
ಬೈಕ್ ಟ್ಯಾಕ್ಸಿ ಚಟುವಟಿಕೆ ನಿಷೇಧಿಸಿರುವುದು ಹೇಗೆ ಪ್ರಯಾಣಿಕರಿಗೆ ವಿನಾಶಕಾರಿ ಎಂಬುದನ್ನು ಮಾಧ್ಯಮ ವರದಿಗಳು ತೋರ್ಪಡಿಸಿವೆ. ಹೀಗಾಗಿ, ಸಂಚಾರ ಸಮಸ್ಯೆಗಳನ್ನು ಪರಿಗಣಿಸಬಾರದು ಎಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಮಂಗಳವಾರ ಇಬ್ಬರು ಬೈಕ್ ಮಾಲೀಕ ಪರ ವಕೀಲರು ವಾದಿಸಿದರು.
ಬೈಕ್ ಟ್ಯಾಕ್ಸಿ ನಿಷೇಧಿಸಿ ಏಕಸದಸ್ಯ ಪೀಠ ಮಾಡಿರುವ ಆದೇಶ ಪ್ರಶ್ನಿಸಿ ಓಲಾ, ಉಬರ್ ಮತ್ತು ರ‍್ಯಾಪಿಡೊ ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠವು ನಡೆಸಿತು.
ಇಬ್ಬರು ಬೈಕ್ ಮಾಲೀಕರಾದ ವಿ ಮಹೇಂದ್ರ ರೆಡ್ಡಿ ಮತ್ತು ಮಧು ಕಿರಣ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು “ಬೈಕ್ ಟ್ಯಾಕ್ಸಿ ಸೇವೆ ನೀಡಲು ದ್ವಿಚಕ್ರ ವಾಹನ ಮಾಲೀಕರನ್ನು ಸೇರ್ಪಡೆ ಮಾಡಲು ನಿಯಮದಲ್ಲಿ ಅವಕಾಶವಿದೆ. ಕಳೆದ ಹತ್ತು ದಿನಗಳಿಂದ ಬೈಕ್ ಟ್ಯಾಕ್ಸಿ ಸೇವೆಯನ್ನು ಅಗ್ರಿಗೇಟರ್ಸ್ ನಿಲ್ಲಿಸಿದ್ದಾರೆ. ಇದು ಪ್ರಯಾಣಿಕರಿಗೆ ವಿನಾಶಕಾರಿ ಎಂದು ಮಾಧ್ಯಮ ವರದಿಗಳು ಹೇಳಿವೆ. ಸರ್ಕಾರ ಅನುಮತಿ ನೀಡಬೇಕಿಲ್ಲ. ಶಾಸನದಲ್ಲಿ ನೀಡಲಾಗಿರುವ ಅವಕಾಶದ ಅನ್ವಯ ನೋಂದಣಿ ಮಾಡಬೇಕು ಅಷ್ಟೆ” ಎಂದರು.
“ಹಾಲಿ ಇರುವ ಅಗ್ರಿಗೇಟರ್ ನಿಯಮಗಳು ದ್ವಿಚಕ್ರ ವಾಹನಗಳನ್ನು ಸೇರ್ಪಡೆ ಮಾಡಬೇಕು ಎನ್ನುತ್ತದೆ. ಆದರೆ, ಬೈಕ್ ಟ್ಯಾಕ್ಸಿಗೆ ನಿಷೇಧ ಹೇರಿರುವುದು ಕ್ಯಾರಿಯೇಜ್ ಪರವಾನಗಿ ಪಡೆಯಲು ಮತ್ತು ಅವರ ಬೈಕ್ ನೋಂದಣಿಗೆ ಅವಕಾಶ ನಿರಾಕರಿಸುತ್ತದೆ” ಎಂದರು.
“ಮೋಟಾರ ವಾಹನ ಕಾಯಿದೆಯಲ್ಲಿ ಸಾರಿಗೆ ವಾಹನಗಳನ್ನಾಗಿ ದ್ವಿಚಕ್ರ ವಾಹನ ನೋಂದಾಯಿಸಲು ಅವಕಾಶವಿದೆ. ಶಾಸನದಲ್ಲಿ ಅದಕ್ಕೆ ಅವಕಾಶವಿರುವಾಗ ರಾಜ್ಯ ಸರ್ಕಾರ ನೋಂದಾಯಿಸುವುದಿಲ್ಲ ಮತ್ತು ಬೈಕ್ ಟ್ಯಾಕ್ಸಿಗೆ ಕ್ಯಾರಿಯೇಜ್ ಪರವಾನಗಿಗೆ ಅನುಮತಿಸುವುದಿಲ್ಲ ಎಂದು ಹೇಳಲಾಗದು” ಎಂದರು.
