ಭೀಮಾ ಕೋರೆಗಾಂವ್: ವಿಚಾರಣೆ ಮುಗಿಯುವವರೆಗೆ ಗೌತಮ್ ನವಲಖಾ ದೆಹಲಿ ವಾಸಕ್ಕೆ ಬಾಂಬೆ ಹೈಕೋರ್ಟ್ ಅನುಮತಿ

ಡಿಸೆಂಬರ್ 2023ರಲ್ಲಿ ಬಾಂಬೆ ಹೈಕೋರ್ಟ್ ನವಲಖಾ ಅವರಿಗೆ ಜಾಮೀನು ನೀಡಿತ್ತು. ಆದರೆ ಪೂರ್ವಾನುಮತಿ ಇಲ್ಲದೆ ಅವರು ನ್ಯಾಯಾಲಯದ ಪ್ರಾದೇಶಿಕ ವ್ಯಾಪ್ತಿ ತೊರೆಯುವಂತಿಲ್ಲ ಎಂಬ ಷರತ್ತು ವಿಧಿಸಿತ್ತು.
Gautam Navlakha and Bombay High Court
Gautam Navlakha and Bombay High Court
Published on

ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ, ಮಾನವ ಹಕ್ಕು ಹೋರಾಟಗಾರ ಗೌತಮ್ ನವಲಖಾ ಅವರು ವಿಚಾರಣೆ ಪೂರ್ಣಗೊಳ್ಳುವವರೆಗೆ ನವದೆಹಲಿಗೆ ಸ್ಥಳಾಂತರಗೊಳ್ಳಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ [ಗೌತಮ್ ನವಲಖಾ ಮತ್ತು ರಾಷ್ಟ್ರೀಯ ತನಿಖಾ ಪ್ರಾಧಿಕಾರ‌ ನಡುವಣ ಪ್ರಕರಣ].

ಮುಂಬೈನಿಂದ ದೆಹಲಿಗೆ ಸ್ಥಳಾಂತರಗೊಳ್ಳಲು ಅನುಮತಿ ನಿರಾಕರಿಸಿ ಎನ್‌ಐಎ ವಿಶೇಷ ನ್ಯಾಯಾಲಯ ಜೂನ್ 2025ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ನವಲಖಾ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಶ್ಯಾಮ್ ಚಂದಕ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.

ಪ್ರಸ್ತುತ ಜಾಮೀನಿನ ಮೇಲೆ ಹೊರಗಿರುವ ನವಲಖಾ ಅವರಿಗೆ ವಿಚಾರಣಾ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೆಹಲಿ ಬಿಟ್ಟು ಹೋಗಬಾರದು ಮತ್ತು ಅವರ ಪಾಸ್‌ಪೋರ್ಟ್ ಅನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಒಪ್ಪಿಸಬೇಕೆಂದು ನಿರ್ದೇಶಿಸಲಾಗಿದೆ.

ನಿರ್ದಿಷ್ಟವಾಗಿ ವಿನಾಯಿತಿ ನೀಡದ ಹೊರತು, ಪ್ರತಿ ಶನಿವಾರ ದೆಹಲಿಯಲ್ಲಿರುವ ಅವರ ನಿವಾಸದ ಸಮೀಪದ ಕಲ್ಕಾಜಿ ಪೊಲೀಸ್ ಠಾಣೆಗೆ ವರದಿ ಮಾಡಿಕೊಳ್ಳಬೇಕು. ಮತ್ತು ನಿಗದಿತ ದಿನಾಂಕಗಳಂದು ಎನ್ಐಎ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಪೀಠ ಸೂಚಿಸಿತು.

Also Read
ಭೀಮಾ ಕೋರೆಗಾಂವ್: ದೆಹಲಿಗೆ ವಾಸಸ್ಥಳ ಬದಲಿಸಲು ಗೌತಮ್ ನವಲಖಾ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಮುಂಬೈ ನ್ಯಾಯಾಲಯ

ಪ್ರಕರಣಕ್ಕೆ ಸಂಬಂಧಿಸಿದಂತೆ ನವಲಖಾ ಅವರನ್ನು 2018ರಲ್ಲಿ ಗೃಹಬಂಧನದಲ್ಲಿರಿಸಲಾಯಿತು. ನಂತರ ಏಪ್ರಿಲ್ 2020ರಲ್ಲಿ ಬಂಧಿಸಲಾಯಿತು. ವೈದ್ಯಕೀಯ ಕಾರಣಗಳಿಂದಾಗಿ, ನವೆಂಬರ್ 2022 ರಲ್ಲಿ ಅವರನ್ನು ಮತ್ತೆ ಗೃಹಬಂಧನದಲ್ಲಿರಿಸಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್ ಕಣ್ಗಾವಲು ವೆಚ್ಚಕ್ಕಾಗಿ ಎನ್ಐಎಗೆ ₹ 20 ಲಕ್ಷ ಪಾವತಿಸುವಂತೆ ನಿರ್ದೇಶಿಸಿತು.

ಮೇ 2024ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶದ ನಂತರ, ಅವರು ಮುಂಬೈನಲ್ಲಿಯೇ ಇರಬೇಕೆಂಬ ನಿರ್ಬಂಧವನ್ನು ತೆಗೆದುಹಾಕಲಾಗಿದ್ದು ದೆಹಲಿಗೆ ಮರಳಲು ಅವಕಾಶ ನೀಡಲಾಗಿದೆ.

Kannada Bar & Bench
kannada.barandbench.com