

ಚಿತ್ರನಟ ದರ್ಶನ್ ವಿರುದ್ಧದ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನುಡಿಯಲು ಮೃತ ರೇಣುಕಾಸ್ವಾಮಿ ಅವರ ತಂದೆ ಕಾಶಿನಾಥಯ್ಯ ಮತ್ತು ತಾಯಿ ರತ್ನಮ್ಮಗೆ ಸಮನ್ಸ್ ಜಾರಿಗೊಳಿಸಿರುವ ಬೆಂಗಳೂರಿನ ಸತ್ರ ನ್ಯಾಯಾಲಯವು ಡಿಸೆಂಬರ್ 17ರಂದು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನಿರ್ದೇಶಿಸಿದೆ.
ಪ್ರಕರಣ ಸಂಬಂಧ ಸಾಕ್ಷ್ಯ ನುಡಿಯಲು ರೇಣುಕಾಸ್ವಾಮಿಯ ತಂದೆ ಮತ್ತು ತಾಯಿಗೆ (ಸಾಕ್ಷಿ ಸಂಖ್ಯೆ 7 ಹಾಗೂ 8) ಸಮನ್ಸ್ ಜಾರಿಗೊಳಿಸಬೇಕು ಎಂದು ಕೋರಿ ತನಿಖಾಧಿಕಾರಿಗಳು (ಪ್ರಾಸಿಕ್ಯೂಷನ್) ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿ ನ್ಯಾಯಾಧೀಶ ಐ ಪಿ ನಾಯಕ್ ಅವರು ಗುರುವಾರ ಈ ಆದೇಶ ಮಾಡಿದ್ದಾರೆ.
ದರ್ಶನ್ ಸೇರಿದಂತೆ ಪ್ರಕರಣದ 17 ಆರೋಪಿಗಳ ವಿರುದ್ಧ ಕೊಲೆ, ಅಪಹರಣ, ಹಲ್ಲೆ ಅಪರಾಧಿಕ ಒಳಸಂಚು, ಅಕ್ರಮ ಕೂಟ ರಚನೆ, ಹಣ ವಸೂಲಿ, ಅಕ್ರಮ ಬಂಧನ ಸೇರಿದಂತೆ ಇನ್ನಿತರ ಆರೋಪಗಳನ್ನು ನಿಗದಿಪಡಿಸಿ ನವೆಂಬರ್ 3ರಂದು ನ್ಯಾಯಾಲಯ ಆದೇಶಿಸಿತ್ತು. ಜೊತೆಗೆ ನವೆಂಬರ್ 10ರಿಂದ ಪ್ರಕರಣದ ಮುಖ್ಯ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತ್ತು. ಅದಾದ ಬಳಿಕ ಪ್ರಕರಣದ ಕುರಿತು ನ್ಯಾಯಾಲಯ ನಡೆಸುತ್ತಿರುವ ಮೊದಲ ಸಾಕ್ಷಿ ವಿಚಾರಣೆ ಇದೇ ಆಗಿದೆ. ನ್ಯಾಯಾಲದಯ ಸೂಚನೆಯಂತೆ ಡಿಸೆಂಬರ್ 17ರಂದು ಮೃತ ರೇಣುಕಾಸ್ವಾಮಿಯ ತಂದೆ-ತಾಯಿ ವಿಚಾರಣೆಗೆ ಖುದ್ದು ಹಾಜರಾಗಿ, ತಮ್ಮ ಸಾಕ್ಷ್ಯ ದಾಖಲಿಸಬೇಕಿದೆ.
