ಡಿಜಿಟಲ್ ಸಾಧನಗಳಲ್ಲಿ ನಕಲಿ ಸಾಕ್ಷ್ಯ: ಬಾಂಬೆ ಹೈಕೋರ್ಟ್ ಮೊರೆ ಹೋದ ಭೀಮಾ ಕೊರೆಗಾಂವ್ ಆರೋಪಿ ಪ್ರೊ. ಶೊಮಾ ಸೇನ್

ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸೇನ್‌ ಅವರನ್ನು ಬಂಧಿಸಲಾಗಿತ್ತು. ಅಂದಿನಿಂದ ಜಾಮೀನು ಸಿಗದೆ ಅವರು ನ್ಯಾಯಾಂಗ ವಶದಲ್ಲಿದ್ದಾರೆ.
ಡಿಜಿಟಲ್ ಸಾಧನಗಳಲ್ಲಿ ನಕಲಿ ಸಾಕ್ಷ್ಯ: ಬಾಂಬೆ ಹೈಕೋರ್ಟ್ ಮೊರೆ ಹೋದ ಭೀಮಾ ಕೊರೆಗಾಂವ್ ಆರೋಪಿ ಪ್ರೊ. ಶೊಮಾ ಸೇನ್

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಪ್ರಶ್ನಿಸಿ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಶೊಮಾ ಸೇನ್ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಹ ಆರೋಪಿ ರೋನಾ ವಿಲ್ಸನ್‌ ಅವರಿಗೆ ಸೇರಿದ ಡಿಜಿಟಲ್ ಸಾಧನಗಳಲ್ಲಿ ಹುದುಗಿಡಲಾದ ಸಾಕ್ಷ್ಯಗಳ ಆಧಾರದಲ್ಲಿ ಪ್ರಾಸಿಕ್ಯೂಷನ್‌ ಪ್ರಕರಣ ರೂಪಿಸಿದೆ ಎಂದು ಸೇನ್‌ ವಾದಿಸಿದ್ದಾರೆ.

ಈ ದಾಖಲೆಗಳಲ್ಲಿ ವಿಲ್ಸನ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಸದಸ್ಯರ ನಡುವೆ ವಿನಿಮಯವಾಗಿದೆ ಎನ್ನಲಾದ ಪತ್ರಗಳ ಸರಣಿ ಇದೆ. ತನ್ನ ವಿರುದ್ಧದ ಸಾಕ್ಷ್ಯಗಳು ನಕಲಿ ಮತ್ತು ಊಹಾಪೋಹಗಳಿಂದ ಕೂಡಿದ್ದು ಅವುಗಳನ್ನು ಡಿಜಿಟಲ್‌ ಸಾಧನಗಳಲ್ಲಿ ಹುದುಗಿರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಎನ್ಐಎ ನೀಡಿದ ಎಲೆಕ್ಟ್ರಾನಿಕ್ ಸಾಕ್ಷ್ಯಗಳ ʼಕ್ಲೋನ್ ಪ್ರತಿʼಗಳನ್ನುಸ್ವತಂತ್ರ ಮೂಲದಿಂದ ತನಿಖೆ ನಡೆಸಿದಾಗ ಅವು ನಕಲಿಯಾಗಿದ್ದು ಅಪಾಯಕಾರಿ ಮಾಲ್‌ವೇರ್‌ಗಳ ಮೂಲಕ ಸಾಧನಗಳಿಗೆ ಅಳವಡಿಸಲಾಗಿರುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

Also Read
[ಭೀಮಾ ಕೋರೆಂಗಾವ್‌ ಪ್ರಕರಣ] ರೋನಾ ವಿಲ್ಸನ್‌ ಕಂಪ್ಯೂಟರ್‌ ಮೇಲೆ ಹೊರಗಿನಿಂದ ಮಾಲ್‌ವೇರ್‌ ದಾಳಿ: ಆರ್ಸೆನಲ್‌ ವರದಿ

ಮಾಲ್‌ವೇರ್‌ಗಳ ಅಸ್ತಿತ್ವದ ಬಗ್ಗೆ ಆ ಮೂಲಕ ಇಲೆಕ್ಟ್ರಾನಿಕ್‌ ಪುರಾವೆಗಳನ್ನು ಹಾಳುಗೆಡವಲಾದ ಕುರಿತಂತೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಮೌನ ವಹಿಸಿದೆ ಎಂದು ಅವರು ತಿಳಿಸಿದ್ದು ಪ್ರಾಸಿಕ್ಯೂಷನ್ ಅವಲಂಬಿಸಿರುವ ಇಲೆಕ್ಟ್ರಾನಿಕ್ ದಾಖಲೆಗಳು ಸತ್ಯ ಮತ್ತು ವಿಶ್ವಾಸಾರ್ಹತೆಯ ಮಾನದಂಡಗಳಿಗೆ ಪೂರಕವಾಗಿಲ್ಲ. ಆದ್ದರಿಂದ ಇವುಗಳನ್ನು ಸಾಕ್ಷಿಯಾಗಿ ಪರಿಗಣಿಸಬಾರದು ಎಂಬುದಾಗಿ ಕೋರಿದರು.

