ಹೊಸ ಪಾಸ್‌ಪೋರ್ಟ್‌ಗಾಗಿ ದೆಹಲಿ ನ್ಯಾಯಾಲಯದಲ್ಲಿ ರಾಹುಲ್‌ ಮಾಡಿದ ಮನವಿಗೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಿರೋಧ

ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್‌ ಮರಳಿಸಿದ್ದರು. ಆ ಬಳಿಕ ಹೊಸ ಪಾಸ್‌ಪೋರ್ಟ್‌ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
Rahul Gandhi, Subramanian Swamy and Rouse Avenue court
Rahul Gandhi, Subramanian Swamy and Rouse Avenue court

ತಮಗೆ ನೂತನ ಪಾಸ್‌ಪೋರ್ಟ್‌ ನೀಡುವಂತೆ ದೆಹಲಿ ನ್ಯಾಯಾಲಯಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಮಾಡಿದ್ದ ಮನವಿಗೆ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಬುಧವಾರ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಹುಲ್‌ ಅವರ ವಿರುದ್ಧ ಯಾವುದೇ ಕ್ರಿಮಿನಲ್‌ ಪ್ರಕರಣಗಳು ಬಾಕಿ ಉಳಿಯದೇ ಇರುವುದರಿಂದ ಅವರಿಗೆ ನಿರಪೇಕ್ಷಣಾ ಪತ್ರ ನೀಡಬಹುದು ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವೈಭವ್ ಮೆಹ್ತಾ ಅವರೆದುರು ಹಾಜರಾದ ರಾಹುಲ್‌ ಪರ ವಕೀಲ ತರನ್ನುಮ್ ಚೀಮಾ ವಾದಿಸಿದರು.

ರಾಹುಲ್‌ ಅವರಿಗೆ ಜಾಮೀನು ನೀಡಿದ್ದ ಆದೇಶದಲ್ಲಿ ಯಾವುದೇ ನಿರ್ಬಂಧ ವಿಧಿಸಿರಲಿಲ್ಲ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಗಮನಿಸಿತು. ಆದರೂ ರಾಹುಲ್‌ ಅವರ ಮನವಿಗೆ ಪ್ರತಿಕ್ರಿಯೆ ಸಲ್ಲಿಸುವ ಹಕ್ಕು ಸ್ವಾಮಿ ಅವರಿಗೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಹೀಗಾಗಿ ಪ್ರಕರಣದ ವಿಚಾರಣೆಯನ್ನು ಮೇ 26ಕ್ಕೆ ನಿಗದಿಪಡಿಸಲಾಗಿದೆ.

Also Read
ಕ್ರಿಮಿನಲ್‌ ಮಾನಹಾನಿ: ತಮ್ಮನ್ನು ದೋಷಿ ಎಂದಿರುವ ತೀರ್ಪಿಗೆ ತಡೆ ಕೋರಿ ಗುಜರಾತ್‌ ಹೈಕೋರ್ಟ್‌ ಮೆಟ್ಟಿಲೇರಿದ ರಾಹುಲ್‌

ರಾಹುಲ್‌ ಅವರ ವಿದೇಶ ಪ್ರವಾಸಕ್ಕೆ ಅನುಮತಿಸಿದರೆ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ತನಿಖೆಗೆ ಅಡ್ಡಿ ಉಂಟಾಗಬಹುದು ಎಂದು ಸುಬ್ರಮಣಿಯನ್‌ ಸ್ವಾಮಿ ದೂರಿದ್ದಾರೆ. ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಒಡೆತನ ಹೊಂದಿದ್ದ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ಗೆ (ಎಜೆಎಲ್‌) ಕಾಂಗ್ರೆಸ್‌ ಪಕ್ಷ ₹ 90 ಕೋಟಿಯಷ್ಟು ಸಾಲ ನೀಡಿತ್ತು. ಯಂಗ್‌ ಇಂಡಿಯಾ ಸಂಸ್ಥೆ ಕಾಂಗ್ರೆಸ್‌ಗೆ ಕೇವಲ ₹ 50 ಲಕ್ಷ ಹಣ ನೀಡಿ ಎಜೆಎಲ್‌ ಕಾಂಗ್ರೆಸ್‌ಗೆ ನೀಡಬೇಕಿದ್ದ ₹ 90 ಕೋಟಿಯಷ್ಟು ಹಣ ಹಿಂಪಡೆಯಬೇಕಾದ ಹಕ್ಕನ್ನು ತನ್ನದಾಗಿಸಿಕೊಂಡಿತ್ತು ಎಂಬುದು ಹಗರಣದ ಸಾರ. 

ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ಖಾಸಗಿ ದೂರಿನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಮತ್ತು ಗಾಂಧಿ ಕುಟುಂಬ ನಿಯಂತ್ರಿತ ʼಯಂಗ್ ಇಂಡಿಯನ್ʼ ವಿರುದ್ಧ ವಂಚನೆ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ನಂಬಿಕೆ ಉಲ್ಲಂಘನೆ ಮತ್ತು ಆಸ್ತಿ ದುರುಪಯೋಗದ ಆರೋಪ ಮಾಡಿದ್ದಾರೆ.

ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದಂತೆ ಸೂರತ್‌ ನ್ಯಾಯಾಲಯ ನೀಡಿದ ಆದೇಶದ ಬಳಿಕ ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಮರಳಿಸಿದ್ದರು. ಆ ಬಳಿಕ ಹೊಸ ಪಾಸ್‌ಪೋರ್ಟ್‌ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

Kannada Bar & Bench
kannada.barandbench.com