Byrati Basavaraj & HC
Byrati Basavaraj & HC

[ಬಿಕ್ಲು ಶಿವು ಕೊಲೆ ಪ್ರಕರಣ] ತನಿಖೆಗೆ ಹಾಜರಾಗಲು ಸಿಐಡಿ ನೋಟಿಸ್‌ ನೀಡಿಲ್ಲ: ಬೈರತಿ ಬಸವರಾಜ್‌ ಪರ ವಾದ

“ಬಸವರಾಜ್‌ ತನಿಖೆಗೆ ಸಹಕರಿಸಲು ಸಿದ್ಧರಾಗಿರುವ ಕಾರಣ ಪರಿಗಣಿಸಿ ತನಿಖೆಗೆ ತಪ್ಪದೇ ಹಾಜರಾಗಬೇಕು ಮತ್ತು ಸೀಮಿತ ಅವಧಿಗೆ ಕಸ್ಟಡಿಗೆ ಒಳಗಾಗಬಹುದು ಎಂಬಂತಹ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ನೀಡಬೇಕು” ಎಂದು ಕೋರಿದ ಚೌಟ.
Published on

ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣ ಸಿಐಡಿಗೆ ವರ್ಗಾವಣೆಯಾದ ನಂತರ ತನಿಖೆಗೆ ಹಾಜರಾಗಲು ನಿರ್ದೇಶಿಸಿ ಆರೋಪಿಯಾಗಿರುವ ಮಾಜಿ ಸಚಿವ ಬೈರತಿ ಬಸವರಾಜ್‌ಗೆ ಒಮ್ಮೆಯೂ ನೋಟಿಸ್‌ ಜಾರಿ ಮಾಡಿಲ್ಲ ಎಂದು ಬಸವರಾಜ್‌ ಪರ ವಕೀಲರು ಕರ್ನಾಟಕ ಹೈಕೋರ್ಟ್‌ ಮುಂದೆ ಮಂಗಳವಾರ ಬಲವಾಗಿ ವಾದಿಸಿದರು.

ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಬೈರತಿ ಬಸವರಾಜ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್ ದತ್‌ ಯಾದವ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಬಸವರಾಜ್‌ ಪರ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಪ್ರಕರಣದ ತನಿಖೆಯು 2025ರ ಜುಲೈ 24ಕ್ಕೆ ಸಿಐಡಿ ಪೊಲೀಸರಿಗೆ ವರ್ಗಾವಣೆಯಾಯಿತು. ಅಲ್ಲಿಂದ ಈವರೆಗೂ ತನಿಖೆಗೆ ಹಾಜರಾಗಲು ಅರ್ಜಿದಾರರಿಗೆ ತನಿಖಾಧಿಕಾರಿಗಳು ನೋಟಿಸ್‌ ನೀಡಿಲ್ಲ. ಅದಕ್ಕೂ ಮುನ್ನ ಜುಲೈ 19 ಮತ್ತು 23ರಂದು ಭಾರತೀನಗರ ಠಾಣಾ ಪೊಲೀಸರ ಮುಂದೆ ಬಸವರಾಜ್‌ ಹಾಜರಾಗಿ ಹೇಳಿಕೆ ನೀಡಿದ್ದರು. ಆ ಹೇಳಿಕೆಗಳು ಸುಳ್ಳು ಎನ್ನುವುದು ನಿರೀಕ್ಷಣಾ ಜಾಮೀನು ರದ್ದತಿ ಕೋರಲು ಆಧಾರವಾಗುವುದಿಲ್ಲ” ಎಂದರು.

“ಅರ್ಜಿದಾರರನ್ನು ಬಂಧಿಸಿ ವಿಚಾರಣೆ ನಡೆಸುವ ಅಗತ್ಯವಿದೆ ಎನ್ನುವ ಸಿಐಡಿ ತನಿಖಾಧಿಕಾರಿಗಳು, ತನಿಖೆಗೆ ಬಸವರಾಜು ಸಹಕರಿಸುತ್ತಿಲ್ಲ. ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಸಾಕ್ಷ್ಯಧಾರಗಳನ್ನು ನಾಶಪಡಿಸಲು ಯತ್ನಿಸಿದ್ದಾರೆ. ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದಾಗಿ  ಹೇಳುತ್ತಿಲ್ಲ. ಬಸವರಾಜು ಅವರು ತನಿಖೆಗೆ ಸಹಕರಿಸಲು ಸಿದ್ಧವಾಗಿರುವುದಾಗಿ ಪದೇ ಪದೇ ಹೇಳಿದ್ದಾರೆ. ಅದರ ಭಾಗವಾಗಿಯೇ ಎಫ್‌ಐಆರ್‌ ರದ್ದತಿಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸಹ ಹಿಂಪಡೆದುಕೊಂಡಿದ್ದಾರೆ” ಎಂದು ವಿವರಿಸಿದರು.

“ಪ್ರಕರಣದ ಇತರೆ ಆರೋಪಿಗಳ ವಿರುದ್ಧ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿರುವ ಸಿಐಡಿ ತನಿಖಾಧಿಕಾರಿಗಳು, ಬಸವರಾಜ್‌ ವಿರುದ್ಧ ಮಾತ್ರ ಆರೋಪ ಪಟ್ಟಿ ಸಲ್ಲಿಸಿಲ್ಲ. ಅವರ ವಿರುದ್ಧದ ತನಿಖೆ ನಡೆಸಲಾಗುವುದು ಎಂದಷ್ಟೆ ಹೇಳಿದ್ದಾರೆ. ತನಿಖೆ ಹೈಕೋರ್ಟ್‌ ಯಾವುದೇ ತಡೆಯಾಜ್ಞೆ ನೀಡದಿದ್ದರೂ, ತನಿಖೆಗೆ ಹಾಜರಾಗಲು ತನಿಖಾಧಿಕಾರಿಗಳೂ ಬಸವರಾಜ್‌ಗೆ ನೋಟಿಸ್‌ ನೀಡಿಲ್ಲ. ಈಗ ಮಾತ್ರ ಬಂಧಿಸಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಹೇಳುತ್ತಿರುವುದು ನ್ಯಾಯಸಮ್ಮತವಾಗಿಲ್ಲ” ಎಂದು ಆಕ್ಷೇಪಿಸಿದರು.

Also Read
ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್‌ ಕಸ್ಟಡಿಗೆ ಪಡೆದು ತನಿಖೆ ನಡೆಸುವುದು ಅಗತ್ಯವೆಂದು ವಾದಿಸಿದ ಸರ್ಕಾರ

“ಪ್ರಕರಣದಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಸವರಾಜ್‌ ಭಾಗಿಯಾಗಿಲ್ಲ. ಅವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ತನಿಖಾಧಿಕಾರಿಗಳು ದಾಖಲೆ ತೋರಿಸುತ್ತಿಲ್ಲ. ಬಸವರಾಜ್‌  ತನಿಖೆಗೆ ಸಹಕರಿಸಲು ಸಿದ್ಧರಾಗಿರುವ ಕಾರಣ ಪರಿಗಣಿಸಿ ತನಿಖೆಗೆ ತಪ್ಪದೇ ಹಾಜರಾಗಬೇಕು ಮತ್ತು ಸೀಮಿತ ಅವಧಿಗೆ ಕಸ್ಟಡಿಗೆ ಒಳಗಾಗಬಹುದು ಎಂಬಂತಹ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ನೀಡಬೇಕು” ಎಂದು ಕೋರಿದರು. ಈ ವಾದ ಆಲಿಸಿದ ಪೀಠವು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

Kannada Bar & Bench
kannada.barandbench.com