
ಮೂವರು ಕ್ಯಾನ್ಸರ್ ರೋಗಿಗಳು ಮತ್ತು ಒಬ್ಬ ಮಾನಸಿಕ ರೋಗಿಯನ್ನು ಹೊಂದಿರುವ ಕುಟುಂಬವೊಂದರ ನೆರವಿಗೆ ಧಾವಿಸಿರುವ ಕರ್ನಾಟಕ ಹೈಕೋರ್ಟ್, ವೈದ್ಯಕೀಯ ಚಿಕಿತ್ಸೆಗೆ ಹಣ ಹೊಂದಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನಕ್ಕೆ ಗುರುತಿಸಿರುವ ಕುಟುಂಬದ 2 ಎಕರೆ 3 ಗುಂಟೆ ಜಮೀನಿನ ಪೈಕಿ ಶೇ.50ರಷ್ಟನ್ನು ಪರಭಾರೆ ಅಥವಾ ವರ್ಗಾವಣೆಗೆ ಮಾಡಲು ಅನುಮತಿಸಿದೆ.
ಬೆಂಗಳೂರಿನ ಮತ್ತಿಕೆರೆಯ ನಿವಾಸಿಗಳಾದ ಟಿ ಜಿ ಶಾಂತಮ್ಮ ಮತ್ತವರ ಕುಟುಂಬ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಮಾನ್ಯ ಮಾಡಿದೆ.
ಜಮೀನು ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿ ಹಲವು ತಿಂಗಳು ಕಳೆದರೂ ಈವರೆಗೂ ಉದ್ದೇಶಿತ ಪರಿಹಾರ ನೀಡದ ಹಿನ್ನೆಲೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಹಣ ಹೊಂದಿಸಲು ಮತ್ತು ಆರ್ಥಿಕ ಸಂಕಷ್ಟದಿಂದ ಸುಧಾರಣೆಯಾಗಲು ಅನುಕೂಲವಾಗುವಂತೆ ಸ್ವಾಧೀನಕ್ಕೆ ಗುರುತಿಸಿರುವ ಜಮೀನಿಗೆ ನೀಡಲು ಉದ್ದೇಶಿಸಿರುವ ಪರಿಹಾರದಲ್ಲಿ ಶೇ.50ರಷ್ಟು ಮೊತ್ತ (1.62 ಕೋಟಿ ರೂಪಾಯಿ) ಬಿಡುಗಡೆ ಮಾಡಲು ಕೆಐಎಡಿಬಿಗೆ ನಿರ್ದೇಶಿಸಬೇಕು. ಇಲ್ಲವೇ ಜಮೀನನಲ್ಲಿ ಶೇ.50ರಷ್ಟು ಪರಭಾರೆ ಹಾಗೂ ವರ್ಗಾವಣೆ ಮಾಡಲು ಅನುಮತಿ ನೀಡುವಂತೆ ಕೋರಿ ಅರ್ಜಿದಾರರು ಮನವಿ ಮಾಡಿದ್ದರು.
ಆ ಮನವಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯವು ಒಂದು ವೇಳೆ ಅರ್ಜಿದಾರರಿಗೆ ಆಸ್ತಿ ಪರಭಾರೆ ಅಥವಾ ವರ್ಗಾವಣೆಗೆ ಅವಕಾಶ ಕಲ್ಪಿಸದಿದ್ದರೆ ಕಾಯಿಲೆಗೆ ಬಲಿಯಾಗುವ ಸಾಧ್ಯತೆಯಿದೆ. ಚಿಕಿತ್ಸೆ ತುರ್ತಾಗಿ ಹಣದ ಅಗತ್ಯವಿದೆ. ಸಂವಿಧಾನದದಲ್ಲಿ ಜೀವಿಸುವ ಹಕ್ಕಿಗೆ ಖಾತರಿಯಿದೆ. ಚಿಕಿತ್ಸೆ ಪಡೆಯುವ ಅವಕಾಶದಿಂದ ಅರ್ಜಿದಾರರನ್ನು ದೂರ ತಳ್ಳಿದರೆ, ಅದು ಅವರ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಲಿದೆ. ಹೀಗಾಗಿ, ಸ್ವಾಧೀನಕ್ಕೆ ಗುರುತಿಸಿರುವ ಜಮೀನಿನ ಶೇ.50ರಷ್ಟು ಭಾಗವನ್ನು ಪರಭಾರೆ ಮತ್ತು ವರ್ಗಾವಣೆಗೆ ಅನುಮತಿಸಲಾಗುತ್ತಿದೆ ಎಂದು ನ್ಯಾಯಾಲಯವು ಆದೇಶಿಸಿದೆ.
ಅಲ್ಲದೆ, ಜಮೀನನ್ನು ಖರೀದಿ ಮಾಡುವವರು ಹೆಸರುಗಳು ಜೊತೆಗೆ ಜಮೀನು ಮಾರಾಟ ಮಾಡಿದ ತಕ್ಷಣ ಈ ಸಂಬಂಧ ಮಾಹಿತಿಯನ್ನು ರಾಜ್ಯ ಸರ್ಕಾರ ಮತ್ತು ಕೆಐಎಡಿಬಿಗೆ ಒದಗಿಸಬೇಕು ಎಂದು ಅರ್ಜಿದಾರರಿಗೆ ಇದೇ ವೇಳೆ ಪೀಠ ನಿರ್ದೇಶಿಸಿದೆ.
