

ಅಂಚೆ ಮತಗಳ ಮರು ಎಣಿಕೆಯಲ್ಲಿ ಗೆಲುವು ಸಾಧಿಸಿದ ಬೆನ್ನಿಗೇ ಮತಗಳನ್ನು ತಿರುಚಿದ ಆರೋಪದ ಕುರಿತು ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದತಿ ಕೋರಿ ಬಿಜೆಪಿಯ ಶೃಂಗೇರಿ ಶಾಸಕ ಡಿ ಎನ್ ಜೀವರಾಜ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ರಜಾಕಾಲದ ಏಕಸದಸ್ಯ ಪೀಠದ ಮುಂದೆ ಅರ್ಜಿ ವಿಚಾರಣೆಗೆ ನಿಗದಿಯಾಗಿದೆ.
2023ರ ಮೇ 13ರಂದು ಮತ ಎಣಿಕೆ ಮುಗಿದ ಬಳಿಕ ಜೀವರಾಜ್, ಹಿಂದಿನ ಚುನಾವಣಾಧಿಕಾರಿ ವೇದಮೂರ್ತಿ ಮತ್ತು ಚಿಕ್ಕಮಗಳೂರಿನ ಅಂದಿನ ಜಿಲ್ಲಾಧಿಕಾರಿ ರಮೇಶ್ ಅವರು ಸಂಚು ರೂಪಿಸಿ ಮತ ಪೆಟ್ಟಿಗೆಗಳ ಸೀಲು ತೆಗೆದು ರಾಜೇಗೌಡರಿಗೆ ಬಿದ್ದಿದ್ದ ಒಂದು ಕಟ್ಟಿನ 170 ಮತಗಳನ್ನು ತಿದ್ದುಪಡಿ ಮಾಡಿದ್ದಾರೆ. ಈ ವಿಚಾರವನ್ನು 2026ರ ಮೇ 2ರಂದು ಮತ ಮರು ಎಣಿಕೆ ಆರಂಭಿಸುವುದಕ್ಕೂ ಮುನ್ನವೇ ಪ್ರಸ್ತಾಪಿಸಿ 2026ರ ಮೇ 3ರಂದು ಕಾಂಗ್ರೆಸ್‌ನ ಮತ ಎಣಿಕೆಯಲ್ಲಿ ಭಾಗಿಯಾಗಿದ್ದ ಏಜೆಂಟ್ ಸುಧೀರ್ ಕುಮಾರ್ ಮುರೋಳ್ಳಿ ಚಿಕ್ಕಮಗಳೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ಇದರ ಅನ್ವಯ ಆರೋಪಿಗಳ ವಿರುದ್ಧಐಪಿಸಿ ಸೆಕ್ಷನ್‌ಗಳಾದ 143 (ಅಕ್ರಮ ಕೂಟ), 465 (ಸುಳ್ಳು ದಾಖಲೆ ಸೃಷ್ಟಿ), 468 (ವಂಚಿಸಲು ಸುಳ್ಳು ದಾಖಲೆ ಸೃಷ್ಟಿ), 471 (ಸುಳ್ಳು ದಾಖಲೆಗಳನ್ನು ಅಸಲಿ ಎಂದು ಬಿಂಬಿಸುವುದು), 120B (ಪಿತೂರಿ), and 149 (ಸಮಾನ ಉದ್ದೇಶ) ಜೊತೆಗೆ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 136ರ (ಚುನಾವಣಾ ಅಕ್ರಮ) ಅಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನು ಜೀವರಾಜ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್‌ನ ಟಿ ಡಿ ರಾಜೇಗೌಡರ ಆಯ್ಕೆ ಪ್ರಶ್ನಿಸಿ ಜೀವರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ 2026ರ ಏಪ್ರಿಲ್ 6ರಂದು ತಿರಸ್ಕೃತವಾಗಿರುವ 279 ಅಂಚೆ ಮತಗಳನ್ನು ಪರಿಶೀಲಿಸಿ ವಿಜೇತರನ್ನು ಘೋಷಿಸುವಂತೆ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ 2026ರ ಮೇ 3ರಂದು ಚುನಾವಣಾಧಿಕಾರ ನ್ಯಾಯಾಲಯದ ನಿರ್ದೇಶನದ ಅನುಸಾರ ಅಂಚೆ ಮತಗಳನ್ನು ಮರು ಎಣಿಕೆ ಮಾಡಿ ಕಾಂಗ್ರೆಸ್ ಟಿ ಡಿ ರಾಜೇಗೌಡ ವಿರುದ್ಧ ಜೀವರಾಜ್ ವಿಜೇತರು ಎಂದು ಫಾರ್ಮ್ 21C ಪತ್ರ ನೀಡಿದ್ದರು. ಇದಕ್ಕೂ ಮುನ್ನ, ಮೂರು ವರ್ಷಗಳ ಕಾಲ ರಾಜೇಗೌಡ ಶಾಸಕರಾಗಿದ್ದರು. 201 ಮತಗಳ ಕೂದಲೆಳೆ ಅಂತರದಲ್ಲಿ ರಾಜೇಗೌಡ ಜಯಭೇರಿ ಬಾರಿಸಿದ್ದರು.
ಹೊಸದಾಗಿ ಮತ ಎಣಿಕೆ ನಡೆದು ತಾನು ವಿಜೇತ ಎಂದು ಘೋಷಿಣೆಯಾದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಇದು ನ್ಯಾಯಾಲಯದ ಆದೇಶವನ್ನು ವಿಫಲಗೊಳಿಸುವ ಪ್ರಯತ್ನವಾಗಿದೆ. ಅಲ್ಲದೇ, ನ್ಯಾಯಾಲಯದ ನಿರ್ದೇಶನದಂತೆ ಮರು ಎಣಿಕೆಯಾದ ತಕ್ಷಣ ವಿಜೇತರನ್ನು ಚುನಾವಣಾಧಿಕಾರಿ ಘೋಷಿಸಿರಲಿಲ್ಲ. ವಾಟ್ಸಾಪ್ ಮೂಲಕ ಲೀಗಲ್ ನೋಟಿಸ್ ಕಳುಹಿಸಿದ ಬಳಿಕ ಜಯ ಘೋಷಿಸಲಾಗಿದೆ. ಸ್ವತಂತ್ರವಾಗಿ ನಿರ್ಧರಿಸಿ ಎಫ್‌ಐಆರ್ ದಾಖಲಿಸಿಲ್ಲ. ಬದಲಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಬಳಿಕ ಪ್ರಕರಣ ದಾಖಲಿಸಲಾಗಿದೆ ಎಂದು ಜೀವರಾಜ್ ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ. ವಕೀಲೆ ಡಾ. ಪಿ ಎಲ್ ವಂದನಾ ಮೂಲಕ ಅವರು ವಕಾಲತ್ತು ವಹಿಸಿದ್ದಾರೆ.