

ರಾಜ್ಯದ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರ ವಿರುದ್ಧ ಆಕ್ಷೇಪಾರ್ಹವಾದ ಹೇಳಿಕೆ ನೀಡದಂತೆ ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಬೆಂಗಳೂರಿನ ಸತ್ರ ನ್ಯಾಯಾಲಯ ಗುರುವಾರ ನಿರ್ಬಂಧ ವಿಧಿಸಿದೆ.
ಆಕ್ಷೇಪಾರ್ಹವಾದ ಹೇಳಿಕೆ ನೀಡದಂತೆ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಶಾಶ್ವತ ನಿರ್ಬಂಧ ಹೇರುವಂತೆ ಕೋರಿ ಸಚಿವ ಶಿವಾನಂದ ಪಾಟೀಲ್ ಸಲ್ಲಿಸಿರುವ ಮೂಲ ದಾವೆಯ ವಿಚಾರಣೆಯನ್ನು 27ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಜಿ ಎಸ್ ಪ್ರಶೀಲ ಕುಮಾರಿ ಅವರು ನಡೆಸಿದರು. ದಾವೆಯ ಸಂಬಂಧ ಯತ್ನಾಳ್‌ಗೆ ನೋಟಿಸ್ ಜಾರಿ ಮಾಡಿ ಮಾರ್ಚ್ 18ಕ್ಕೆ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.
ಬಸನಗೌಡ ಪಾಟೀಲ ಯತ್ನಾಳ್ ಅವರು ಹಲವು ಟಿ ವಿ ಸಂದರ್ಶನದಲ್ಲಿ ತಮ್ಮ ವಿರುದ್ಧ ಸುಳ್ಳು, ಆಧಾರರಹಿತ, ಆಕ್ಷೇಪಾರ್ಹ ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಆ ಮೂಲಕ ತಮ್ಮ ಗೌರವ, ಘನತೆ ಮತ್ತು ಖ್ಯಾತಿಗೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ, ತಮ್ಮ ವಿರುದ್ಧ ಯಾವುದೇ ರೀತಿ ಆಕ್ಷೇಪಾರ್ಹ ಹೇಳಿಕೆ ನೀಡದಂತೆ ಯತ್ನಾಳ್ ಅವರಿಗೆ ನಿರ್ಬಂಧ ವಿಧಿಸುವಂತೆ ದಾವೆಯಲ್ಲಿ ಸಚಿವ ಶಿವಾನಂದ ಪಾಟೀಲ್ ಕೋರಿದ್ದಾರೆ.