ಹಳೆಯ ದೇಗುಲಗಳ ಸಾಮಗ್ರಿಗಳಿಂದ ಪ್ರಸ್ತುತ ಅಸ್ತಿತ್ವದಲ್ಲಿರುವ ಭೋಜಶಾಲಾ ಸಂಕೀರ್ಣ ನಿರ್ಮಾಣವಾಗಿದೆ ಎಂಬುದನ್ನು ತನ್ನ ತನಿಖೆ ಮತ್ತು ಅಧ್ಯಯನ ತಿಳಿಸುತ್ತದೆ ಎಂಬುದಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಮಧ್ಯಪ್ರದೇಶ ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ.
ಧಾರ್ ಜಿಲ್ಲೆಯ ಭೋಜಶಾಲಾ ದೇಗುಲ ಮತ್ತು ಕಮಲ್ ಮೌಲಾ ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ಹೈಕೋರ್ಟ್ ಕಳೆದ ಮಾರ್ಚ್‌ನಲ್ಲಿ ನಿರ್ದೇಶನ ನೀಡಿತ್ತು. ಅದರಂತೆ ಎಎಸ್‌ಐ ವರದಿ ಸಲ್ಲಿಸಿದೆ. ಸಮೀಕ್ಷೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಕಳೆದ ಮೇನಲ್ಲಿ ನಿರಾಕರಿಸಿತ್ತು.
ಭೋಜಶಾಲಾ ಸಂಕೀರ್ಣವನ್ನು ಹಿಂದೂಗಳಿಗೆ ಮರಳಿಸಬೇಕು ಮತ್ತು ಅದರ ಆವರಣದಲ್ಲಿ ಮುಸ್ಲಿಮರು ನಮಾಜ್ ಮಾಡುವುದನ್ನು ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಲಾದ ರಿಟ್ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ಇಂದೋರ್ ಪೀಠದೆದುರು ಎಎಸ್‌ಐ ಸಲ್ಲಿಸಿದ ವರದಿ ಈ ವಿಚಾರ ತಿಳಿಸಿದೆ. ಪ್ರಕರಣವನ್ನು ಜುಲೈ 22ರಂದು ಹೈಕೋರ್ಟ್ ವಿಚಾರಣೆ ನಡೆಸಲಿದೆ.
ವರದಿಯ ಪ್ರಮುಖಾಂಶಗಳು
ಅಲಂಕೃತ ಸ್ತಂಭ ಮತ್ತು ತೊಲೆಗಳ ಕಲೆ ಮತ್ತು ವಾಸ್ತುಶೈಲಿಯಿಂದ, ಅವು ಹಿಂದಿನ ದೇವಾಲಯಗಳ ಭಾಗವಾಗಿದ್ದವು ಎಂದು ತಿಳಿದುಬರುತ್ತದೆ. ಅವುಗಳನ್ನು ಎತ್ತರದ ವೇದಿಕೆ ಮೇಲೆ ಮಸೀದಿ ನಿರ್ಮಿಸಲು ಮರುಬಳಕೆ ಮಾಡಲಾಗಿದೆ.
ಮಸೀದಿಗಳಲ್ಲಿ ಮಾನವ ಮತ್ತು ಪ್ರಾಣಿಗಳ ಆಕೃತಿಗಳ ರಚನೆಗೆ ಅನುಮತಿ ಇಲ್ಲದೇ ಇದ್ದುದರಿಂದ ಅಂತಹ ಚಿತ್ರಗಳನ್ನು ಒಡೆದುಹಾಕಲಾಗಿದೆ ಇಲ್ಲವೇ ವಿರೂಪಗೊಳಿಸಲಾಗಿದೆ. ಪಶ್ಚಿಮ ಮತ್ತು ಪೂರ್ವದ ಕಮಾನು ಮೊಗಸಾಲೆಗಳು, ಆಗ್ನೇಯ ಕೋಶದ ಪ್ರವೇಶದ್ವಾರ ಮುಂತಾದೆಡೆ ಇಂತಹ ಯತ್ನ ನಡೆದಿರುವುದನ್ನು ಕಾಣಬಹುದು.
ವೈಜ್ಞಾನಿಕ ಸಂಶೋಧನೆಗಳಿಂದ, ಸಮೀಕ್ಷೆ ಮತ್ತು ನಡೆದಿರುವ ಪುರಾತತ್ವ ಉತ್ಖನನಗಳಿಂದ, ಶಿಲ್ಪಗಳು ಮತ್ತು ಶಾಸನಗಳ ಮಾಹಿತಿಯಿಂದ ಹಾಗೂ ಕಲೆ ಮತ್ತು ಗ್ರಂಥಗಳ ಅಧ್ಯಯನದ ಪ್ರಕಾರ ಅಸ್ತಿತ್ವದಲ್ಲಿರುವ ರಚನೆಯು ಹಿಂದಿನ ದೇವಾಲಯಗಳ ಭಾಗಗಳಿಂದ ರೂಪುಗೊಂಡಿದೆ ಎನ್ನಬಹುದು.