ಪೆರೋಲ್‌ ಪಡೆಯಲು ಸುಳ್ಳು ವೈದ್ಯಕೀಯ ದಾಖಲೆ ನೀಡುವ ವೈದ್ಯರ ವಿರುದ್ಧ ಎಚ್ಚರ ವಹಿಸಿ: ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

“ಹಲವು ಪ್ರಕರಣಗಳಲ್ಲಿ ಪೆರೋಲ್‌ ಕೋರುವ ಸಜಾ ಬಂದಿಗಳು, ತಮ್ಮ ಅರ್ಜಿಯೊಂದಿಗೆ ಸಲ್ಲಿಸಿದ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದಾಗ ಅವೆಲ್ಲಾ ಏಕರೂಪದ ವೈದ್ಯಕೀಯ ದಾಖಲೆಗಳಾಗಿವೆ ಎಂಬ ಸಂಗತಿ ಬೆಳಕಿಗೆ ಬಂದಿದೆ” ಎಂದು ತಿಳಿಸಿದ ಸರ್ಕಾರದ ವಕೀಲರು.
Justice Suraj Govindraj
Justice Suraj Govindraj
Published on

“ಸಜಾ ಬಂದಿಗಳು ಪೆರೋಲ್‌ ಪಡೆಯಲು ಅನುಕೂಲವಾಗುವಂತೆ ಸುಳ್ಳು ವೈದ್ಯಕೀಯ ದಾಖಲೆಗಳನ್ನು ನೀಡುತ್ತಿರುವ ವೈದ್ಯರ ವಿರುದ್ಧ ಸರ್ಕಾರ ಎಚ್ಚರವಹಿಸಬೇಕು” ಎಂದು ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ಸೂಚಿಸಿದೆ.

ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯ ಚಿಕಿತ್ಸೆಗೆ ಆಸರೆಯಾಗಲು ಪೆರೋಲ್‌ ನೀಡಬೇಕು ಎಂದು ಕೋರಿ ಅಪರಾಧ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸಜಾಬಂದಿಯೊಬ್ಬರು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸರ್ಕಾರದ ಪರ ವಕೀಲರು “ಹಲವು ಪ್ರಕರಣಗಳಲ್ಲಿ ಪೆರೋಲ್‌ ಕೋರುವ ಸಜಾ ಬಂದಿಗಳು, ತಮ್ಮ ಅರ್ಜಿಯೊಂದಿಗೆ ಸಲ್ಲಿಸಿದ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದಾಗ ಅವೆಲ್ಲಾ ಏಕರೂಪದ ವೈದ್ಯಕೀಯ ದಾಖಲೆಗಳಾಗಿವೆ ಎಂಬ ಸಂಗತಿ ಬೆಳಕಿಗೆ ಬಂದಿದೆ” ಎಂದು ಪೀಠಕ್ಕೆ ತಿಳಿಸಿದರು.

ಈ ಹೇಳಿಕೆಗೆ ಅಚ್ಚರಿ ವ್ಯಕ್ತಪಡಿಸಿದ ಪೀಠವು “ಇದು ನಿಜಕ್ಕೂ ಆಘಾತಕಾರಿ ವಿಚಾರ. ಇಂತಹ ಬೆಳವಣಿಗೆಗಳ ಮೇಲೆ ರಾಜ್ಯ ಸರ್ಕಾರ ಕಣ್ಣಿಡಬೇಕು. ಸುಳ್ಳು ವೈದ್ಯಕೀಯ ದಾಖಲೆಗಳನ್ನು ವಿತರಿಸುವ ವೈದ್ಯರ ಬಗ್ಗೆ ಎಚ್ಚರ ವಹಿಸಬೇಕು. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಮೌಖಿಕವಾಗಿ ಸೂಚಿಸಿದರು.

Kannada Bar & Bench
kannada.barandbench.com