದರು.

Also Read
ಪಿಎಸ್‌ಐ ಹಗರಣ: ಜಾಮೀನು ಕೋರಿ ಸೆಷನ್ಸ್‌ ನ್ಯಾಯಾಲಯದ ಕದ ತಟ್ಟಿದ ಪೌಲ್‌; ಆಕ್ಷೇಪಣೆ ಸಲ್ಲಿಸಲು ಸಿಐಡಿಗೆ ನಿರ್ದೇಶನ

ಎನ್‌ಐಎ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್ ಅವರು “ಯುಎಪಿಎ ಕಾಯಿದೆ ಸೆಕ್ಷನ್ 43ಡಿ(5)ರ ಅಡಿ ಪ್ರಕರಣದ ಡೈರಿ ಮತ್ತು ಅಂತಿಮ ವರದಿಯನ್ನು ಆಧರಿಸಿ ಆರೋಪಿಗಳ ಮನವಿಯ ಕುರಿತು ನಿರ್ಧರಿಸಬಹುದು. ಮೇಲ್ನೋಟಕ್ಕೆ ಆರೋಪಿಗಳು ಭಯೋತ್ಪಾದನಾ ಕೃತ್ಯ ಎಸಗಲು ಮುಂದಾಗಿರುವುದು ದೃಢಪಟ್ಟಿದೆ. ಅದು ಯುಎಪಿಎ ಕಾಯಿದೆ ಸೆಕ್ಷನ್ 2(1)(ಎ) ಮತ್ತು ಸೆಕ್ಷನ್ 2(1)(ಕೆ) ವ್ಯಾಪ್ತಿಗೆ ಒಳಪಡುತ್ತದೆ. ಜೊತೆಗೆ ಸೆಕ್ಷನ್ 15ರ ಪ್ರಕಾರ ’ಭಯೋತ್ಪಾದನಾ ಕೃತ್ಯ’ ಎಸಗುವ ಉದ್ದೇಶದಿಂದಲೇ ಮಾರಕಾಸ್ತ್ರಗಳನ್ನು ಹೊಂದಿರುವುದು ಕಂಡುಬಂದಿದೆ” ಎಂದು ವಾದಿಸಿದ್ದರು.

Kannada Bar & Bench
kannada.barandbench.com