
ತನಗೆ ನೀಡಲಾಗಿದ್ದ ಭದ್ರತಾ ಅನುಮತಿ ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ವೈಮಾನಿಕ ಸರಕು ಸೇವೆ ಒದಗಿಸುವ ಟರ್ಕಿ ಮೂಲದ ಸೆಲೆಬಿ ಏರ್ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಿತು.
ನ್ಯಾಯಮೂರ್ತಿ ಸಚಿನ್ ದತ್ತ ಬುಧವಾರ ಪ್ರಕರಣದ ವಿಚಾರಣೆ ಮುಂದುವರಿಸಲಿದ್ದಾರೆ. ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕಂಪನಿಯ ಬಗ್ಗೆ ರಾಷ್ಟ್ರೀಯ ಭದ್ರತಾ ಕಳವಳಗಳಿವೆ ಎಂದರು. "ಶತ್ರು ಹತ್ತು ಬಾರಿ ಯತ್ನಿಸಿ ಒಮ್ಮೆ ಯಶಸ್ವಿಯಾಗಬಹುದು, ಆದರೆ ದೇಶವು ಮಾತ್ರ ಪ್ರತಿ ಬಾರಿಯೂ ಯಶಸ್ವಿಯಾಗಬೇಕಾಗುತ್ತದೆ," ಎಂದು ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ಪ್ರತಿಕೂಲ ಘಟನೆಗಳು ಸಂಭವಿಸಿದ ನಂತರ ವಿಷಾದಿಸುವುದಕ್ಕಿಂತ ಸುರಕ್ಷಿತವಾಗಿರುವುದು ಉತ್ತಮ ಎಂದಿತು.
ವಿಚಾರಣೆ ಸಮಯದಲ್ಲಿ, ಸೆಲೆಬಿ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟ್ಗಿ, " ಸಾರ್ವಜನಿಕ ಗ್ರಹಿಕೆಯನ್ನು ಬಳಸಿಕೊಂಡು ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವವರ ಉದ್ಯೋಗ ಕಸಿದುಕೊಳ್ಳಲು ಸಾಧ್ಯವಿಲ್ಲ. ಸೆಲೆಬಿ ಅಪಾಯಕಾರಿ ಕಂಪನಿಯಲ್ಲ” ಎಂದರು.
ಕಂಪನಿಯು 17 ವರ್ಷಗಳಿಂದ ಭಾರತದಲ್ಲಿ ಯಾವುದೇ ದುರ್ಘಟನೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಭದ್ರತಾ ಅನುಮತಿ ರದ್ದುಗೊಳಿಸುವ ಮುನ್ನ ಅದಕ್ಕೆ ಯಾವುದೇ ಸೂಚನೆ ನೀಡಲಾಗಿಲ್ಲ ಎಂದು ರೋಹಟಗಿ ಹೇಳಿದರು.
ಆದರೂ ಪ್ರಕರಣ ಸೂಕ್ಷ್ಮವಾಗಿದೆ ಎಂದ ನ್ಯಾ. ದತ್ತ " ನೋಟಿಸ್ ಪ್ರತಿಕೂಲ ಪರಿಣಾಮ ಬೀರಬಹುದು. ನಿಮಗೆ ನೋಟಿಸ್ ನೀಡಿದ ತಕ್ಷಣ ನೀವು ರಾಷ್ಟ್ರೀಯ ಭದ್ರತೆಗೆ ಹಾನಿಕರವಾದ ಏನಾದರೂ ಮಾಡಬಹುದು" ಎಂದರು.
ವಿಮಾನ ಭದ್ರತಾ ನಿಯಮಗಳ ಅಡಿಯಲ್ಲಿ , ವಿಶೇಷವಾಗಿ ನಿಯಮ 12 ರ ಅಡಿಯಲ್ಲಿ, ಸಂಭಾವ್ಯ ಬೆದರಿಕೆ ಇದ್ದಲ್ಲಿ ಪರವಾನಗಿಯನ್ನು ರದ್ದುಗೊಳಿಸಲು ಅನುಮತಿಸುವ ರಾಷ್ಟ್ರೀಯ ಭದ್ರತೆಯ ಮೇಲಿನ ಕಳವಳಗಳಿಂದಾಗಿ ಭದ್ರತಾ ಅನುಮತಿ ರದ್ದುಗೊಳಿಸಲಾಗಿದೆ ಎಂದು ಎಸ್‌ಜಿ ಮೆಹ್ತಾ ಸಮರ್ಥಿಸಿಕೊಂಡರು.
ನಾಗರಿಕ ವಿಮಾನಯಾನ ಸಚಿವಾಲಯ ಮೇ 15, 2025 ರಂದು ರಾಷ್ಟ್ರೀಯ ಭದ್ರತೆಯ ಕಾರಣಗಳಿಗಾಗಿ ಸೆಲೆಬಿಯ ಭದ್ರತಾ ಅನುಮತಿ ಹಿಂತೆಗೆದುಕೊಂಡಿತ್ತು. ಇತ್ತೀಚಿನ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಸಂದರ್ಭದಲ್ಲಿ ಟರ್ಕಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಆರೋಪದಡಿ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚಿದ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿತ್ತು.
ಭಾರತ ಸರ್ಕಾರದ ನಿರ್ಧಾರ ಮನಸೋಇಚ್ಛೆಯಾಗಿದ್ದು ಅದಕ್ಕೆ ನಿರ್ದಿಷ್ಟ ಕಾರಣಗಳಿಲ್ಲ ಎಂದು ಟರ್ಕಿಯ ಸೆಲೆಬಿ ಏವಿಯೇಷನ್ ಹೋಲ್ಡಿಂಗ್‌ನ ಭಾರತೀಯ ಅಂಗಸಂಸ್ಥೆಯಾದ ಸೆಲೆಬಿ ಏರ್ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ್ಯಾಯಾಲಯದ ಮೆಟ್ಟಿಲೇರಿತ್ತು.