[ಭೀಮಾ ಕೋರೆಗಾಂವ್] ಜಾಮೀನಿಗಾಗಿ ವಿಶೇಷ ನ್ಯಾಯಾಲಯದ ಮೊರೆ ಹೋದ ಕಿರಿಯ ಆರೋಪಿಗಳು

ಪ್ರಕರಣದ ಇಬ್ಬರು ಕಿರಿಯ ಆರೋಪಿಗಳಾದ ಮಹೇಶ್ ರಾವುತ್ ಮತ್ತು ಜ್ಯೋತಿ ಜಗತಾಪ್ ನಿಯಮಿತ ಜಾಮೀನು ಕೋರಿ ಮುಂಬೈ ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
Mumbai Sessions Court, BHIMA KOREGAON
Mumbai Sessions Court, BHIMA KOREGAON

2018ರ ಭೀಮಾ ಕೋರೆಗಾಂವ್ ಪ್ರಕರಣದ ಇಬ್ಬರು ಕಿರಿಯ ಆರೋಪಿಗಳಾದ ಮಹೇಶ್ ರಾವುತ್ (34) ಮತ್ತು ಜ್ಯೋತಿ ಜಗತಾಪ್ (32) ನಿಯಮಿತ ಜಾಮೀನು ಕೋರಿ ಮುಂಬೈ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದು ಜ್ಯೋತಿ ಜಗತಾಪ್ ಅವರ ಮೊದಲ ಜಾಮೀನು ಅರ್ಜಿಯಾಗಿದೆ.

ಜ್ಯೋತಿ ಅವರನ್ನು ಸೆಪ್ಟೆಂಬರ್ 8, 2020 ರಂದು ಬಂಧಿಸಿ ಅಕ್ಟೋಬರ್ 9, 2020 ರಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ʼವಾಂಟೆಂಡ್‌ʼ ಪಟ್ಟಿಯಲ್ಲಿದ್ದ ಮಿಲಿಂದ್ ತೇಲ್ತುಂಬ್ಡೆ (ನ. 13ರಂದು ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತರಾದ ನಕ್ಸಲ್‌ ನಾಯಕ) ಅವರನ್ನು ಜ್ಯೋತಿ ಕೊರ್ಚಿ ಎಂಬ ಸ್ಥಳದಲ್ಲಿ ಭೇಟಿಯಾಗಿ ಶಸ್ತ್ರಾಸ್ತ್ರ , ಸ್ಫೋಟಕಗಳ ಬಳಕೆ ಹಾಗೂ ದೈಹಿಕ ಚಟುವಟಿಕೆಗಳ ಬಳಕೆಗೆ ಸಂಬಂಧಿಸಿದ ತರಬೇತಿ ಪಡೆದಿದ್ದರು ಎಂದು ಎನ್‌ಐಎ ಆರೋಪಿಸಿತ್ತು.

ಸರ್ಕಾರದ ವಿರುದ್ಧ ದ್ವೇಷ ಸೃಷ್ಟಿಸುವ ಉದ್ದೇಶದಿಂದ ದಲಿತರು ಮತ್ತಿತರ ಸಂಘಟನೆಗಳ ಬೃಹತ್‌ ಸಾರ್ವಜನಿಕ ಗುಂಪನ್ನು ಒಗ್ಗೂಡಿಸಲು ಯತ್ನಿಸಿದ್ದ ಎಲ್ಗಾರ್‌ ಪರಿಷತ್‌ ಸಂಘಟಕರ ಸಭೆಗಳಲ್ಲಿ ಜ್ಯೋತಿ ಭಾಗವಹಿಸಿದ್ದರು.