“ಉದ್ಯಮ ನಡೆಸಲು ಮೂಲಭೂತ ಹಕ್ಕಿದೆ. ಕಾನೂನಿನಲ್ಲಿ ಅವಕಾಶವಿರುವಾಗ ಸರ್ಕಾರ ಅದನ್ನು ನಿರ್ಬಂಧಿಸಲಾಗದು. ಬೈಕ್ ಟ್ಯಾಕ್ಸಿ ಸೇವೆ ಕಲ್ಪಿಸುವಾಗ ಸುರಕ್ಷತೆಯ ಸಮಸ್ಯೆ ಇದ್ದರೆ ಕಲ್ಯಾಣ ರಾಜ್ಯವಾಗಿ ಸರ್ಕಾರ ಅದನ್ನು ಬಗೆಹರಿಸಬಹುದು. ಆದರೆ, ಬೈಕ್ ಟ್ಯಾಕ್ಸಿ ಸೇವೆ ನೀಡಲು ಅವಕಾಶ ನೀಡುವುದಿಲ್ಲ ಎನ್ನಲಾಗದು. ಕಾಂಟ್ರಾಕ್ಟ್ ಕ್ಯಾರಿಯೇಜ್ ಅನ್ನು ಮೋಟಾರ್ ಕ್ಯಾಬ್ ಮತ್ತು ಮ್ಯಾಕ್ಸಿ ಕ್ಯಾಬ್ ಎಂದು ವಿಭಜಿಸಲಾಗಿದೆ” ಎಂದರು.
“ಒಂದು ಲಕ್ಷಕ್ಕೂ ಅಧಿಕ ಬೈಕ್ ಟ್ಯಾಕ್ಸಿಗಳು ಸೇವೆ ನೀಡುತ್ತಿದ್ದು, ಜನರು ಅವುಗಳನ್ನು ಬಳಕೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ನೇಮಕ ಮಾಡಿದ್ದ ಸಮಿತಿಯು ಬೆಂಗಳೂರಿಗೆ ಬೈಕ್ ಟ್ಯಾಕ್ಸಿ ಅಗತ್ಯವಿಲ್ಲ ಎಂದಿದೆ. ಬೈಕ್ ಟ್ಯಾಕ್ಸಿ ಸೇವೆ ಪಡೆಯಬೇಕು ಎನ್ನುವವರನ್ನು ನಿರ್ಬಂಧಿಸಲಾಗದು. ಪ್ರತಿಯೊಬ್ಬರಿಗೂ ಅತ್ಯಂತ ಕಡಿಮೆ ದರದಲ್ಲಿ ವೇಗದೂತ ಸಾರಿಗೆ ಬೇಕಿದೆ. ಸರ್ಕಾರವು ಇ-ಬೈಕ್ ಸೇವೆ ಹಿಂಪಡೆದಿದೆ. ಇ-ಬೈಕ್ ನೀತಿ ಮತ್ತು ಈಗಿನ ಸರ್ಕಾರದ ನಿಲುವಿನಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಸಾರಿಗೆ ಕ್ಯಾರೇಜ್‌ಗೆ ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ. ದೇಶದ 11 ರಾಜ್ಯಗಳಲ್ಲಿ ಅಲ್ಲಿನ ಕಾನೂನಿಗೆ ಅನುಗುಣವಾಗಿ ಬೈಕ್ ಟ್ಯಾಕ್ಸಿ ಸೇವೆಯಿದೆ” ಎಂದರು.
ರ‍್ಯಾಪಿಡೊ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ, ವಕೀಲ ಎ ವಿ ನಿಶಾಂತ್, ಓಲಾ ಪರ ಹಿರಿಯ ವಕೀಲ ಅರುಣ್ ಕುಮಾರ್, ಹಿರಿಯ ವಕೀಲ ಶ್ತೀನಿವಾಸ್ ರಾಘವನ್ ಹಾಜರಿದ್ದರು.