ಆರೋಪಿಗಳ ವಾದಕ್ಕೆ ಮಾನ್ಯತೆ: ರೇಣುಕಾಸ್ವಾಮಿ ಪೋಷಕರ ಸಾಕ್ಷ್ಯ ದಾಖಲಿಸಬೇಕು ಎಂಬ ಪ್ರಾಸಿಕ್ಯೂಷನ್ ಮನವಿಗೆ ಆಕ್ಷೇಪಿಸಿದ್ದ ದರ್ಶನ್, ಜಗದೀಶ್ ಸೇರಿ ಇತರೆ ಆರೋಪಿಗಳ ಪರ ವಕೀಲರು, ಮೊದಲಿಗೆ ದೂರುದಾರರು, ಪ್ರತ್ಯಕ್ಷ ದರ್ಶಿಗಳು ಮತ್ತು ಸಾಂದರ್ಭಿಕ ಸಾಕ್ಷಿ ವಿಚಾರಣೆ ನಡೆಸುವುದು ಕಡ್ಡಾಯ. ನಂತರವಷ್ಟೇ ಪ್ರಕರಣದ ಸಾಕ್ಷಿಗಳು ಅಂದರೆ ಮೃತನ ತಂದೆ ತಾಯಿ ಅವರ ಸಾಕ್ಷಿಗಳ ವಿಚಾರಣೆ ನಡೆಸಬೇಕು. ಆದ್ದರಿಂದ ತನಿಖಾಧಿಕಾರಿಗಳ ಮನವಿ ತಿರಸ್ಕರಿಸಬೇಕು. ಮೊದಲಿಗೆ ದೂರುದಾರರು, ಪ್ರತ್ಯಕ್ಷದರ್ಶಿಗಳು ಮತ್ತು ಸಾಂದರ್ಭಿಕ ಸಾಕ್ಷಿಗಳ ವಿಚಾರಣೆಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಪ್ರಾಸಿಕ್ಯೂಷನ್ ಮನವಿಯಂತೆ ಸಾಕ್ಷಿ ವಿಚಾರಣೆ: ಪ್ರಾಸಿಕ್ಯೂಷನ್ ಮನವಿಯಂತೆ ಸಾಕ್ಷಿಗಳಿಗೆ ಸಮನ್ಸ್ ಹೊರಡಿಸಿ, ನಂತರ ಅವರ ಸಾಕ್ಷ್ಯ ದಾಖಲಿಸಿಕೊಳ್ಳುವುದು ನ್ಯಾಯಾಲಯದ ಕರ್ತವ್ಯ. ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್ 131(1) ಪ್ರಕಾರ ಪ್ರಾಸಿಕ್ಯೂಷನ್ ಪರವಾಗಿ ಹಾಜರುಪಡಿಸಬಹುದಾದಂತಹ ಸಾಕ್ಷಿಯನ್ನು ತೆಗೆದುಕೊಳ್ಳಬಹುದಾಗಿದೆ. ಅದರರ್ಥ ಇಂತಹದ್ದೇ ಸಾಕ್ಷಿಯನ್ನು ಮೊದಲಿಗೆ ಹಾಜರುಪಡಿಸುವಂತೆ ಪ್ರಾಸಿಕ್ಯೂಷನ್‌ಗೆ ನ್ಯಾಯಾಲಯವು ನಿರ್ದೇಶನ ನೀಡುವಂತಿಲ್ಲ. ಹಾಗಾಗಿ, ಆರೋಪಿಗಳ ವಾದಕ್ಕೆ ಮಾನ್ಯತೆ ಇಲ್ಲವಾಗಿದೆ. ಆದರೆ, ತಮ್ಮ ಪ್ರತಿವಾದದ (ಡಿಫೆನ್ಸ್) ರಕ್ಷಣೆಗಾಗಿ ಸಾಕ್ಷಿಗಳ ಪಾಟೀ ಸವಾಲು ಪ್ರಕ್ರಿಯೆ ಮುಂದೂಡಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಆರೋಪಿಗಳು ಸ್ವತಂತ್ರರಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಪ್ರಾಸಿಕ್ಯೂಷನ್ ಸಾಕ್ಷಿಯನ್ನು ವಿಚಾರಣೆ ನಡೆಸಿದ ದಿನವೇ ಆರೋಪಿಗಳು ಪಾಟೀ ಸವಾಲು ಪ್ರಕ್ರಿಯೆ ನಡೆಸಬಹುದು. ಒಂದೊಮ್ಮೆ ಸಾಕ್ಷಿಗಳನ್ನು ಪ್ರಾಸಿಕ್ಯೂಷನ್ ವಿಚಾರಣೆ ನಡೆಸಿದ ನಂತರ, ಅದು ಆರೋಪಿಗಳ ಪ್ರತಿವಾದದ (ಡಿಫೆನ್ಸ್) ಮೇಲೆ ಪರಿಣಾಮ ಉಂಟು ಮಾಡುವಂತಿದ್ದರೆ, ಆಗ ನ್ಯಾಯಾಲಯವು ತನ್ನ ವಿವೇಚನಾಧಿಕಾರ ಬಳಸಿ ಪಾಟೀ ಸವಾಲು ಪ್ರಕ್ರಿಯೆ ಮುಂದೂಡುತ್ತದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ನುಡಿದಿದೆ.
