ಜನನ-ಮರಣ ನೋಂದಣಿ ತಿದ್ದುಪಡಿ ಕಾನೂನುಬಾಹಿರ: ಉಪವಿಭಾಗಾಧಿಕಾರಿ ಬೇಡ, ಮ್ಯಾಜಿಸ್ಟ್ರೇಟ್‌ ಬಳಿಯೇ ಇರಲಿ ಅಧಿಕಾರ ಎಂದ ಎಎಬಿ

ಕರ್ನಾಟಕದಲ್ಲಿ ಸಾವಿರಾರು ಕಿರಿಯ ವಕೀಲರು ಜನನ ಮತ್ತು ಮರಣ ಪ್ರಕರಣಗಳನ್ನು ನಡೆಸುತ್ತಿದ್ದು, ಇದನ್ನು ಆಧರಿಸಿ ಬದುಕು ನಡೆಸುತ್ತಿದ್ದಾರೆ. ತಿದ್ದುಪಡಿ ಕಾಯಿದೆಯಿಂದ ಅವರಿಗೆ ತೀವ್ರ ಸಮಸ್ಯೆ ಎದುರಾಗಲಿದೆ ಎಂದು ಎಎಬಿ ವಿವರಿಸಿದೆ.
AAB
AAB

ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಕರ್ನಾಟಕ ಜನನ ಮತ್ತು ಮರಣ (ತಿದ್ದುಪಡಿ) ನಿಯಮಗಳು-2022 ಮೂಲ ಕಾಯಿದೆಗೆ ವಿರುದ್ಧವಾಗಿದೆ ಎಂದು ಸರ್ಕಾರದ ನಿಲುವಿಗೆ ವಕೀಲ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದ್ದು, 2022ರ ಜುಲೈ 18ರಂದು ಕಾಯಿದೆಯ ನಿಯಮಕ್ಕೆ ತರಲಾಗಿರುವ ತಿದ್ದುಪಡಿ ಅಧಿಸೂಚನೆಯನ್ನು ಹಿಂಪಡೆಯಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಕಾನೂನು ಇಲಾಖೆಯ ಕಾರ್ಯದರ್ಶಿಗೆ ಬೆಂಗಳೂರು ವಕೀಲರ ಸಂಘವು ಈಚೆಗೆ ಪತ್ರ ಬರೆದು ಆಗ್ರಹಿಸಿದೆ.

ಜನನ ಮತ್ತು ಮರಣ ನೋಂದಣಿ ಪ್ರಕರಣಗಳನ್ನು ನ್ಯಾಯಾಲಯಗಳಿಂದ ಉಪವಿಭಾಗಾಧಿಕಾರಿಗೆ ವರ್ಗಾಯಿಸುವ ಸರ್ಕಾರದ ಕ್ರಮಕ್ಕೆ ವಕೀಲರ ಸಮುದಾಯ ತೀವ್ರ ಆಕ್ಷೇಪವಿದೆ. ಸರ್ಕಾರದ ನಿರ್ಧಾರದಿಂದ ವೃತ್ತಿಪರ ವಕೀಲರಿಗೆ ತೀವ್ರ ಸಮಸ್ಯೆಯಾಗಿದ್ದು, ಅವರ ಜೀವನೋಪಾಯಕ್ಕೆ ಹೊಡೆತ ಬೀಳಲಿದೆ. ಕರ್ನಾಟಕದಲ್ಲಿ ಸಾವಿರಾರು ಕಿರಿಯ ವಕೀಲರು ಜನನ ಮತ್ತು ಮರಣ ಪ್ರಕರಣಗಳನ್ನು ನಡೆಸುತ್ತಿದ್ದು, ಇದನ್ನು ಆಧರಿಸಿ ಬದುಕು ನಡೆಸುತ್ತಿದ್ದಾರೆ. ತಿದ್ದುಪಡಿ ಕಾಯಿದೆಯಿಂದ ಅವರಿಗೆ ತೀವ್ರ ಸಮಸ್ಯೆ ಎದುರಾಗಲಿದೆ ಎಂದು ವಿವರಿಸಲಾಗಿದೆ.

ಸಾರ್ವಜನಿಕ ವಲಯದಲ್ಲಿ ಅಪಾರ ಪ್ರಮಾಣದಲ್ಲಿ ನಕಲಿ ಜನನ ಪ್ರಮಾಣ ಪತ್ರ ಮತ್ತು ಆಧಾರ್‌ ಬಳಕೆ ಮಾಡಲಾಗುತ್ತಿದೆ. ಇದನ್ನು ತಡೆಯುವ ಶಕ್ತಿ ಇರುವುದು ನ್ಯಾಯಾಂಗಕ್ಕೆ ಮಾತ್ರ. ನ್ಯಾಯಾಲಯದ ಮುಂದಿನ ಪ್ರಕ್ರಿಯೆಯಲ್ಲಿ ತಪ್ಪು ಎಸಗಲು ಆಗದು. ನ್ಯಾಯಾಧೀಶರು ಯಾವುದೇ ಅಳುಕು ಅಥವಾ ಮೀನಮೇಷ ಎಣಿಸಿದೇ ಕಾನೂನು ಅನ್ವಯಿಸುತ್ತಾರೆ. ಸಮಾಜದ ಹಿತದೃಷ್ಟಿಯಿಂದ ಜನನ ಮತ್ತು ಮರಣ ನೋಂದಣಿ ವಿಚಾರಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳಿಗಿಂತ ನ್ಯಾಯಾಧೀಶರು ನಿರ್ಧರಿಸುವುದು ಸೂಕ್ತ. ಕಂದಾಯ ಇಲಾಖೆಯ ನ್ಯಾಯಾಲಯಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೇ, ಇಲ್ಲಿ ದಲ್ಲಾಳಿಗಳು ಮತ್ತು ಮಧ್ಯವರ್ತಿಗಳು ವ್ಯಾಪಕ ಭ್ರಷ್ಟಾಚಾರ ನಡೆಸುತ್ತಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿಲ್ಲದಿರುವುದು ಒಂದೆಡೆಯಾದರೆ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪಗಳಿವೆ. ಹೀಗಾಗಿ, ಜನನ ಮತ್ತು ಮರಣ ನೋಂದಣಿಯಂಥ ವಿಚಾರವನ್ನು ಈ ದಲ್ಲಾಳಿ, ಮಧ್ಯವರ್ತಿಗಳು ಮತ್ತು ಅಧಿಕಾರಿಗಳಿಗೆ ವಹಿಸುವುದು ಸರಿಯಲ್ಲ ಎಂದು ಎಂದು ಎಎಬಿ ಹೇಳಿದೆ.

