ತೃಣಮೂಲ ಕಾಂಗ್ರೆಸ್ ನಾಯಕ ಭಾದು ಶೇಖ್ ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ಶುಕ್ರವಾರ ಕಲ್ಕತ್ತಾ ಹೈಕೋರ್ಟ್ ವರ್ಗಾಯಿಸಿದೆ.
ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯಲ್ಲಿ ಟಿಎಂಸಿ ಸ್ಥಳೀಯ ನಾಯಕ ಭಾದು ಶೇಖ್ ಕೊಲೆಯ ಬೆನ್ನಿಗೆ ಸಂಭವಿಸಿದ ಹಿಂಸಾಚಾರದಲ್ಲಿ ಬೋಗ್‌ತುಯಿಯಲ್ಲಿ ಮನೆಗಳಿಗೆ ಬೆಂಕಿ ಹಚ್ಚಿ ಎಂಟು ಮಂದಿಯ ಸಾವಿಗೆ ಕಾರಣವಾದ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ರಾಜರ್ಷಿ ಭಾರದ್ವಾಜ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಟಿಎಂಸಿ ನಾಯಕನ ಹತ್ಯೆ ಮತ್ತು ಆ ಬಳಿಕ ನಡೆದ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಎರಡೂ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸಿದರೆ ಸತ್ಯ ಸಂಗತಿ ಬಹಿರಂಗಗೊಳ್ಳಲು ಮತ್ತು ಒಂದೇ ವಿಚಾರಣಾಧೀನ ನ್ಯಾಯಾಲಯದಲ್ಲಿ ಪ್ರಕ್ರಿಯೆ ಮುಂದುವರಿಸಲು ಅನುಕೂಲವಾಗಲಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.
ಎರಡೂ ಘಟನೆಗಳಿಗೆ ಸಂಬಂಧವಿದೆ ಎಂದು ನಮ್ಮ ಮುಂದಿರುವ ದಾಖಲೆಗಳಿಂದ ಮೇಲ್ನೋಟಕ್ಕೆ ತಿಳಿದು ಬಂದಿದೆ. ಭಾದು ಶೇಖ್ ಮತ್ತು ಬೋಗ್‌ತುಯಿಯಲ್ಲಿ ಮನೆಗಳಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾದ ಪ್ರಕರಣಳೆರಡನ್ನೂ ಸಿಬಿಐ ತನಿಖೆ ನಡೆಸಲು ನಿರ್ದೇಶಿಸಲಾಗಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.
ಎರಡೂ ಪ್ರಕರಣಗಳಿಗೆ ಸಂಬಂಧವಿರುವುದರಿಂದ ಎರಡೂ ಕೊಲೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸುವ ಮೂಲಕ ಸತ್ಯ ಬಹಿರಂಗಗೊಳ್ಳುವಂತೆ ಮಾಡಬೇಕು ಎಂದು ಮನವಿದಾರರೊಬ್ಬರು ಕೋರಿದ್ದರು. ಭಾದು ಶೇಖ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಲಾಗಿಲ್ಲ. ಸದ್ಯದ ತನಿಖೆಯ ಬಗ್ಗೆ ಯಾವುದೇ ಆಕ್ಷೇಪವನ್ನು ಎತ್ತಲಾಗಿಲ್ಲ ಎಂದು ಅಡ್ವೊಕೇಟ್ ಜನರಲ್ ಎಸ್ ಎನ್ ಮುಖರ್ಜಿ ವಾದಿಸಿದ್ದರು.