ನಕಲಿ ಶಸ್ತ್ರಾಸ್ತ್ರಗಳಿಗೆ ಮರಣೋತ್ತರ ಪರೀಕ್ಷೆಯ ಬಳಿಕ ರಕ್ತ ಸವರಿದ ಟಿಂಗರಿಕರ್: ಶಿಕ್ಷೆ ಅಮಾನತಿಗೆ ಸಿಬಿಐ ವಿರೋಧ

“ಜೀವಾವಧಿ ಶಿಕ್ಷೆಗೆ ವಿನಯ್‌ ಕುಲಕರ್ಣಿ ಗುರಿಯಾಗಿರುವುದರಿಂದ ಶಾಸಕ ಸ್ಥಾನದಿಂದ ಅನರ್ಹರಾಗಿದ್ದಾರೆ. ಆ ಸ್ಥಾನಕ್ಕೆ ಚುನಾವಣೆ ನಡೆಸದಂತೆ ಆಯೋಗಕ್ಕೆ ತಡೆಯೊಡ್ಡಬೇಕು” ಎಂದು ಕೋರಿದ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ.
Yogesh Gowda
Yogesh GowdaFacebook
Published on

ಧಾರವಾಡದ ಬಿಜೆಪಿ‌ ಮುಖಂಡ ಯೊಗೀಶ್ ಗೌಡ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಇನ್ಸ್‌ಪೆಕ್ಟರ್ ಚನ್ನಕೇಶವ ಟಿಂಗರಿಕರ್, ನೈಜ ಆರೋಪಿಗಳನ್ನು ಪರಾರಿಯಾಗಲು ಬಿಟ್ಟು, ನಕಲಿ ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ.‌ ಕೊಲೆಗೆ ಬಳಸಿದ್ದ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟು, ನಕಲಿ ಶಸ್ತ್ರಾಸ್ತ್ರಗಳಿಗೆ ಮರಣೋತ್ತರ ಪರೀಕ್ಷೆ ನಡೆಸಿದಾಗ ದೊರೆತ ರಕ್ತವನ್ನು ಸವರುವ ಮೂಲಕ ಸ್ವತಃ ತಾವೇ  ಸಾಕ್ಷಿ‌ ಸೃಷ್ಟಿಸಿದ್ದಾರೆ‌ ಎಂದು ಆರೋಪಿಸಿದ ಸಿಬಿಐ ಅವರಿಗೆ ವಿಧಿಸಿರುವ ಶಿಕ್ಷೆ ಅಮಾನತುಗೊಳಿಸಬಾರದು ಎಂದು ಬಲವಾಗಿ ವಾದಿಸಿತು.

ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ವಿಧಿಸಿರುವ ಏಳು ವರ್ಷ ಶಿಕ್ಷೆಯನ್ನು ಅಮಾನತಿನಲ್ಲಿರಿಸಿ, ಜಾಮೀನು ಕೋರಿರುವ ಚನ್ನಕೇಶವ ಟಿಂಗರಿಕರ್ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್‌ ಸುನೀಲ್‌ ದತ್‌ ಯಾದವ್‌ ಮತ್ತು ಎಸ್‌ ರಾಚಯ್ಯ ಅವರ ವಿಭಾಗೀಯ ಪೀಠ ನಡೆಸಿತು.

ಸಿಬಿಐ ಪರ ವಾದಿಸಿದ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ ವಿ ರಾಜು ಅವರು ಯೋಗೀಶ್‌ ಗೌಡ‌ಕೊಲೆ ಪ್ರಕರಣದಲ್ಲಿ ಟಿಂಗರಿಕರ್‌ ತನಿಖಾಧಿಕಾರಿಯಾಗಿದ್ದರು.‌ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದರೂ 7ರಿಂದ 14ನೇ ಆರೋಪಿಗಳನ್ನು ಮೊದಲು ಆರೋಪಿಗಳನ್ನಾಗಿಸಿಲ್ಲ. ಕಾಂಗ್ರೆಸ್‌ ಮುಖಂಡ ವಿನಯ್‌ ಕುಲಕರ್ಣಿ ಅವರ ಹೆಸರನ್ನು ತೆಗೆಯದಂತೆ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದರು ಎಂದರು.

