ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಲಿತ ಹಕ್ಕುಗಳ ಹೋರಾಟಗಾರ ಆನಂದ್ ತೇಲ್ತುಂಬ್ಡೆ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದ ಆದೇಶ ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರೆದುರು ಮಂಗಳವಾರ ಪ್ರಕರಣವನ್ನು ಪ್ರಸ್ತಾಪಿಸಿದರು. ಆಗ ಸಿಜೆಐ ನ. 25ರಂದು ಪ್ರಕರಣದ ವಿಚಾರಣೆಗೆ ಸಮ್ಮತಿ ಸೂಚಿಸಿದರು. ತೇಲ್ತುಂಬ್ಡೆ ಪರವಾಗಿ ವಕೀಲೆ ಅಪರ್ಣಾ ಭಟ್ ನ್ಯಾಯಾಲಯದಲ್ಲಿ ಹಾಜರಿದ್ದರು.
ಸುದೀರ್ಘ ಕಾಲ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಕಳೆದ ಶುಕ್ರವಾರ ತೇಲ್ತುಂಬ್ಡೆ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಎನ್ಐಎ ಆರೋಪಿಸಿದಂತೆ ಯುಎಪಿಎ ಕಾಯಿದೆಯಡಿ ತೇಲ್ತುಂಬ್ಡೆ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದ್ದಾರೆ ಎನ್ನಲು ಯಾವುದೇ ಪ್ರಾಥಮಿಕ ಸಾಕ್ಷ್ಯಗಳಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ಕಾಯಿದೆಯ ಸೆಕ್ಷನ್ 38 ಮತ್ತು 39 ರ ಅಡಿಯಲ್ಲಿ (ಭಯೋತ್ಪಾದಕ ಸಂಘಟನೆಯಲ್ಲಿ ಸದಸ್ಯರಾಗಿದ್ದಕ್ಕೆ ಸಂಬಂಧಿಸಿದ) ಅಪರಾಧಗಳನ್ನು ಮಾತ್ರ ತೇಲ್ತುಂಬ್ಡೆ ಅವರ ವಿರುದ್ಧ ಮಾಡಲಾಗಿದೆ. ಈ ಕೃತ್ಯಕ್ಕೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಇದ್ದು ಈಗಾಗಲೇ ತೇಲ್ತುಂಬ್ಡೆ ಈಗಾಗಲೇ 2 ವರ್ಷಗಳಿಗಿಂತ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ₹1 ಲಕ್ಷ ಭದ್ರತೆ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತಿರುವುದಾಗಿ ನ್ಯಾಯಾಲಯ ತಿಳಿಸಿತ್ತು.
ಸುಪ್ರೀಂ ಕೋರ್ಟ್‌ಗೆ ಎನ್‌ಐಎ ಮನವಿ ಸಲ್ಲಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ನ್ಯಾಯಾಲಯ ತನ್ನ ಆದೇಶಕ್ಕೆ ಒಂದು ವಾರ ಕಾಲ ತಡೆ ನೀಡಿತ್ತು. ತೇಲ್ತುಂಬ್ಡೆ ಅವರು ಎಲ್ಗಾರ್ ಪರಿಷತ್ ಕಾರ್ಯಕ್ರಮದ ಸಂಚಾಲಕರಲ್ಲಿ ಒಬ್ಬರಾಗಿದ್ದರು. 2018ರ ಜನವರಿ 1ರಂದು ನಡೆದ ಗಲಭೆಗೆ ತೇಲ್ತುಂಬ್ಡೆ ಅವರು ಮಾಡಿದ್ದ ಪ್ರಚೋದನಕಾರಿ ಭಾಷಣ ಕಾರಣ ಎಂಬುದು ಎನ್‌ಐಎ ವಾದವಾಗಿತ್ತು.
ತಾನು ನಿಷೇಧಿತ ಸಂಘಟನೆಯಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಸದಸ್ಯ ಎಂದು ಆರೋಪಿಸಿ ಎನ್‌ಐಎ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯ ಜಾಮೀನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಚಿಂತಕ ತೇಲ್ತುಂಬ್ಡೆ ಅವರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.