ಟಿ ವಿ ಅಳವಡಿಸಲು ಸೂಚನೆ: ಖಿನ್ನತೆಯಿಂದ ಹೊರಬರಲು ತಮ್ಮ ಸೆಲ್‌ನಲ್ಲಿ ಟಿವಿ ಅಳವಡಿಸಬೇಕು ಎಂದು ಪ್ರಕರಣದ 12ನೇ ಆರೋಪಿ ಲಕ್ಷ್ಮಣ್ ಬುಧವಾರ ಮನವಿ ಮಾಡಿದ್ದರು. ಈ ಮನವಿ ಪುರಸ್ಕರಿಸಿರುವ ನ್ಯಾಯಾಲಯವು ಜೈಲು ಕೈಪಿಡಿ ಮತ್ತು ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಕಾರ್ಯದರ್ಶಿ ಸಲ್ಲಿಸಿರುವ ವರದಿ ಪ್ರಕಾರ, ಪ್ರಕರಣದ ಆರೋಪಿಗಳಾದ ದರ್ಶನ್, ಜಗದೀಶ್, ಅನುಕುಮಾರ್, ನಾಗರಾಜು, ಲಕ್ಷ್ಮಣ್ ಮತ್ತು ಪ್ರದೋಷ್ ರಾವ್ ಅವರಿರುವ ಜೈಲಿನ ಸೆಲ್‌ನಲ್ಲಿ ಟಿ ವಿ ಅಳವಡಿಸಿ ವೀಕ್ಷಣೆ ಮಾಡಲು ಆರೋಪಿಗಳಿಗೆ ಅನುಮತಿಸಬೇಕು ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶಿಸಿದೆ.
ಪ್ರದೋಷ್‌ಗೆ ನಾಲ್ಕು ದಿನ ಜಾಮೀನು: ಇತ್ತಿಚೆಗೆ ತಮ್ಮ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ತಿಥಿ ಕಾರ್ಯ ನೆರವೇರಿಸಲು ಡಿಸೆಂಬರ್ 4ರಿಂದ 23ರವರೆಗೆ ಜಾಮೀನು ನೀಡಬೇಕು ಎಂದು ಕೋರಿ 14ನೇ ಆರೋಪಿ ಪ್ರದೋಷ್ ರಾವ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಾಲಯವು ಡಿಸೆಂಬರ್ 4ರಿಂದ 7ರವರೆಗೆ ಮಧ್ಯಂತರ ಜಾಮೀನು ನೀಡಿದೆ. ಪ್ರದೋಷ್ ಮೃತರ ಏಕೈಕ ಪುತ್ರ. ತಂದೆ ಮರಣದ ನಂತರ ತನ್ನ ಮೇಲಿನ ಹೊಣೆಗಾರಿಕೆಯನ್ನು ಪ್ರದೋಷ್ ನಿರ್ವಹಿಸಬೇಕಿದೆ. ಹಾಗಾಗಿ ಡಿಸೆಂಬರ್ 4ರಿಂದ 7ರವರೆಗೆ ಮಧ್ಯಂತರ ಜಾಮೀನು ನೀಡಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿದೆ.