
ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಎಸ್. ಪಾಟೀಲ್ ಅವರು ಬಿಜೆಪಿಯ ಉಚ್ಚಾಟಿತ ಶಾಸಕ ಬಸವಗೌಡ ಪಾಟೀಲ್ ದಾಖಲಿಸಿರುವ ಮಾನಹಾನಿ ಪ್ರಕರಣವನ್ನು ಬಿಎನ್‌ಎಸ್ ಸೆಕ್ಷನ್ 356 ಅಡಿ ಪರಿಗಣಿಸುವ ಮೂಲಕ ಮಾಸಾಂತ್ಯದ ಒಳಗೆ ಸೂಕ್ತ ಆದೇಶ ಮಾಡುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಶಿವಾನಂದ ಪಾಟೀಲ್ ಅವರು ಬಿಎನ್‌ಎಸ್ ಸೆಕ್ಷನ್ 356 ಅಡಿ ದಾವೆ ಹೂಡಿದ್ದರು. ಆದರೆ, ಮ್ಯಾಜಿಸ್ಟ್ರೇಟ್ ಅವರು ಐಪಿಸಿ ಸೆಕ್ಷನ್ 500, 501, 502 ಅಡಿ ದೂರು ಪರಿಗಣಿಸುವ ಮೂಲಕ ಪ್ರಮಾದ ಎಸಗಿದ್ದಾರೆ ಎಂದು ಆಕ್ಷೇಪಿಸಿ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
“11.7.2023ರಂದು ಬಿಎನ್‌ಎಸ್ 356 ಅಡಿ ಪಾಟೀಲ್ ದೂರು ನೀಡಿದ್ದರು. ಆದರೆ, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಐಪಿಸಿ 500, 501, 502 ಅಡಿ ಪ್ರಕರಣ ಪರಿಗಣಿಸಿದೆ. ಬಿಎನ್‌ಎಸ್ ಜಾರಿಗೆ ಬಂದ ಮೇಲೆ ಶಿವಾನಂದ ಪಾಟೀಲ್ ಅವರು ದೂರು ನೀಡಿದ್ದು, ಬಿಎನ್‌ಎಸ್ 2023 ಮತ್ತು ಬಿಎನ್‌ಎಸ್‌ಎಸ್ ಸೆಕ್ಷನ್ 351 ಅಡಿಯೇ ಪ್ರಕ್ರಿಯೆ ನಡೆಯಬೇಕು. ಈ ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ಅವರು ವಿವೇಚನೆ ಬಳಸಿಲ್ಲ ಮತ್ತು ಹೈಕೋರ್ಟ್‌ನ ಹಿಂದಿನ ಆದೇಶವನ್ನು ಪಾಲಿಸಿಲ್ಲ” ಎಂದು ನ್ಯಾಯಾಲಯವು ಹೇಳಿದೆ.
“ಜೂನ್ 16ರಂದು ಪಾಟೀಲ್ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ತಮ್ಮ ವಕೀಲರ ಜೊತೆ ಹಾಜರಾಗಬೇಕು. ಜೂನ್ 16ರಿಂದ ಆನಂತರದ ಎರಡು ವಾರಗಳಲ್ಲಿ ಸೂಕ್ತ ಆದೇಶವನ್ನು ಮ್ಯಾಜಿಸ್ಟ್ರೇಟ್ ಪ್ರಕಟಿಸಬೇಕು. ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆದೇಶ ಮಾಡುವಾಗ ಹಾಲಿ ನಿರ್ದೇಶನ ಮತ್ತು ಹಿಂದಿನ ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.