“ಒಬ್ಬ ಪ್ರಜೆಯ ಜೀವನವು ಕೆಲವು ಆಸ್ತಿಯ ಮೇಲೆ ಅವಲಂಬಿತವಾಗಿದೆ. ಅಲ್ಲದೆ, ಸ್ವಾಧೀನಕ್ಕೆ ಗುರುತಿಸಿರುವ ಜಮೀನಿನ ಪರಿಹಾರ ಪಾವತಿಸುವಲ್ಲಿ ವಿಳಂಬವಾಗುತ್ತಿದೆ. ಈ ಸಂದರ್ಭದಲ್ಲಿ ರೋಗಿಗೆ ನೆರವಾಗಬೇಕಾದ ಅಗತ್ಯವಿದೆ. ಮಾರಣಾಂತಿಕ ಕಾಯಿಲೆ ಇದ್ದಾಗ ವೈದ್ಯಕೀಯ ಚಿಕಿತ್ಸೆಗೆ ಹಣವನ್ನು ಸಂಗ್ರಹಿಸಲು ಜೀವನೋಪಾಯಕ್ಕಾಗಿ ಉಳಿಸಿಕೊಂಡ ಜಮೀನನ್ನು ಮಾರಾಟ ಮಾಡಲು ವ್ಯಕ್ತಿಯನ್ನು ತಡೆದರೆ ಅದು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ‘ಆಕ್ಸಿಜನ್ ಮಾಸ್ಕ್’ ತೆಗೆದುಹಾಕಿದಂತಾಗುತ್ತದೆ” ಎಂದು ಪೀಠ ಕಳವಳ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಆದ್ದರಿಂದ ಪರಿಹಾರದಲ್ಲಿ ಭಾಗಶಃ ಹಣವನ್ನು ನೀಡಲು ಸಾಧ್ಯವಿಲ್ಲ ಎಂಬುದಾಗಿ ಕೆಐಎಡಿಬಿ ಹೇಳಿದೆ. ಆದರೆ, ಸದ್ಯ ಚಿಕಿತ್ಸೆ ಹಣ ತುರ್ತಾಗಿ ಬೇಕಿದೆ. ಇದರಿಂದ ಪರಿಹಾರ ನೀಡದಿದ್ದರೂ ಸ್ವಾಧೀನಕ್ಕೆ ಗುರುತಿಸಿರುವ 2 ಎಕರೆ 3 ಗುಂಟೆ ಜಾಗದಲ್ಲಿ ಶೇ.50ರಷ್ಟನ್ನು ಪರಭಾರೆ ಅಥವಾ ವರ್ಗಾಣೆ ಮಾಡಲು ಅವಕಾಶ ನೀಡಿದರೆ, ಅರ್ಜಿದಾರರು ತೃಪ್ತಿಗೊಳ್ಳುತ್ತಾರೆ ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ: ಶಾಂತಮ್ಮ ಮತ್ತು ಅವರ ಇಬ್ಬರು ಪುತ್ರರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಮತ್ತೊಬ್ಬ ಪುತ್ರ ಮಾನಸಿಕ ರೋಗಿಯಾಗಿದ್ದಾರೆ. ಅವರ ಮಗಳು ಹಾಗೂ ಅಳಿಯ ಈ ಎಲ್ಲರನ್ನು ಆರೈಕೆ ಮಾಡುತ್ತಿದ್ದಾರೆ. ಆದರೆ, ಚಿಕಿತ್ಸೆ ಒದಗಿಸುವುದಕ್ಕೆ ಹಣವಿಲ್ಲ. ಬೇರೊಂದು ಆದಾಯ ಮೂಲವೂ ಇಲ್ಲ. ಮತ್ತೊಂದೆಡೆ ಚಿಕಿತ್ಸೆ ಕಲ್ಪಿಸುವುದಕ್ಕಾಗಿ ಈಗಾಗಲೇ ಪಡೆದಿರುವ 50 ಲಕ್ಷ ರೂಪಾಯಿ ಸಾಲವನ್ನು ಹಿಂದುಗಿಸಲಾಗದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹುಲಿಕುಂಟೆ ಗ್ರಾಮದಲ್ಲಿ ತಮಗೆ ಸೇರಿರುವ 2 ಎಕರೆ 3 ಗುಂಟೆ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲು ಕೆ ಐಎಡಿಬಿ ಅಧಿಸೂಚನೆ ಹೊರಡಿಸಿದೆ. ಹೀಗಾಗಿ, ಸ್ವಾಧೀನಕ್ಕೆ ಉದ್ದೇಶಿಸಿರುವ ಜಾಗಕ್ಕೆ ನಿಗದಿಪಡಿಸಿರುವ ಪರಿಹಾರ ಮೊತ್ತದಲ್ಲಿ ಶೇ.50ರಷ್ಟು ಪಾವತಿಸಬೇಕು ಎಂದು ಕೆಐಎಡಿಬಿಗೆ ಅರ್ಜಿದಾರರು ಕೋರಿದ್ದರು. ಇದಕ್ಕೆ ಕೆಐಎಡಿಬಿ ಸ್ಪಂದಿಸದ್ದಕ್ಕೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.