ಇನ್ನೂ ದೊರೆಯದ ಭದ್ರತೆ: ಕೇಂದ್ರದ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋದ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ

ಸರ್ಕಾರಿ ವಸತಿ ಮರುಹಂಚಿಕೆ ಮಾಡುವಂತೆ ಸ್ವಾಮಿ ಅವರು ಈ ಹಿಂದೆ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ಸರ್ಕಾರ, ಹೆಚ್ಚಿನ ಭದ್ರತೆಯ ಭರವಸೆ ನೀಡಿತ್ತಾದರೂ ಅದಕ್ಕೆ ಇನ್ನೂ ವ್ಯವಸ್ಥೆ ಮಾಡಿಲ್ಲ ಎಂದು ಸ್ವಾಮಿ ಪರ ವಕೀಲರು ವಾದಿಸಿದ್ದಾರೆ.
ಇನ್ನೂ ದೊರೆಯದ ಭದ್ರತೆ: ಕೇಂದ್ರದ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋದ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ

ತಮ್ಮ ಖಾಸಗಿ ನಿವಾಸದಲ್ಲಿ ಭದ್ರತೆ ಒದಗಿಸದ ಕೇಂದ್ರ ಸರ್ಕಾರದ ವೈಫಲ್ಯದ ವಿರುದ್ಧ ಬಿಜೆಪಿಯ ಮಾಜಿ ರಾಜ್ಯಸಭಾ ಸದಸ್ಯ  ಸುಬ್ರಮಣಿಯನ್ ಸ್ವಾಮಿ ಅವರು ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ.

ಹಿರಿಯ ವಕೀಲ ಜಯಂತ್ ಮೆಹ್ತಾ ಅವರು ಇಂದು ಪ್ರಕರಣ ಕುರಿತು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ಪೀಠದ ಮುಂದೆ ಪ್ರಸ್ತಾಪಿಸಿದರು. ಆಗ ಪೀಠವು ಸ್ವಾಮಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 31, ಸೋಮವಾರದಂದು ಪಟ್ಟಿ ಮಾಡಲು ಸೂಚಿಸಿತು.

Also Read
ಏರ್ ಇಂಡಿಯಾ ಬಂಡವಾಳ ಹಿಂತೆಗೆತ ಪ್ರಕ್ರಿಯೆ ಟಾಟಾ ಪರವಾಗಿದೆ: ದೆಹಲಿ ಹೈಕೋರ್ಟ್‌ನಲ್ಲಿ ಸುಬ್ರಮಣಿಯನ್‌ ಸ್ವಾಮಿ ವಾದ

ತಮಗೆ ನೀಡಲಾಗಿದ್ದ ಸರ್ಕಾರಿ ಬಂಗಲೆಯನ್ನು ಮರುಹಂಚಿಕೆ ಮಾಡುವಂತೆ ಸ್ವಾಮಿ ಅವರು ಈ ಹಿಂದೆ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ಸರ್ಕಾರವು ಸ್ವಾಮಿ ಅವರ ಖಾಸಗಿ ನಿವಾಸದಲ್ಲಿಯೇ ಅವರಿಗೆ ಭದ್ರತೆ ಮುಂದುವರಿಸುವುದಾಗಿ ಭರವಸೆ ನೀಡಿದ್ದ ವಿಚಾರವನ್ನು ಮೆಹ್ತಾ ನ್ಯಾಯಾಲಯದ ಗಮನಕ್ಕೆ ತಂದರು. ಆದರೆ ಈ ನಿಟ್ಟಿನಲ್ಲಿ ಈವರೆಗೆ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಸ್ವಾಮಿ ಅವರು ಝಡ್‌ ಶ್ರೇಣಿ ರಕ್ಷಣೆ ಪಡೆಯುತ್ತಿದ್ದು ತಮಗೆ ಜೀವ ಬೆದರಿಕೆ ಇರುವುದರಿಂದ ತಾವು ರಾಜ್ಯಸಭಾ ಸದಸ್ಯರಾಗಿದ್ದ ವೇಳೆ ನೀಡಲಾಗಿದ್ದ ಸರ್ಕಾರಿ ಬಂಗಲೆಯನ್ನೇ ಹಂಚಿಕೆ ಮಾಡುವಂತೆ ಸೆಪ್ಟೆಂಬರ್ 2022ರಲ್ಲಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಸ್ವಾಮಿ ಅವರಿಗೆ ಭದ್ರತೆಯನ್ನು ಕೇಂದ್ರ ಸರ್ಕಾರ ಕಡಿಮೆ ಮಾಡದಿದ್ದರೂ ಭದ್ರತೆಯೊಂದಿಗೆ ವಸತಿಯನ್ನು ಒದಗಿಸಲೇಬೇಕೆಂಬ ಯಾವುದೇ ಹೊಣೆ ತನ್ನ ಮೇಲಿಲ್ಲ ಎಂದು ಕೇಂದ್ರ ಸರ್ಕಾರವು ಸ್ವಾಮಿ ಅವರ ಮನವಿಗೆ ವಿರೋಧ ವ್ಯಕ್ತಪಡಿಸಿತ್ತು. ಇದೇ ವೇಳೆ ಅವರ ಖಾಸಗಿ ನಿವಾಸದಲ್ಲಿಯೇ ಅವರಿಗೆ ಭದ್ರತೆ ಮುಂದುವರೆಸುವುದಾಗಿ ತಿಳಿಸಿತ್ತು. ಅಂತಿಮವಾಗಿ ನ್ಯಾಯಾಲಯವು ಸರ್ಕಾರಿ ವಸತಿಯನ್ನು ಕೇವಲ ಐದು ವರ್ಷಗಳವರೆಗೆ ಮಾತ್ರವೇ ಹಂಚಿಕೆ ಮಾಡಲಾಗಿದ್ದು, ಝಡ್ ಶ್ರೇಣಿ ರಕ್ಷಣೆ ಹೊಂದಿರುವವರಿಗೆ ಸರ್ಕಾರಿ ವಸತಿಯನ್ನು ಕಡ್ಡಾಯವಾಗಿ ನೀಡಲೇಬೇಕು ಎನ್ನುವುದಕ್ಕೆ ಯಾವುದೇ ದಾಖಲೆಗಳನ್ನು ಸ್ವಾಮಿ ಅವರು ನೀಡಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತ್ತು .

Related Stories

No stories found.
Kannada Bar & Bench
kannada.barandbench.com