ದ್ವೇಷ ಭಾಷಣ: ಕೇರಳದ ಬಿಜೆಪಿ ಮುಖಂಡ ಪಿ ಸಿ ಜಾರ್ಜ್ 14 ದಿನಗಳ ಕಾಲ ಪೊಲೀಸ್ ವಶಕ್ಕೆ

ಜಾರ್ಜ್ ಅವರಿಗೆ ಜಾಮೀನು ನೀಡಲು ನಿರಾಕರಿಸಿದ ಎರಟ್ಟುಪೆಟ್ಟಾ ಜೆಎಂಎಫ್‌ಸಿ ನ್ಯಾಯಾಲಯ ಪ್ರಕರಣದ ತನಿಖೆಗಾಗಿ ಅವರನ್ನು 14 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿತು.
PC George
PC George Facebook
Published on

ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದ್ವೇಷ ಭಾಷಣ ಪ್ರಕರಣ ಎದುರಿಸುತ್ತಿರುವ ಬಿಜೆಪಿ ನಾಯಕ ಪಿ ಸಿ  ಜಾರ್ಜ್ ಅವರಿಗೆ ಜಾಮೀನು ನೀಡಲು ಕೇರಳ ನ್ಯಾಯಾಲಯ ಸೋಮವಾರ ನಿರಾಕರಿಸಿದೆ.

ಕಳೆದ ವಾರ ಕೇರಳ ಹೈಕೋರ್ಟ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು, ನಂತರ ಜಾರ್ಜ್ ಪೊಲೀಸರ ಮುಂದೆ ಶರಣಾಗಿದ್ದರು.

Also Read
ದ್ವೇಷ ಭಾಷಣ: ಶರದ್ ಪವಾರ್ ಬಣದ ಎನ್‌ಸಿಪಿ ಶಾಸಕ ಜಿತೇಂದ್ರ ಅವಾದ್ ವಿರುದ್ಧ ಎಫ್‌ಐಆರ್ ದಾಖಲಿಸಲು ಥಾಣೆ ನ್ಯಾಯಾಲಯ ಆದೇಶ

ಜಾರ್ಜ್‌ ಅವರು ತದನಂತರ ಜಾಮೀನಿಗಾಗಿ ಎರಟ್ಟುಪೆಟ್ಟಾ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರಿಗೆ ಜಾಮೀನು ನೀಡಲು ನಿರಾಕರಿಸಿದ ನ್ಯಾಯಾಲಯ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿತು.

ಜನವರಿ 5 ರಂದು ಜನಮ್ ಟಿವಿಯಲ್ಲಿ ಪ್ರಸಾರವಾಗಿದ್ದ ಕಾರ್ಯಕ್ರಮದಲ್ಲಿ ಜಾರ್ಜ್ ಅವರು, ಭಾರತದಲ್ಲಿರುವ ಎಲ್ಲಾ ಮುಸ್ಲಿಮರು ಭಯೋತ್ಪಾದಕರು ಮತ್ತು ಕೋಮುವಾದಿಗಳು. ಭಾರತದಲ್ಲಿ ಭಯೋತ್ಪಾದಕರಲ್ಲದ ಒಬ್ಬ ಮುಸ್ಲಿಂ ಕೂಡ ಇಲ್ಲ ಎಂದು ಹೇಳಿಕೆ ನೀಡಿದ್ದರು. ಮುಸ್ಲಿಮರನ್ನು ಪಾಕಿಸ್ತಾನಕ್ಕೆ ವಲಸೆ ಹೋಗುವಂತೆಯೂ ಒತ್ತಾಯಿಸಿದ್ದ ಅವರು ಆ ಸಮುದಾಯವನ್ನು "ಭಿಕ್ಷುಕರು" ಎಂದಿದ್ದರು.

ಜಾರ್ಜ್‌ ವಿರುದ್ಧ ಮುಸ್ಲಿಂ ಯೂತ್ ಲೀಗ್ ಮುನ್ಸಿಪಲ್ ಸಮಿತಿ ದೂರು ದಾಖಲಿಸಿತ್ತು. ಬಿಎನ್‌ಎಸ್‌ ಸೆಕ್ಷನ್‌ 196(1)(ಎ) (ಧಾರ್ಮಿಕ, ಜನಾಂಗೀಯ ಅಥವಾ ಭಾಷೆಯ ಆಧಾರದ ಮೇಲೆ ದ್ವೇಷಕ್ಕೆ ಕುಮ್ಮಕ್ಕು) ಮತ್ತು 299 (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ದುರುದ್ದೇಶಪೂರಿತ ಕೃತ್ಯಗಳು) ಮತ್ತು ಕೇರಳ ಪೊಲೀಸ್ ಕಾಯಿದೆಯ ಸೆಕ್ಷನ್ 120(ಒ) (ಕಾನೂನುಬಾಹಿರ ಸಭೆ) ಅಡಿಯಲ್ಲಿ ಪೊಲೀಸರು ಜಾರ್ಜ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.

 ಈ ಘಟನೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಪರಿಣಾಮ ಜಾರ್ಜ್ ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದರು.

Also Read
ಬಿಜೆಪಿ ನಾಯಕರ ಕುರಿತ ದ್ವೇಷ ಭಾಷಣ ಪ್ರಕರಣ: ಪಿಐಎಲ್‌ ಹಿಂದೆ ರಾಜಕೀಯ, ಕೋಮು ಉದ್ದೇಶವಿದೆ ಎಂದ ಹೈಕೋರ್ಟ್‌; ಅರ್ಜಿ ವಜಾ

ಜಾರ್ಜ್ ಮೊದಲು ಕೊಟ್ಟಾಯಂನ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಮತ್ತೊಂದು ದ್ವೇಷ ಭಾಷಣ ಪ್ರಕರಣದಲ್ಲಿ ಜಾಮೀನು ನೀಡುವಾಗ ಹೈಕೋರ್ಟ್‌ ವಿಧಿಸಿದ್ದ ಷರತ್ತನ್ನು ಜಾರ್ಜ್‌ ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಅದು ಅವರ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರಾದರೂ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ಕೂಡ ತಿರಸ್ಕರಿಸಿತ್ತು.  

ಜಾರ್ಜ್‌ ಅವರನ್ನು ಪೊಲೀಸರು ಬಂಧಿಸುವ ಯತ್ನದಲ್ಲಿದ್ದಾಗಲೇ ಅವರು ಎರಟ್ಟುಪೆಟ್ಟಾ ಜೆಎಫ್‌ಸಿ ನ್ಯಾಯಾಲಯದೆದುರು ಶರಣಾಗಿದ್ದು ನ್ಯಾಯಾಲಯ ಅವರನ್ನು ಪೊಲೀಸ್‌ ಕಸ್ಟಡಿಗೆ ನೀಡಿದೆ.

Kannada Bar & Bench
kannada.barandbench.com