ಬಿಹಾರ ಎಸ್ಐಆರ್: ಮತದಾರರ ಅಂತಿಮ ಪಟ್ಟಿ ಕುರಿತು ಇಸಿಐ ಸ್ಪಷ್ಟನೆ ನೀಡುವಂತೆ ಸುಪ್ರೀಂ ಸೂಚನೆ

ಸೆಪ್ಟೆಂಬರ್ 30ರಂದು ಮುಕ್ತಾಯಗೊಂಡ ಬಿಹಾರ ಮತದಾರರ ಪಟ್ಟಿ ವಿಶೇಷ ಆಮೂಲಾಗ್ರ ಪರಿಷ್ಕರಣೆ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.
Supreme Court, Bihar SIR
Supreme Court, Bihar SIR
Published on

ಬಿಹಾರದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಮತದಾರರ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಸಿದ್ಧಪಡಿಸಲಾದ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಹೊರಗಿಟ್ಟಿದ್ದರ ವಿರುದ್ಧ ಮೇಲ್ಮನವಿ ಸಲ್ಲಿಸುವ ಹಕ್ಕು ಎಲ್ಲರಿಗೂ ಇದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಆದರೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೆ ಇರುವವರಿಗೆ ಈ ಕುರಿತಾದ ಆದೇಶ ತಿಳಿಸದೆ ಹೋದರೆ ನ್ಯಾಯಾಲಯಕ್ಕೆ ಪರಿಹಾರ ನೀಡುವುದು ಸಾಧ್ಯವಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

Also Read
ಎಸ್ಐಆರ್‌ನಿಂದಾಗಿ ಬಿಹಾರದಲ್ಲಿ ಮತದಾರರ ಹಕ್ಕುಗಳ ನಿರಾಕರಣೆ: ಸುಪ್ರೀಂ ಕೋರ್ಟ್‌ ಮುಂದೆ ಎಡಿಆರ್ ವಾದ

“ಯಾರಾದರೂ ನಮಗೆ 3.66 ಲಕ್ಷ ಮತದಾರರಲ್ಲಿ ಯಾರಿಗೆ ಈ ಕುರಿತಾದ ಆದೇಶ ತಿಳಿಸಲಾಗಿಲ್ಲ ಎಂಬ ಪಟ್ಟಿ  ನೀಡಿದರೆ ನಾವು ಚುನಾವಣಾ ಆಯೋಗಕ್ಕೆ ಅವರನ್ನು ಸಂಪರ್ಕಿಸುವಂತೆ ನಿರ್ದೇಶಿಸಬಹುದು. ಪ್ರತಿಯೊಬ್ಬ ವ್ಯಕ್ತಿಗೂ ಮೇಲ್ಮನವಿ ಸಲ್ಲಿಸುವ ಹಕ್ಕಿದೆ” ಎಂದು ನ್ಯಾಯಾಲಯ ನುಡಿಯಿತು.

ಪ್ರಾಥಮಿಕ ಮತದಾರರ ಪಟ್ಟಿಯಿಂದ 65 ಲಕ್ಷ ಹೆಸರುಗಳನ್ನು ತೆಗೆದುಹಾಕಿದ ನಂತರ ಅಂತಿಮ ಮತದಾರರ ಪಟ್ಟಿಗೆ 21 ಲಕ್ಷ ಮತದಾರರ ಹೆಸರನ್ನು ಸೇರಿಸಲಾಗಿದೆಯಾದರೂ ಹೀಗೆ ಸೇರ್ಪಡೆಗೊಂಡವರು ಹಿಂದೆ ತೆಗೆದುಹಾಕಿದವರಲ್ಲಿ ಇರುವವರೇ ಅಥವಾ ಹೊಸದಾಗಿ ಸೇರ್ಪಡೆಯಾದವರೇ ಎಂಬುದು ಸ್ಪಷ್ಟವಾಗಿಲ್ಲ ಎಂಬು ಅರ್ಜಿದಾರರ ವಾದವನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು.