ಅಮೆರಿಕ ಮೂಲದ ವಿಧಿವಿಜ್ಞಾನ ಸಲಹಾ ಸಂಸ್ಥೆ ಆರ್ಸೆನಲ್ ಕನ್ಸಲ್ಟಿಂಗ್‌ನ ವರದಿಯನ್ನು ಸೇನ್‌ ಅವಲಂಬಿಸಿದ್ದಾರೆ. ರೋನಾ ವಿಲ್ಸನ್‌ ಅವರಿಂದ ವಶಪಡಿಸಿಕೊಳ್ಳಲಾದ ಕಂಪ್ಯೂಟರ್‌ನಲ್ಲಿ ಸುಮಾರು ಎರಡು ವರ್ಷಗಳ ಕಾಲ ಮಾಲ್‌ವೇರ್‌ ಅಳವಡಿಸಲಾಗಿತ್ತು ಎಂದು ಅದು ವರದಿ ನೀಡಿತ್ತು.

ಪ್ರಕರಣದ ಮತ್ತೊಬ್ಬ ಆರೋಪಿ 82 ವರ್ಷದ ಡಾ ವರವರರಾವ್‌ ಅವರ ಇಮೇಲ್‌ ಖಾತೆ ಬಳಸಿ ಯಾರೋ ಕಳುಹಿಸಿದ ಅನುಮಾನಾಸ್ಪದ ಸರಣಿ ಇಮೇಲ್‌ ಬಳಿಕ ವಿಲ್ಸನ್‌ ಅವರ ಕಂಪ್ಯೂಟರ್‌ ದಾಳಿಗೊಳಗಾಗಿತ್ತು ಎಂದು ಆರ್ಸೆನಲ್‌ ಹೇಳಿದೆ.

ಡಿಜಿಟಲ್‌ ಸಾಧನದಲ್ಲಿ ಇಲೆಕ್ಟ್ರಾನಿಕ್‌ ದಾಖಲೆ ಇದ್ದ ಮಾತ್ರಕ್ಕೆ ಡಿಜಿಟಲ್‌ ಸಾಧನದ ಮಾಲೀಕರು ಆ ಇಲೆಕ್ಟ್ರಾನಿಕ್‌ ದಾಖಲೆಯನ್ನು ಸೃಷ್ಟಿಸಿದ್ದರು ಎಂದು ಹೇಳಲಾಗದು. ಬದಲಿಗೆ ದಾಖಲೆಯ ಮೂಲವನ್ನು ವಿಶ್ಲೇಷಿಸಬೇಕಾಗುತ್ತದೆ ಎಂದು ಸೇನ್‌ ಅವರು ವಾದಿಸಿದ್ದಾರೆ. ನಿಷೇಧಿತ ಉಗ್ರ ಸಂಘಟನೆ ಸಿಪಿಐ (ಮಾವೋವಾದಿ) ಜೊತೆ ತಮಗೆ ನಂಟು ಇದೆ ಎಂದು ಹೇಳಲಾಗಿದೆ. ಆದರೆ ಯುಎಪಿಎ ಕಾಯಿದೆ ಉಗ್ರ ಸಂಘಟನೆಗಳನ್ನೇ ಗುರುತಿಸಿಲ್ಲ ಎಂದು ಅವರು ಹೇಳಿದ್ದಾರೆ.

ತಮ್ಮ ಕಂಪ್ಯೂಟರ್‌ನಲ್ಲಿ ಮಾಲ್‌ವೇರ್‌ ಬಳಸಿ ದಾಖಲೆಗಳನ್ನು ಹುದುಗಿಸಿಡಲಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಲು ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ನೇಮಕ ಮಾಡಲು ನಿರ್ದೇಶಿಸುವಂತೆ ವಿಲ್ಸನ್‌ ಕಳೆದ ಫೆಬ್ರವರಿಯಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ದುರುದ್ದೇಶಪೂರಿತ ಕಾನೂನು ಕ್ರಮ, ಮಾನಹಾನಿ ಮತ್ತು ಕಿರುಕುಳಕ್ಕೆ ಪರಿಹಾರ ನೀಡುವಂತೆ ಕೋರಿದ್ದಲ್ಲದೆ ತಮ್ಮ ವಿರುದ್ಧದ ಪ್ರಕರಣವನನು ರದ್ದುಗೊಳಿಸಲು ಅವರು ವಿನಂತಿಸಿದ್ದರು. ಎರಡೂ ಅರ್ಜಿಗಳನ್ನು ನ್ಯಾಯಾಲಯ ಇನ್ನಷ್ಟೇ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕಿದೆ.

No stories found.
Kannada Bar & Bench
kannada.barandbench.com