ಅಲ್ಲದೇ,‌ ಸಾಕ್ಷ್ಯ ನಾಶ ಅಪರಾಧಕ್ಕೆ ಐಪಿಸಿ ಸೆಕ್ಷನ್‌ 201 ಮತ್ತು 218 ಅಡಿ ಟಿಂಗರಿಕರ್‌ಗೆ ಗರಿಷ್ಠ 7 ವರ್ಷ ಶಿಕ್ಷೆ ವಿಧಿಸಲಾಗಿದೆ. ‌ಈ ಪ್ರಕರಣಕ್ಕೆ ಕಾನೂನಿನಲ್ಲಿ ಇನ್ನೂ ಹೆಚ್ಚಿನ ಪ್ರಮಾಣ ಶಿಕ್ಷೆ ವಿಧಿಸಲು ಅವಕಾಶವಿದ್ದರೆ ವಿಚಾರಣಾಧೀನ ನ್ಯಾಯಾಲಯ ವಿಧಿಸುತ್ತಿತ್ತು. ಟೆಂಗರಿಕರ್‌ ಜೈಲಿನಲ್ಲಿ 70ಕ್ಕೂ ಹೆಚ್ಚು ದಿನ ಮಾತ್ರ ಕಳೆದಿದ್ದಾರೆ. ಈ ಹಂತದಲ್ಲಿ ಶಿಕ್ಷೆ ಅಮಾನತು ಮಾಡಿ ಜಾಮೀನು ಮಂಜೂರು ಮಾಡಬಾರದು. ಎರಡು ವರ್ಷದ ನಂತರ ಅರ್ಜಿ ಸಲ್ಲಿಸಲು ಆದೇಶಿಸಬೇಕು ಎಂದು ವಾದಿಸಿದರು.

ಟಿಂಗರಿಕರ್ ಪರ ಹಿರಿಯ ವಕೀಲ ಪಿ ಪಿ ಹೆಗ್ಡೆ “ಪಿತೂರಿ ನಡೆಸಿದ ಹಾಗೂ ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ಟೆಂಗರಿಕರ್‌ ವಿರುದ್ಧವಿದೆ. ಅದಕ್ಕೆ ಐಪಿಸಿ ಸೆಕ್ಷನ್‌ 201 ಮತ್ತು 218 ಅಡಿ ಗರಿಷ್ಠ ಏಳು ವರ್ಷ ಶಿಕ್ಷೆ ವಿಧಿಸಲಾಗಿದೆ. ಇವು ಜಾಮೀನುರಹಿತ ಪ್ರಕರಣಗಳಾಗಿವೆ. 2026ರ ಏಪ್ರಿಲ್‌ 15ರಿಂದ ಟಿಂಗರಿಕರ್‌ ಜೈಲಿನಲ್ಲಿರುವುದರಿಂದ ಸ್ವಯಂಚಾಲಿಕತವಾಗಿ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಲಾಗಿದೆ”‌ ಎಂದು ವಾದಿಸಿದರು.

ಪ್ರಕಣರದಲ್ಲಿ ಬಸವರಾಜ ಮುತ್ತಗಿ ಮತ್ತು 17ನೇ ಆರೋಪಿಯಾಗಿದ್ದ ಶಿವಾನಂದ ಬಿರಾದಾರ್‌ ಅವರು ಅಪ್ರೂವರ್‌ ಆಗಿದ್ದು, ಅವರ ಸಾಕ್ಷಿಯನ್ನು ಆಧರಿಸಿ ಟೆಂಗರಿಕರ್‌ಗೆ ಶಿಕ್ಷೆ ವಿಧಿಸಲಾಗಿದೆ.‌ ಹಾಗಾಗಿ, ಶಿಕ್ಷೆ ಅಮಾನತುಪಡಿಸಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.

