ಭೀಮಾ ಕೋರೆಗಾಂವ್ ಪ್ರಕರಣ ತನಗೆ ವಹಿಸಬಾರದೆಂಬ ಅರ್ಜಿ ದಾರಿ ತಪ್ಪಿಸುವಂತಹುದು: ಬಾಂಬೆ ಹೈಕೋರ್ಟ್‌ಗೆ ಎನ್ಐಎ ಅಫಿಡವಿಟ್

ಪ್ರಕರಣದ ತನಿಖೆಯನ್ನು ಎನ್ಐಎಗೆ ವರ್ಗಾಯಿಸುವುದನ್ನು ಪ್ರಶ್ನಿಸಿ ಭೀಮಾ ಕೋರೆಗಾಂವ್ ಪ್ರಕರಣದ ಇಬ್ಬರು ಆರೋಪಿಗಳು ಸಲ್ಲಿಸಿರುವ ಅರ್ಜಿಯ ಸಂಬಂಧ ಎನ್ಐಎ ಅಫಿಡವಿಟ್ ಸಲ್ಲಿಸಿದೆ.
NIA
NIA

ಭೀಮಾ ಕೋರೆಗಾಂವ್‌ ಪ್ರಕರಣವನ್ನು ಪುಣೆ ಪೊಲೀಸರ ಬದಲಿಗೆ ತನಗೆ ವರ್ಗಾಯಿಸುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ತನಿಖಾ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡುವ ಕ್ರಿಯೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ರಾಜ್ಯ ಪೊಲೀಸರಿಂದ ಕೇಂದ್ರ ತನಿಖಾ ಸಂಸ್ಥೆಯಾದ ಎನ್‌ಐಎಗೆ ಪ್ರಕರಣ ವರ್ಗಾಯಿಸುವುದರಿಂದ ಪ್ರಕರಣದ ಮರು ತನಿಖೆಗೆ ಕಾರಣವಾಗಬಹುದು ಎಂದು ಪ್ರಕರಣದ ಇಬ್ಬರು ಆರೋಪಿಗಳಾದ ಸುರೇಂದ್ರ ಗದ್ಲಿಂಗ್‌ ಮತ್ತು ಧಾವಳೆ ಅವರು ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು ಹಾಗೂ ಇತರ ಆರೋಪಿಗಳ ವಿರುದ್ಧ ಸುಳ್ಳು, ಕಟ್ಟುಕಥೆ ಮತ್ತು ಕಪೋಲ ಕಲ್ಪಿತ ಸಾಕ್ಷ್ಯಗಳನ್ನು ಸಂಗ್ರಹಿಸಲು ಎನ್ಐಎ ಮುಂದಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಇದಕ್ಕೆ ಪ್ರತಿಕ್ರಿಯೆಯಾಗಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಎನ್‌ಐಎ, "ಅರ್ಜಿದಾರರ ವಾದ ಅಜಾಗರೂಕತೆಯಿಂದ ಕೂಡಿದ್ದು ಹೈಕೋರ್ಟ್‌ ದಿಕ್ಕು ತಪ್ಪಿಸುವ ಮತ್ತು ಎನ್‌ಐಎ ತನಿಖೆ ತಡೆಯುವ ಏಕೈಕ ಉದ್ದೇಶದಿಂದ ಇದನ್ನು ಸಲ್ಲಿಸಲಾಗಿದೆ ಎಂದು ವಾದಿಸಿದೆ.

“ನಕ್ಸಲ್‌ ಪಿಡುಗು ಅನೇಕ ಹಂತಗಳಲ್ಲಿ ವಿನಾಶಕ್ಕೆ ಕಾರಣವಾಗಿರುವ ದೇಶದಲ್ಲಿ ಕಾನೂನುಬಾಹಿರ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ತಡೆಯಲು ಹೋರಾಡುತ್ತಿರುವ ಎನ್‌ಐಎ ವಿಶ್ವಾಸಾರ್ಹತೆಯನ್ನು ಅರ್ಜಿದಾರರು ಹಗರಣಗೊಳಿಸುವ ಮತ್ತು ಪ್ರಶ್ನಿಸುವ ಮಟ್ಟಿಗೆ ಹೋಗಿದ್ದಾರೆ” ಎಂಬಿತ್ಯಾದಿ ಅಂಶಗಳನ್ನು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

Also Read
[ಫಾದರ್‌ ಸ್ವಾಮಿ ಸಾವಿನ ಪ್ರಕರಣ] ತಳೋಜಾ ಜೈಲಿನಲ್ಲಿರುವ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳಿಂದ ಉಪವಾಸ ಸತ್ಯಾಗ್ರಹ

ಭೀಮಾ ಕೋರೆಗಾಂವ್‌ ಹೋರಾಟದ 200ನೇ ವರ್ಷಾಚರಣೆ ಬಳಿಕ 2018ರ ಜನವರಿ 1 ರಂದು ಪುಣೆಯಲ್ಲಿ ನಡೆದ ಜಾತಿ ಆಧಾರಿತ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆ ವರ್ಷದ ಜುಲೈನಲ್ಲಿ ಮಹಾರಾಷ್ಟ್ರ ಪೊಲೀಸರು ವಿವಿಧ ಕಾರ್ಯಕರ್ತರು, ಶಿಕ್ಷಣ ತಜ್ಞರು, ವಕೀಲರು ಮುಂತಾದವರ ನಿವಾಸಗಳ ಮೇಲೆ ದಾಳಿ ನಡೆಸಿದ್ದರು. ಸಂಭ್ರಮಾಚರಣೆಯನ್ನು ಎಲ್ಗಾರ್‌ ಪರಿಷತ್‌ ಎಂದು ಕರೆಯಲಾಗಿದ್ದು ಅದಕ್ಕೆ ಮಾವೋವಾದಿ ಸಂಘಟನೆಗಳ ಬೆಂಬಲವಿತ್ತು ಎಂದು ಆರೋಪಿಸಲಾಗಿತ್ತು.

ಈ ವರ್ಷದ ಜನವರಿಯಲ್ಲಿ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವರ್ಗಾಯಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದವರಲ್ಲಿ ಇತ್ತೀಚೆಗಷ್ಟೇ ನಿಧನರಾದ ಫಾದರ್‌ ಸ್ಟ್ಯಾನ್‌ ಸ್ವಾಮಿ, ಗೌತಮ್ ನವಲಖಾ, ಆನಂದ್ ತೇಲ್ತುಂಬ್ದೆ, ಸುಧಾ ಭರದ್ವಾಜ್, ಶೊಮಾ ಸೇನ್ ಮತ್ತಿತರ ಆರೋಪಿಗಳ ವಿರುದ್ಧ ಮಾವೋವಾದಿ ಸಂಪರ್ಕದ ಆರೋಪದ ಮೇಲೆ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com