ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಭಾರತ್ ಜೋಡೋ ಯಾತ್ರೆಗೆ ನಿಯಂತ್ರಣ ಹೇರುವಂತೆ ಕೋರಿ ಕೇರಳ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ವಕೀಲರೊಬ್ಬರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಪರಿಹಾರ ನೀಡಲು ಅಲ್ಲಿನ ಉಚ್ಚ ನ್ಯಾಯಾಲಯ ಮಂಗಳವಾರ ನಿರಾಕರಿಸಿದೆ [ವಕೀಲ ವಿಜಯನ್ ಕೆ ವಿ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].
ಯಾತ್ರೆಗೆ ಅಗತ್ಯ ಅನುಮತಿಗಳನ್ನು ಪಡೆಯಲಾಗಿದೆ ಎಂಬ ರಾಜ್ಯ ಸರ್ಕಾರದ ಹೇಳಿಕೆಯನ್ನು ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಪರಿಗಣಿಸಿದರು.
ಟ್ರಾಫಿಕ್ ಜಾಮ್ ಮತ್ತು ಪ್ರಮುಖ ರಸ್ತೆಗಳಲ್ಲಿ ಉಂಟಾಗುವ ಅನಾನುಕೂಲತೆಯ ಕಾರಣಕ್ಕೆ ಮೆರವಣಿಗೆಯನ್ನು ನಿಯಂತ್ರಿಸುವಂತೆ ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೂ ಆಗಿರುವ ವಕೀಲ ವಿಜಯನ್ ಕೆ ವಿ ಮನವಿ ಮಾಡಿದ್ದರು.
ರಾಹುಲ್ ಮತ್ತು ಕಾಂಗ್ರೆಸ್ ನೇತಾರರು ಹಮ್ಮಿಕೊಂಡಿರುವ ಯಾತ್ರೆ ಇಡೀ ರಸ್ತೆಯನ್ನು ಆಕ್ರಮಿಸಿಕೊಳ್ಳುತ್ತಿದ್ದು ಸಾರ್ವಜನಿಕರ ಓಡಾಟ ಮತ್ತು ವಾಹನ ಸಂಚಾರವನ್ನು ಗಂಟೆಗಟ್ಟಲೆ ತಡೆಹಿಡಿಯಲಾಗುತ್ತದೆ. ಪಾದಚಾರಿಗಳಿಗೂ ಇದರಿಂದ ತೊಂದರೆ ಉಂಟಾಗಿದೆ. ಹೀಗಾಗಿ ಯಾತ್ರೆಯಲ್ಲಿ ಭಾಗವಹಿಸುವವರು ಅರ್ಧದಷ್ಟು ರಸ್ತೆಯನ್ನು ಬಳಸಿ ಉಳಿದರ್ಧವನ್ನು ವಾಹನ ಹಾಗೂ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಬಿಟ್ಟುಕೊಡುವಂತೆ ನ್ಯಾಯಾಲಯ ಆದೇಶಿಸಬೇಕಿದೆ ಎಂದು ಕೋರಿದ್ದರು.