ಜನನ ಮತ್ತು ಮರಣ ನೋಂದಣಿ ಕಾಯಿದೆ ಸೆಕ್ಷನ್‌ 13(3)ರ ಅಡಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ಅಥವಾ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್‌ ಮಾತ್ರ ಆದೇಶ ಹೊರಡಿಸಬಹುದಾಗಿದ್ದು, ಬೇರಾರಿಗೂ ಅಧಿಕಾರವಿಲ್ಲ. ಕಾಯಿದೆ ಸೆಕ್ಷನ್‌ 13(3) ರ ಅನ್ವಯ ಈ ಹಿಂದೆ ಪ್ರೆಸಿಡೆನ್ಸ್‌ ಮ್ಯಾಜಿಸ್ಟ್ರೇಟ್‌ ಅಥವಾ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ಅವರಿಗೆ ಮಾತ್ರ ಅಧಿಕಾರವಿತ್ತು. ಮೂಲ ಕಾಯಿದೆ ವಿರುದ್ಧವಾಗಿ ತಿದ್ದುಪಡಿ ಮಾಡಿ ಈಗ ಏಕಾಏಕಿ ಅಧಿಕಾರವನ್ನು ಉಪವಿಭಾಗಾಧಿಕಾರಿ ಅಥವಾ ಉಪ ಪ್ರಾದೇಶಿಕ ಮ್ಯಾಜಿಸ್ಟ್ರೇಟ್‌ ಅವರಿಗೆ ನೀಡಲಾಗಿದೆ. ಉಪವಿಭಾಗಾಧಿಕಾರಿಯು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ಅಲ್ಲ. ಹೀಗಾಗಿ, ತಿದ್ದುಪಡಿ ಕಾಯಿದೆಯು ಕಾನೂನುಬಾಹಿರವಾಗಿದೆ ಎಂದು ಹೇಳಲಾಗಿದೆ.

Also Read
ಜನನ ಮರಣ ನೋಂದಣಿ ಅಧಿಕಾರ ವ್ಯಾಪ್ತಿ: ರಾಜ್ಯ ಸರ್ಕಾರದ ವಿವಾದಾತ್ಮಕ ಅಧಿಸೂಚನೆ ಹಿಂಪಡೆಯಲು ಮಂಗಳೂರು ವಕೀಲರ ಸಂಘ ಒತ್ತಾಯ

ಸಿಆರ್‌ಪಿಸಿ 1973ರ ಸೆಕ್ಷನ್‌ 3ರ ಅಡಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ಅವರನ್ನು ನ್ಯಾಯಿಕ ಮ್ಯಾಜಿಸ್ಟ್ರೇಟ್‌ ಎಂದು ವ್ಯಾಖ್ಯಾನಿಸಲಾಗಿದೆ. ಮ್ಯಾಜಿಸ್ಟ್ರೇಟ್‌ ಅವರು ಹೈಕೋರ್ಟ್‌ನಿಂದ ನೇಮಕವಾಗಿದ್ದು, ಕಡ್ಡಾಯವಾಗಿ ನ್ಯಾಯಿಕ ಮ್ಯಾಜಿಸ್ಟ್ರೇಟ್‌ ಆಗಿರುತ್ತಾರೆ. ಇಂಥವರಿಗೆ ಕಾಯಿದೆಯ ಸೆಕ್ಷನ್‌ 13(3)ರ ಅಡಿ ಆದೇಶ ಮಾಡುವ ಅಧಿಕಾರ ಇರುತ್ತದೆ. ಸಿಆರ್‌ಪಿಸಿ ಸೆಕ್ಷನ್‌ 20ರ ಅಡಿ ಉಪವಿಭಾಗಾಧಿಕಾರಿಯು ಕಾರ್ಯಕಾರಿ ಮ್ಯಾಜಿಸ್ಟ್ರೇಟ್‌ ಆಗಿದ್ದು, ಸಿಆರ್‌ಪಿಸಿ ಸೆಕ್ಷನ್‌ 3ರ ಅಡಿ ಅವರು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ಆಗಿರುವುದಿಲ್ಲ. ಹೀಗಾಗಿ, ತಿದ್ದುಪಡಿಯು ಕಾಯಿದೆಗೆ ವಿರುದ್ಧವಾಗಿದೆ. ಸಂಸತ್ತು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ಅವರಿಗೆ ಮಾತ್ರ ಅಧಿಕಾರ ನೀಡಿರುವುದರಿಂದ ತಿದ್ದುಪಡಿ ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಎಎಬಿ ಆಗ್ರಹಿಸಿದೆ.

Kannada Bar & Bench
kannada.barandbench.com