ಅಂತೆಯೇ ಅದು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಯಾದವರ ಹೆಸರು ಮೊದಲೇ ಪಟ್ಟಿಯಿಂದ ಹೊರಗುಳಿದವರದ್ದೇ ಅಥವಾ ಹೊಸಬರದ್ದೇಎಂಬುದನ್ನು ಸ್ಪಷ್ಟಪಡಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ತಾಕೀತು ಮಾಡಿತು.

ಆಯೋಗವನ್ನು ಪ್ರತಿನಿಧಿಸಿದ್ದ ವಕೀಲರು ವಾದ ಮಂಡಿಸಿ, ಅವರಲ್ಲಿ ಹೆಚ್ಚಿನವರು ಹೊಸ ಮತದಾರರು ಎಂದು ಹೇಳಿದರು. ಚುನಾವಣಾ ಆಯೋಗವು ಇದಕ್ಕೆ ಸಂಬಂಧಿಸಿದ  ಮಾಹಿತಿಯನ್ನು ನ್ಯಾಯಾಲಯದ ಮುಂದೆ ಇಡಬಹುದು ಎಂದು ಪೀಠ ತಿಳಿಸಿದೆ.

Also Read
ಆಧಾರ್ ಮಾತ್ರವಲ್ಲ ಬೇರೆ ದಾಖಲೆಗಳೂ ನಕಲಾಗಬಹುದು: ಇಸಿಐಗೆ ನೀಡಿದ್ದ ಆದೇಶ ಮಾರ್ಪಾಡಿಗೆ ಸುಪ್ರೀಂ ನಕಾರ

“ನಿಮ್ಮ ಬಳಿ ಕರಡು ಪಟ್ಟಿ ಇದೆ, ಅಂತಿಮ ಪಟ್ಟಿಯೂ ಇದೆ. (ಮತದಾರರ ಹೆಸರನ್ನು) ಕೈ ಬಿಟ್ಟಿರುವುದು ಸ್ಪಷ್ಟವಾಗಿದೆ. ಹಾಗಾಗಿ ಅದನ್ನು ತೆಗೆದುಹಾಕಿ ನಮ್ಮ ಮುಂದೆ ಪಟ್ಟಿ ಇರಿಸಿ” ಎಂದು ಚುನಾವಣಾ ಆಯೋಗದ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ. ಮುಂದಿನ ವಿಚಾರಣೆ ಅಕ್ಟೋಬರ್ 9, 2025 ರಂದು ನಡೆಯಲಿದೆ. ವಿವಿಧ ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್, ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ, ವಕೀಲೆ ವೃಂದಾ ಗ್ರೋವರ್,  ವಾದ ಮಂಡಿಸಿದರು. ಇಸಿಐಯನ್ನು ಹಿರಿಯ ವಕೀಲ ರಾಕೇಶ್‌ ದ್ವಿವೇದಿ ಪ್ರತಿನಿಧಿಸಿದ್ದರು.

ಎಸ್‌ಐಆರ್‌ ಪ್ರಕ್ರಿಯೆ ಸೆಪ್ಟೆಂಬರ್ 30ರಂದು ಪೂರ್ಣಗೊಂಡಿತು. ಜೂನ್ 24 ರಂದು ಬಿಹಾರದಲ್ಲಿ 7.89 ಕೋಟಿ ಮತದಾರರು ಇದ್ದರೆ ಅಂತಿಮ ಮತದಾರರ ಪಟ್ಟಿಯಲ್ಲಿ 7.42 ಕೋಟಿ ಮತದಾರರ ಹೆಸರನ್ನು ಉಳಿಸಿಕೊಳ್ಳಲಾಗಿದೆ. ಆರಂಭದಲ್ಲಿ 65 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಸೂಚಿಸಿತ್ತು. ಆದರೆ ನಂತರ ಆ ಸಂಖ್ಯೆಯನ್ನು 47 ಲಕ್ಷಕ್ಕೆ ಇಳಿಸಲಾಯಿತು.

Kannada Bar & Bench
kannada.barandbench.com