“ತನ್ನ ವಿರುದ್ಧ ಎಂಟು ದಿನ ತಡವಾಗಿ ಎಫ್‌ಐಆರ್‌ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಆರೋಪಿಯಾಗಿದ್ದರೂ ಎರಡು ವರ್ಷಗಳಿಂದ ತನ್ನನ್ನು ಬಂಧಿಸಿಲ್ಲ. ಆರಂಭದಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದ ಪುಣೆ ಪೊಲೀಸರು ತನ್ನ ವಿರುದ್ಧ ಒಂದೇ ಒಂದು ಆರೋಪಪಟ್ಟಿ ಸಲ್ಲಿಸಿರಲಿಲ್ಲ ಎಂದು ಜ್ಯೋತಿ ವಾದಿಸಿದ್ದಾರೆ. ಅವರು ಏಕೆ ಬಂಧಿಸಿರಲಿಲ್ಲ ಎಂದರೆ ತನ್ನ ಪಾತ್ರ ಎಲ್ಗಾರ್‌ ಪರಿಷತ್‌ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿದ್ದು ತನ್ನಿಂದ ವಶಪಡಿಸಿಕೊಂಡ ಯಾವುದೇ ಸಾಕ್ಷ್ಯಗಳನ್ನು ಸಾಬೀತುಪಡಿಸುವಲ್ಲಿ ಎನ್‌ಐಎ ವಿಫಲವಾಗಿದೆ ಎಂದು ಜ್ಯೋತಿ ವಾದಿಸಿದ್ದಾರೆ. ಕಾರ್ಯಕ್ರಮಕ್ಕಾಗಿ ತಾನು ಯಾವುದೇ ಅಕ್ರಮ ಹಣವನ್ನು ಪಡೆದಿದ್ದೇನೆ ಎಂದು ಸೂಚಿಸುವ ಬ್ಯಾಂಕ್ ಸ್ಟೇಟ್‌ಮೆಂಟ್‌ ಒದಗಿಸಲು ಎನ್‌ಐಎ ವಿಫಲವಾಗಿದೆ” ಎಂದು ಅವರು ಹೇಳಿದ್ದಾರೆ.

Also Read
[ಭೀಮಾ ಕೋರೆಗಾಂವ್] ಆರೋಪಿಗಳ ಪತ್ರದಲ್ಲಿದ್ದ ಆಕ್ಷೇಪಾರ್ಹ ವಿಚಾರ ನಿಯತಕಾಲಿಕದಲ್ಲಿ ಪ್ರಕಟವಾಗುತ್ತಿತ್ತು ಎಂದ ಎನ್ಐಎ

ಜ್ಯೋತಿ ಅವರು ಕಬೀರ್ ಕಲಾ ಮಂಚ್‌ನ (ಕೆಕೆಎಂ) ಸದಸ್ಯರಾಗಿದ್ದರು, ಇದು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ನಿಷೇಧಿತ ಸಂಘಟನೆ ಎಂಬ ಆರೋಪವಿದೆ. 2002ರ ಗುಜರಾತ್ ಗಲಭೆಯ ನಂತರ ಸಂಗೀತ ಕವನಗಳ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಈ ಸಾಂಸ್ಕೃತಿಕ ಗುಂಪು ರಚನೆಯಾಗಿತ್ತು. ಪುಣೆ ಪೋಲೀಸರ ಪ್ರಕಾರ ಸುಧೀರ್ ಧವಳೆ ಅವರು ಕೆಕೆಎಂ ಸದಸ್ಯರೊಂದಿಗೆ ಸೇರಿ ಎಲ್ಗಾರ್‌ ಪರಿಷತ್‌ ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ಎನ್‌ಐಎ ಪ್ರಕಾರ ಕೆಕೆಎಂ ಸದಸ್ಯರಾದ ರಮೇಶ್ ಗೈಚೋರ್, ಸಾಗರ್ ಗೋರ್ಖೆ ಹಾಗೂ ಜ್ಯೋತಿ ಅವರು ಕಾರ್ಯಕ್ರಮದ ಸಂಘಟಕರಾಗಿದ್ದಾರೆ.

ಈ ಮಧ್ಯೆ ನ್ಯಾಯಾಲಯ ರಾವುತ್‌ ಅವರ ಜಾಮೀನು ಅರ್ಜಿಯನ್ನೂ ಆಲಿಸಿತು. ರಾವುತ್‌ ಪರವಾಗಿ ವಕೀಲ ವಿಜಯ್‌ ಹಿರೇಮಠ್‌ ವಾದ ಮಂಡಿಸಿದರು. ಎನ್‌ಐಎ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕಾಶ್ ಶೆಟ್ಟಿ ಅವರು ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿದರು. ವಾದ ಆಲಿಸಿದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತು.

Related Stories

No stories found.
Kannada Bar & Bench
kannada.barandbench.com