
ಕೆಲ ವರ್ಷಗಳ ಹಿಂದೆ ವಿವಿಧ ಸಮುದಾಯಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು ಕೊಡುವ ಉದ್ದೇಶದಿಂದ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಸಚಿವ ಜಿತೇಂದ್ರ ಅವಾದ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಥಾಣೆ ನ್ಯಾಯಾಲಯ ಫೆಬ್ರವರಿ 3ರಂದು ಪೊಲೀಸರಿಗೆ ನಿರ್ದೇಶನ ನೀಡಿದೆ.
ಎನ್‌ಸಿಪಿಯ ಶರದ್ ಪವಾರ್ ಬಣದೊಂದಿಗೆ ಗುರುತಿಸಿಕೊಂಡಿರುವ ಅವಾದ್ ಅವರ ವಿರುದ್ಧ ದ್ವೇಷಕ್ಕೆ ಕುಮ್ಮಕ್ಕು ನೀಡುವುದನ್ನು ಅಪರಾಧೀಕರಿಸುವ ಐಪಿಸಿ ಸೆಕ್ಷನ್ 153 ಎ ಮತ್ತು 505 (2) ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಥಾಣೆ ನ್ಯಾಯಾಲಯದ ನ್ಯಾಯಾಧೀಶರಾದ ಮಹಿಮಾ ಸೈನಿ , ಭಯಂದರ್ ಪೊಲೀಸರಿಗೆ ಆದೇಶಿಸಿದರು. ಅಲ್ಲದೆ, ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ.
2018ರಲ್ಲಿ ಮುಂಬೈ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ವೈಭವ್ ರಾವತ್ ಅವರನ್ನು ಬಂಧಿಸಿದ ಬಗ್ಗೆ ಅವಾದ್ ಹೇಳಿಕೆ ನೀಡಿದ್ದರು ಎನ್ನಲಾಗಿತ್ತು. ರಾವತ್ ಬಂಧನದ ವೇಳೆ ವಶಪಡಿಸಿಕೊಂಡ ಬಾಂಬ್‌ಗಳು ಮರಾಠಾ ಮೋರ್ಚಾ ಸಮಾವೇಶ ಅಡ್ಡಿಪಡಿಸುವ ಉದ್ದೇಶ ಹೊಂದಿದ್ದವು ಎಂದು ಅವಾದ್ ಆರೋಪಿಸಿದ್ದರು.
ಮರಾಠಾ ಮತ್ತು ಭಂಡಾರಿ ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟುಮಾಡುವ ಹೇಳಿಕೆಗಳನ್ನು ಅವಾದ್ ನೀಡಿದ್ದಾರೆ. ಈ ಹೇಳಿಕೆಗಳು ಹಲವಾರು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿವೆ ಎಂದು ದೂರಿ ಹಿಂದೂಸ್ಥಾನ್ ನ್ಯಾಷನಲ್ ಪಾರ್ಟಿಯ ಯುವ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಮತ್ತು ವಕೀಲರಾದ ಖುಷ್ ಖಂಡೇಲ್‌ವಾಲ್ ಅವರು ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು.
ಅವಾದ್ ನೀಡಿದ ಹೇಳಿಕೆಗಳು ಆಧಾರರಹಿತವಾಗಿದ್ದು, ಮರಾಠಾ, ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಬೆಳೆಸುವ ಸಾಮರ್ಥ್ಯ ಹೊಂದಿವೆ ಎಂದು ಖಂಡೇಲ್‌ವಾಲ್ ವಿಚಾರಣೆ ವೇಳೆ ವಾದಿಸಿದ್ದರು.
ಆದರೆ ಅರ್ಜಿದಾರರು ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಮತ್ತು ವಿಷಯವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವಾದ್ ಪರ ವಕೀಲರು ವಾದಿಸಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಅರ್ಜಿಯಲ್ಲಿ ಹುರುಳಿದೆ ಎಂದು ತಿಳಿಸಿ ಎಫ್ಐಆರ್ ದಾಖಲಿಸಲು ಆದೇಶಿಸಿತು.