ಖಾತೆ ನಿರ್ಬಂಧ: ಹೈಕೋರ್ಟ್‌ ರಿಜಿಸ್ಟ್ರಿಯಲ್ಲಿ ₹25 ಲಕ್ಷ ಠೇವಣಿ ಇರಿಸಿದ ಎಕ್ಸ್‌ ಕಾರ್ಪ್‌

“ಮೇಲ್ಮನವಿದಾರರು ₹25 ಲಕ್ಷ ರೂಪಾಯಿಗಳನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸುವ ಆದೇಶಕ್ಕೆ ಒಳಪಟ್ಟು ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲಾಗಿದೆ” ಎಂದು ವಿಭಾಗೀಯ ಪೀಠ ಈ ಹಿಂದೆ ಆದೇಶಿಸಿತ್ತು.
Karnataka High Court, X
Karnataka High Court, X

ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶದಂತೆ ರಿಜಿಸ್ಟ್ರಿಯಲ್ಲಿ ₹25 ಲಕ್ಷ ಠೇವಣಿ ಇರಿಸಲಾಗಿದೆ ಎಂದು ಎಕ್ಸ್‌ ಕಾರ್ಪ್‌ (ಟ್ವಿಟರ್‌) ಏಕಸದಸ್ಯ ಪೀಠಕ್ಕೆ ಬುಧವಾರ ತಿಳಿಸಿದೆ.

ಎಕ್ಸ್‌ ಕಾರ್ಪ್‌ ಪ್ರತಿನಿಧಿಸಿದ್ದ ವಕೀಲ ಮನು ಕುಲಕರ್ಣಿ ಅವರು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಪೀಠದ ಮುಂದೆ ಹಾಜರಾಗಿ ₹50 ಲಕ್ಷ ದಂಡದ ಮೊತ್ತದ ಪೈಕಿ ವಿಭಾಗೀಯ ಪೀಠದ ಆದೇಶದಂತೆ ₹25 ಲಕ್ಷವನ್ನು ರಿಜಿಸ್ಟ್ರಿಯಲ್ಲಿ ಠೇವಣಿ ಇಡಲಾಗಿದೆ ಎಂದು ತಿಳಿಸಿದರು. ಇದನ್ನು ಪೀಠವು ದಾಖಲಿಸಿಕೊಂಡಿತು.

ಕೇಂದ್ರ ಸರ್ಕಾರವು 2021 ಮತ್ತು 2022ರ ಅವಧಿಯಲ್ಲಿ ಆಯ್ದ ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸಲು ಸೂಚಿಸಿ ಮಾಡಿದ್ದ ಆದೇಶಗಳನ್ನು ಕಾಲಮಿತಿಯಲ್ಲಿ ಪಾಲಿಸಲು ವಿಫಲವಾದ ಆರೋಪದ ಮೇಲೆ ಎಕ್ಸ್‌ ಕಾರ್ಪ್‌ಗೆ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠವು ಜೂನ್‌ 30ರಂದು ₹50 ಲಕ್ಷ ದಂಡ ವಿಧಿಸಿ ಆದೇಶಿಸಿತ್ತು.

“ಅರ್ಜಿಗಳು ಅನೂರ್ಜಿತಗೊಂಡಿದ್ದು, ಟ್ವಿಟರ್‌ಗೆ ₹50 ಲಕ್ಷ ದಂಡ ವಿಧಿಸಲಾಗಿದೆ. 45 ದಿನಗಳ ಒಳಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಟ್ವಿಟರ್‌ ದಂಡದ ಮೊತ್ತವನ್ನು ಪಾವತಿಸಬೇಕು. ಇದನ್ನು ಪಾಲಿಸಲು ಟ್ವಿಟರ್‌ ವಿಫಲವಾದರೆ 45 ದಿನಗಳ ಬಳಿಕ ಪ್ರತಿದಿನ ಹೆಚ್ಚುವರಿಯಾಗಿ ₹5 ಸಾವಿರ ಪಾವತಿಸಬೇಕು” ಎಂದು ಏಕ ಸದಸ್ಯ ಪೀಠವು ಆದೇಶಿಸಿತ್ತು.

Also Read
ಟ್ವಿಟರ್‌ಗೆ ವಿಧಿಸಿದ್ದ ₹50 ಲಕ್ಷ ದಂಡದ ಆದೇಶಕ್ಕೆ ತಡೆ; ₹25 ಲಕ್ಷ ಠೇವಣಿ ಇರಿಸಲು ಹೈಕೋರ್ಟ್‌ ಸೂಚನೆ

ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದ ಎಕ್ಸ್‌ ಕಾರ್ಪ್‌, ₹50 ಲಕ್ಷ ದಂಡ ವಿಧಿಸಿರುವುದಕ್ಕೆ ತಡೆ ನೀಡುವಂತೆ ಕೋರಿತ್ತು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠವು “ಮೇಲ್ಮನವಿದಾರರು ₹25 ಲಕ್ಷ ರೂಪಾಯಿಗಳನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸುವ ಆದೇಶಕ್ಕೆ ಒಳಪಟ್ಟು ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲಾಗಿದೆ” ಎಂದು ಆದೇಶಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

Related Stories

No stories found.
Kannada Bar & Bench
kannada.barandbench.com