
ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದ ಆರೋಪಿಯಾಗಿರುವ ಕೆ ಆರ್ ಪುರ ಕ್ಷೇತ್ರದ ಬಿಜೆಪಿಯ ಶಾಸಕ ಬೈರತಿ ಬಸವರಾಜ್ ಪ್ರಭಾವದಿಂದಾಗಿ ತನಿಖೆಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ ಎಂದು ಪ್ರಾಸಿಕ್ಯೂಷನ್ ಕಳವಳ ವ್ಯಕ್ತಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ 90 ದಿನಗಳ ಒಳಗಾಗಿ ಆರೋಪ ಪಟ್ಟಿ ಸಲ್ಲಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಪ್ರಕರಣದ ಐವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಬುಧವಾರ ವಿಚಾರಣೆ ನಡೆಸಿದರು.
ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ಎನ್.ನಾಯಕ್ ಅವರು “ಈ ಪ್ರಕರಣದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಣಕಾಸಿನ ಲಾಭಕ್ಕಾಗಿ ಕ್ರಿಮಿನಲ್ ಹಿನ್ನೆಲೆಯುಳ್ಳವರು ಭಾಗಿಯಾಗಿದ್ದು, ರಾಜಕೀಯ ಪ್ರಭಾವಿಗಳ ಬೆಂಬಲದಿಂದ ವ್ಯವಹಾರ ನಿರ್ವಹಿಸುತ್ತಿದ್ದಾರೆ” ಎಂದರು.
“ಈ ಕೊಲೆ ಒಂದು ಸಂಘಟಿತ ಅಪರಾಧವಾಗಿದ್ದು, ಈಗಾಗಲೇ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ–2000) ಕಾಯಿದೆ ಅನ್ವಯಿಸಿ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ 40ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆ. ಅವರ ಸುರಕ್ಷತೆಯ ದೃಷ್ಟಿಯಿಂದ ಹೆಸರು ಬಹಿರಂಗಪಡಿಸಲು ಆಗುವುದಿಲ್ಲ. ಕೋಕಾ ಕಾಯಿದೆ ಸೆಕ್ಷನ್ 22(2) ಬಿ ಅನ್ವಯ ಬಂಧನದ ಅವಧಿಯನ್ನು ಹೆಚ್ಚುವರಿ 90 ದಿನಗಳ ಕಾಲ ವಿಸ್ತರಿಸಬೇಕು” ಎಂದು ಕೋರಿದರು.
ಇದಕ್ಕೆ ಪ್ರತಿಯಾಗಿ ಆರೋಪಿಗಳ ಪರ ವಕೀಲ ಸುಯೋಗ ಹೇರಳೆ “ಅರ್ಜಿದಾರರ ವಿರುದ್ಧ ಆರೋಪ ಪಟ್ಟಿ ಸಲ್ಲಿಸುವಲ್ಲಿ ಪ್ರಾಸಿಕ್ಯೂಷನ್ ವಿಳಂಬ ಧೋರಣೆ ತೋರುತ್ತಿದ್ದು, ಕಾನೂನು ಬಾಹಿರವಾಗಿ ನ್ಯಾಯಾಂಗ ಬಂಧನದಲ್ಲಿ ಇರುವಂತೆ ಮಾಡಿದೆ” ಎಂದು ಆಕ್ಷೇಪಿಸಿದರು. ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆದೇಶ ಕಾಯ್ದಿರಿಸಿದರು. ಈ ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಬೈರತಿ ಬಸವರಾಜ್ ಅವರಿಗೆ ಹೈಕೋರ್ಟ್ ಈಗಾಗಲೇ ಬಂಧನದಿಂದ ರಕ್ಷಣೆ ನೀಡಿ ಆದೇಶಿಸಿದೆ.
ಭಾರತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮಿನಿ ಅವೆನ್ಯೂ ರಸ್ತೆಯಲ್ಲಿರುವ ಸೇಫ್ ಮೆಡಿಕಲ್ ಸ್ಟೋರ್ ಮುಂಭಾಗ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವುನನ್ನು 2025ರ ಜುಲೈ 15ರಂದು 8 ರಿಂದ 9 ಜನರಿದ್ದು ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಈ ಪ್ರಕರಣದಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಾದ ಎ–2 ಕೆ ಕಿರಣ್, ಎ–3 ವಿಮಲ್ ರಾಜ್, ಎ–6 ಪ್ರದೀಪ್, ಎ–7 ಮದನ್ ಮತ್ತು ಎ–8 ಸ್ಯಾಮ್ಯುಯಲ್ ಡಿಫಾಲ್ಟ್ ಜಾಮೀನು ಕೋರಿದ್ದಾರೆ.