ಯತ್ನಾಳ್ ಪ್ರತಿನಿಧಿಸಿದ್ದ ವಕೀಲ ವೆಂಕಟೇಶ್ ದಳವಾಯಿ ಅವರು “ಐಪಿಸಿ ಸೆಕ್ಷನ್ 500, 501, 502 ರ ಅಡಿ ಪಾಟೀಲ್ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ. ಇದು ವಾಸ್ತವಿಕವಾಗಿ ಸರಿಯಾದ ವಿಚಾರವಲ್ಲ. ಪಾಟೀಲ್ ಅವರು ಬಿಎನ್‌ಎಸ್ ಸೆಕ್ಷನ್ 356ರ ಅಡಿ ದೂರು ನೀಡಿದ್ದಾರೆ. ಇದನ್ನು ಮ್ಯಾಜಿಸ್ಟ್ರೇಟ್ ತಪ್ಪಾಗಿ ಪರಿಗಣಿಸಿದ್ದಾರೆ. ಹೀಗಾಗಿ, ಈ ಹಿಂದೆ ಹೈಕೋರ್ಟ್ ನೀಡಿರುವ ಆದೇಶಕ್ಕೆ ವಿರುದ್ಧವಾಗಿ ಆದೇಶ ಮಾಡಿರುವುದನ್ನು ಬದಿಗೆ ಸರಿಸಿ, ಹೊಸದಾಗಿ ಪ್ರಕರಣ ಪರಿಗಣಿಸಲು ಆದೇಶಿಸಬೇಕು” ಎಂದು ಕೋರಿದರು.
ಪಾಟೀಲ್ ಪರ ವಕೀಲೆ “ಅರ್ಜಿಯಲ್ಲಿ ಯಾವುದೇ ಮೆರಿಟ್ ಇಲ್ಲ. ಅದನ್ನು ವಜಾ ಮಾಡಬೇಕು ಎಂದು ಕೋರಿದರು.
ಶಿವಾನಂದ ಪಾಟೀಲ್ ದೂರು ಆಧರಿಸಿ 16.7.2024ರಂದು ವಿಚಾರಣಾ ನ್ಯಾಯಾಲಯವು ಪ್ರಕರಣದ ಸಂಜ್ಞೇ ಪರಿಗಣಿಸಿ, ಯತ್ನಾಳ್‌ಗೆ ನೋಟಿಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಯತ್ನಾಳ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅದನ್ನು ಹೊಸದಾಗಿ ಪರಿಗಣಿಸುವಂತೆ ಹೈಕೋರ್ಟ್ ವಿಚಾರಣಾಧೀನ ನ್ಯಾಯಾಲಯಕ್ಕೆ ಆದೇಶಿಸಿತ್ತು. ಆನಂತರ 3.12.2024ರಂದು ಮ್ಯಾಜಿಸ್ಟ್ರೇಟ್ ಅವರು ಮತ್ತೊಮ್ಮೆ ದಾಖಲೆಗಳನ್ನು (ದೂರಿನ ಪ್ರತಿ, ಸ್ವ ಹೇಳಿಕೆ) ಅಡಕಗೊಳಿಸದೇ ನೋಟಿಸ್ ಜಾರಿ ಮಾಡಿದ್ದರು. ಇಲ್ಲಿ ತನ್ನ ಅಭಿಪ್ರಾಯ ಮಂಡಿಸಲು ಅವಕಾಶ ನೀಡಿಲ್ಲ ಎಂದು ಆಕ್ಷೇಪಿಸಿ, ಸಹಜ ನ್ಯಾಯತತ್ವ ಉಲ್ಲೇಖಿಸಲಾಗಿದೆ ಎಂದು ಯತ್ನಾಳ್ ಅರ್ಜಿ ಸಲ್ಲಿಸಿದ್ದರು. ಇದನ್ನು ಮತ್ತೆ ಹೊಸದಾಗಿ ಪರಿಣಿಸುವಂತೆ 7.3.2025ರಂದು ಹೈಕೋರ್ಟ್ ಆದೇಶಿಸಿತ್ತು. ಆನಂತರವೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಬಿಎನ್‌ಎಸ್‌ಎಸ್ ಸೆಕ್ಷನ್ 223(1)ರ ಅಡಿ 26.3.2025ರಂದು ಯತ್ನಾಳ್‌ಗೆ ನೋಟಿಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಯತ್ನಾಳ್ ಮೂರನೇ ಬಾರಿಗೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಧಾನಸಭೆ ಚುನಾವಣಾ ಸಮಾವೇಶದಲ್ಲಿ ಯತ್ನಾಳ್ ಅವರು ಶಿವಾನಂದ ಪಾಟೀಲ್ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದರು. ಇದರಿಂದ ಶಿವಾನಂದ ಪಾಟೀಲ್ ಅವರು ವಿಚಾರಣಾಧೀನ ನ್ಯಾಯಾಲಯದಲ್ಲಿ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.