ಕೇತಾಂಜಿ ಬ್ರೌನ್ ಜಾಕ್ಸನ್ ಅಮೆರಿಕ ಸುಪ್ರೀಂಕೋರ್ಟ್‌ನ ಸಂಭಾವ್ಯ ಪ್ರಥಮ ಕಪ್ಪು ವರ್ಣೀಯ ಮಹಿಳಾ ನ್ಯಾಯಮೂರ್ತಿ
ಕಪ್ಪುವರ್ಣೀಯ ಮಹಿಳೆಯೊಬ್ಬರನ್ನು ಅಮೆರಿಕದ ಸುಪ್ರೀಂ ಕೋರ್ಟ್‌ಗೆ ನಾಮ ನಿರ್ದೇಶನ ಮಾಡುವುದಾಗಿ 2019ರಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ನೀಡಿದ್ದ ಭರವಸೆ ಶುಕ್ರವಾರ ಈಡೇರಿದೆ. 51 ವರ್ಷದ ನ್ಯಾಯಮೂರ್ತಿ ಕೇತಾಂಜಿ ಬ್ರೌನ್ ಜಾಕ್ಸನ್ ಅವರನ್ನು ಸುಪ್ರೀಂ ಕೋರ್ಟ್‌ಗೆ ನಾಮ ನಿರ್ದೇಶನ ಮಾಡಲಾಗಿದೆ.
ವಾಷಿಂಗ್‌ಟನ್ ಡಿಸಿಯಲ್ಲಿ ನಡೆಯುವ ಸಾರ್ವಜನಿಕ ಜೀವನದ ಹಾವು- ಏಣಿ ಆಟಕ್ಕೆ ನ್ಯಾ. ಜಾಕ್ಸನ್ ಹೊಸಬರಲ್ಲ. ಪ್ರಕರಣವೊಂದರಲ್ಲಿ ಟ್ರಂಪ್ ಆಡಳಿತದ ವಿರುದ್ಧ ಆಕೆ ತೀರ್ಪು ನೀಡಿದ್ದರು. ತ್ವರಿತ ಗಡೀಪಾರು ಪ್ರಕ್ರಿಯೆಗಳ ಬಳಕೆ ವಿಸ್ತರಿಸಲು ಟ್ರಂಪ್ ಸರ್ಕಾರಕ್ಕೆ ಅವರು ಅನುಮತಿ ನೀಡಲಿಲ್ಲ.
ಜಾಕ್ಸನ್ ಅವರು ಅಮೆರಿಕದ ಮೇಲ್ಮನವಿ ನ್ಯಾಯಾಲಯವೊಂದರಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾರ್ವರ್ಡ್ ಕಾಲೇಜು ಮತ್ತು ಹಾರ್ವರ್ಡ್ ಕಾನೂನು ಶಾಲೆಯ ಪದವೀಧರರಾದ ಅವರು ನ್ಯಾ ಸ್ಟೀಫನ್ ಬ್ರೇಯರ್ ಅವರ ಕಾನೂನು ಗುಮಾಸ್ತರಾಗಿ ಸೇವೆ ಸಲ್ಲಿಸಿದರು. ನಾಮನಿರ್ದೇಶನ ಅಂಗೀಕೃತವಾದರೆ ಅವರು ಅಮೆರಿಕ ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸಲಿರುವ ಮೊದಲ ಕಪ್ಪುವರ್ಣಿಯ ಮಹಿಳಾ ನ್ಯಾಯಮೂರ್ತಿಯಾಗಲಿದ್ದಾರೆ. ಆದರೆ ಪ್ರಸ್ತುತ ಪೀಠದ ಉಳಿದ ಎಂಟು ಮಂದಿ ನ್ಯಾಯಮೂರ್ತಿಗಳು ಕೂಡ ಇವರಂತೆಯೇ ಅರ್ಹತೆ ಪಡೆದಿದ್ದಾರೆ.
ನ್ಯಾ. ಜಾಕ್ಸನ್ ಒಂದು ವೇಳೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಆಯ್ಕೆಯಾದರೆ ಗರ್ಭಪಾತ, ತಾರತಮ್ಯ ವಿರೋಧಿ ನೀತಿಗಳು, ಚುನಾವಣಾ ತಾರತಮ್ಯ ಮತ್ತು ಮತದಾನದ ಹಕ್ಕಿಗೆ ಇರುವ ನಿರ್ಬಂಧದಂತಹ ಸುಪ್ರೀಂಕೋರ್ಟ್ ಬಗೆಹರಿಸಲು ಹರಸಾಹಸಪಡುತ್ತಿರುವ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ. ಅಮೆರಿಕ ಸುಪ್ರೀಂಕೋರ್ಟ್‌ನ ಸಹ ನ್ಯಾಯಮೂರ್ತಿಗಳಿಗೆ ವರ್ಷಕ್ಕೆ $ 265,600 ವೇತನ ಇದೆ.