[ಮತೀಯ ಘೋಷಣೆ ಪ್ರಕರಣ] ಬಿಜೆಪಿ ಮುಖಂಡ ಅಶ್ವಿನಿ ಕುಮಾರ್‌ ಉಪಾಧ್ಯಾಯ್‌ ಬಂಧಿಸಿದ ದೆಹಲಿ ಪೊಲೀಸರು

“ಭಾರತ್‌ ಜೋಡೋ” ಹೆಸರಿನಲ್ಲಿ ಭಾನುವಾರ ದೆಹಲಿಯಲ್ಲಿ ನಡೆದಿದ್ದ ಸಮಾವೇಶದ ನಂತರ ಮುಸಲ್ಮಾನ ಸಮುದಾಯದ ವಿರುದ್ಧ ಮತೀಯ ಘೋಷಣೆಗಳನ್ನು ಕೂಗಲಾಗಿತ್ತು. ಆದರೆ, ತಮಗೂ ಘಟನೆಗೂ ಸಂಬಂಧವಿಲ್ಲ ಎಂದು ಅಶ್ವಿನಿ ಕುಮಾರ್ ಹೇಳಿದ್ದರು.
Advocate Ashwini Kumar Upadhyay
Advocate Ashwini Kumar Upadhyay

ಸುಪ್ರೀಂ ಕೋರ್ಟ್‌ ವಕೀಲ ಮತ್ತು ಬಿಜೆಪಿಯ ಮಾಜಿ ವಕ್ತಾರ ಅಶ್ವಿನಿ ಕುಮಾರ್ ಉಪಾಧ್ಯಾಯ್ ಹಾಗೂ ಇತರೆ ಐವರನ್ನು ದೆಹಲಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ದೆಹಲಿಯ ಜಂತರ್‌ಮಂತರ್‌ನಲ್ಲಿ ಭಾನುವಾರ ಅಶ್ವಿನಿ ಕುಮಾರ್‌ ಆಯೋಜಿಸಿದ್ದ “ವಸಾಹತುಶಾಹಿ ಕಾನೂನುಗಳ ವಿರುದ್ಧ”ದ ಸಮಾವೇಶದ ನಂತರ ಮುಸ್ಲಿಂ ವಿರೋಧಿ ಮತೀಯ ಘೋಷಣೆಗಳು ಕೂಗಲಾಗಿದ್ದ ಪ್ರಕರಣದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಅಶ್ವಿನಿ ಕುಮಾರ್ ಜೊತೆ ಬಂಧಿಸಲಾದ ಇತರೆ ಐವರನ್ನು ದೀಪಕ್‌ ಸಿಂಗ್, ದೀಪಕ್‌ ಕುಮಾರ್, ವಿನೀತ್‌ ಕ್ರಾಂತಿ, ವಿನೋದ್‌ ಶರ್ಮಾ ಮತ್ತು ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ‘ಭಾರತ್‌ ಜೋಡೋ ಚಳವಳಿ’ ಹೆಸರಿನಲ್ಲಿ ನಡೆದ ಭಾನುವಾರದ ಸಮಾವೇಶದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ವಸಾಹತುಶಾಹಿ ಕಾಲದ ಕಾನೂನುಗಳನ್ನು ಹಿಂಪಡೆಯುವಂತೆ ಹಾಗೂ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವಂತೆ ಸಮಾವೇಶದಲ್ಲಿ ಅಗ್ರಹಿಸಲಾಗಿತ್ತು.

Also Read
“ನನ್ನ ಸಮಾವೇಶ ಮುಗಿದ ಬಳಿಕ ಮುಸ್ಲಿಂ ವಿರೋಧಿ ಘೋಷಣೆ ಹಾಕಲಾಗಿದೆ:” ಸುಪ್ರೀಂ ಕೋರ್ಟ್‌ ವಕೀಲ ಅಶ್ವಿನಿ ಉಪಾಧ್ಯಾಯ

ಇದೇ ವೇಳೆ ಕೆಲವು ಮಂದಿ ಮುಸಲ್ಮಾನರ ಮಾರಣಹೋಮ ನಡೆಸುವಂತೆ ಘೋಷಣೆಗಳನ್ನು ಕೂಗಿದ್ದ ವಿಡಿಯೋ ಕೂಡ ಬೆಳಕಿಗೆ ಬಂದಿತ್ತು. ಅದರೆ, ಘೋಷಣೆಗಳಿಗೂ ತಮಗೂ ಸಂಬಂಧವಿಲ್ಲ. ತಾವು ಆಯೋಜಿಸಿದ್ದ ಸಮಾವೇಶವು ಬೆಳಗ್ಗೆ 10ರಿಂದ 12 ಗಂಟೆಯೊಳಗೆ ನಡೆದಿದ್ದು ಘೋಷಣೆಗಳನ್ನು ಸಂಜೆ 5 ಗಂಟೆಯ ನಂತರ ಕೂಗಲಾಗಿದೆ ಎಂದು ಅಶ್ವಿನಿ ಕುಮಾರ್ ‘ಬಾರ್‌ ಅಂಡ್‌ ಬೆಂಚ್’‌ಗೆ‌ ಸ್ಪಷ್ಟೀಕರಣ ನೀಡಿದ್ದರು.

“ನಮ್ಮ ಸಮಾವೇಶವು ಪಾರ್ಕ್‌ ಹೊಟೆಲ್‌ ಹೊರಗೆ ನಡೆದಿದ್ದರೆ ಘೋಷಣೆಗಳನ್ನು ಸಂಸತ್‌ ಭವನದ ಪೊಲೀಸ್ ಠಾಣೆಯ ಸಮೀಪ ಕೂಗಲಾಗಿದೆ. ಘೋಷಣೆ ಕೂಗಿದವರು ಯಾರು ಎಂದು ತಮಗೆ ತಿಳಿದಿಲ್ಲ,” ಎಂದು ಅವರು ಹೇಳಿದ್ದರು. ತದನಂತರ ತಮ್ಮ ಒಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಒಂದು ವೇಳೆ ಅಂತಹ ಘೋಷಣೆಗಳನ್ನು ಕೂಗಿರುವುದು ನಿಜವೇ ಆದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದರು.

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಜಾರಿಯೂ ಸೇರಿದಂತೆ ಅನೇಕ ಪಿಐಎಲ್‌ಗಳನ್ನು ಅಶ್ವಿನಿ ಕುಮಾರ್ ಸುಪ್ರೀಂ ಕೋರ್ಟ್ನನಲ್ಲಿ ದಾಖಲಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com