ಈ ಮಧ್ಯೆ ಶಿಕ್ಷೆ ಅಮಾನತಿಗೆ ವಿರೋಧಿಸಿ ಮಧ್ಯಂತರ ಅರ್ಜಿಸಿರುವ ಸಂತ್ರಸ್ತರ ಪರ ವಕೀಲರು, ತಾವು ಎಎಸ್‌ಜಿ ರಾಜು ಅವರ ವಾದವನ್ನು ಅಳವಡಿಸಿಕೊಳ್ಳುವುದಾಗಿ ತಿಳಿಸಿದರು.

ವಾದ- ಪ್ರತಿವಾದ ಆಲಿಸಿದ ಪೀಠ ವಿಚಾರಣೆಯನ್ನು‌ ಶುಕ್ರವಾರಕ್ಕೆ ಮುಂದೂಡಿತು. ಈ ಮಧ್ಯೆ, 15ನೇ ಆರೋಪಿ ವಿನಯ್ ಕುಲಕರ್ಣಿ ಮತ್ತು 16ನೇ ಆರೋಪಿ ಚಂದ್ರಶೇಖರ್ ಇಂಡಿ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಗಳ ವಿಚಾರಣೆಯನ್ನು ನ್ಯಾಯಾಲಯವು ‌ಜೂನ್ 2ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ವಿನಯ್ ಕುಲಕರ್ಣಿ ಪರ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಅವರು ಜೀವಾವಧಿ ಶಿಕ್ಷೆಯಾಗಿರುವುದರಿಂದ ‌ಕುಲಕರ್ಣಿ‌ ಅವರ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಸದ್ಯ ಖಾಲಿಯಿರುವ ಅವರ ಸ್ಥಾನಕ್ಕೆ ಮಧ್ಯಂತರ ಚುನಾವಣೆಯನ್ನು ಚುನಾವಣಾ ಆಯೋಗ ಘೋಷಣೆ ಮಾಡುವ ಸಾಧ್ಯತೆಯಿದೆ. ಹಾಗಾಗಿ, ಚುನಾವಣೆ ಘೋಷಣೆ ಮಾಡುವುದಕ್ಕೆ ತಡೆಯೊಡ್ಡಬೇಕು. ‌ನಮ್ಮ‌ ಮೇಲ್ಮನವಿಗೆ ಸಿಬಿಐ ಇನ್ನೂ ಆಕ್ಷೇಪಣೆ ಸಲ್ಲಿಸಿಲ್ಲ‌ ಎಂದು ವಿವರಿಸಿದರು.

ವಿನಯ್ ಕುಲಕರ್ಣಿ ಪರ ಮತ್ತೋರ್ವ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ಆಕ್ಷೇಪಣೆ ಸಲ್ಲಿಸದಿದ್ದರೆ ವಿಚಾರಣೆ ಮುಂದುವರಿಸಲಾಗುವುದು ಎಬುದಾಗಿ ನ್ಯಾಯಾಲಯ ಆದೇಶಿಸಬೇಕು ಎಂದು ಕೋರಿದರು.

ಸಿಬಿಐ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ಅವರು, ಆಕ್ಷೇಪಣೆ ಸಿದ್ಧವಾಗಿದೆ  ಇಂದು ಸಂಜೆಯ ವೇಳೆಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕೊನೆಗೆ ಪೀಠವು ವಿನಯ್‌ ಕುಲಕರ್ಣಿ ಮತ್ತು ಚಂದ್ರಶೇಖರ್‌ ಇಂಡಿ ಅವರ ಶಿಕ್ಷೆ ಅಮಾನತು ಕೋರಿರುವ ಮನವಿಗಳನ್ನು ಈಗ ವಿಚಾರಣೆ ನಡೆಸುವುದಿಲ್ಲ. ರಜಾಕಾಲ ಮುಗಿದ ಬಳಿಕ ವಿಚಾರಣೆ ನಡೆಸಬಹುದು. ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿತಲ್ಲದೆ, ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಸೂಚಿಸಿ ವಿಚಾರಣೆಯನ್ನು ಜೂನ್‌ ಕ್ಕೆ ಮುಂದೂಡಿತು.

Kannada Bar & Bench
kannada.barandbench.com