ಮಾಲೆಗಾಂವ್‌ ಪ್ರಕರಣದ ಆರೋಪಿ ಪ್ರಜ್ಞಾ ಸನ್ಮಾನಕ್ಕೆ ಬಾಂಬೆ ಹೈಕೋರ್ಟ್‌ ಅನುಮತಿ; ಬದುಕಿ, ಬದುಕಲು ಬಿಡಿ ಎಂದು ಕಿವಿಮಾತು

ಹತ್ತು ಜನರನ್ನು ಬಲಿ ತೆಗೆದುಕೊಂಡು, 80ಕ್ಕೂ ಹೆಚ್ಚು ಮಂದಿ ಗಾಯಗೊಂಡ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿ ಪ್ರಜ್ಞಾ ಠಾಕೂರ್‌ ಅವರಿಗೆ 'ಹಿಂದೂ ವೀರ್' ಪ್ರಶಸ್ತಿ ನೀಡಲು ಹಿಂದೂ ಸಂಘಟನೆಯೊಂದು ನಿರ್ಧರಿಸಿದೆ.
Pragya Singh Thakur
Pragya Singh ThakurFacebook
Published on

ಮಾಲೆಗಾಂವ್ ಸ್ಫೋಟದ ಪ್ರಮುಖ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಸನ್ಮಾನಿಸುವ ಉದ್ದೇಶದಿಂದ ನಾಳೆ (ಮಾರ್ಚ್ 30) ಮಾಲೆಗಾಂವ್‌ನಲ್ಲಿ ಗುಡಿ ಪಾಡ್ವ ಕಾರ್ಯಕ್ರಮ ಆಯೋಜಿಸಲು ಹಿಂದೂ ಸಂಘಟನೆ ಸಕಲ್ ಹಿಂದೂ ಸಮಾಜ ಸಂಘಟಕರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ಪುರಸ್ಕರಿಸಿದೆ.

ವಿವಿಧ ಕಠಿಣ ಷರತ್ತುಗಳನ್ನು ವಿಧಿಸಿ ಮಾರ್ಚ್ 30 ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಕಾರ್ಯಕ್ರಮ ನಡೆಸಲು ನ್ಯಾಯಮೂರ್ತಿಗಳಾದ ರವೀಂದ್ರ ಘುಘೆ ಮತ್ತು ಅಶ್ವಿನ್ ಭೋಬೆ ಅವರನ್ನೊಳಗೊಂಡ ಪೀಠ ಅನುಮತಿ ನೀಡಿತು.

Also Read
ಮಾಲೆಗಾಂವ್‌ ಸ್ಫೋಟ ಕುರಿತ ಸಿನಿಮಾಗೆ ತಡೆ ನೀಡಲು ಕೋರಿದ್ದ ಲೆಫ್ಟಿನೆಂಟ್‌ ಕರ್ನಲ್‌ ಪುರೋಹಿತ್‌ ಅರ್ಜಿ ವಜಾ

ರಂಜಾನ್‌ ಮುನ್ನಾದಿನ ಕಾರ್ಯಕ್ರಮ ಆಯೋಜಿಸಲಾಗಿದ್ದು ಪ್ರಜ್ಞಾ ಅವರಿಗೆ 'ಹಿಂದೂ ವೀರ್' ಪ್ರಶಸ್ತಿ ನೀಡಲು ಸಂಘಟನೆ ಉದ್ದೇಶಿಸಿದೆ.

ಅನುಮತಿ ನೀಡುವ ವೇಳೆ ನ್ಯಾಯಾಲಯ "ಭಾರತಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾದ ನಂತರ, ದೇಶದ ಜನ  ಸಾಕ್ಷರರಾಗುತ್ತಿದ್ದಾರೆ ಮತ್ತು ಅವರ ವಿವೇಚನಾಶಕ್ತಿಗೆ ಗೆಲುವಾಗುತ್ತಿದೆ ಎಂದು ನಂಬಲು ನಮಗೆ ಎಲ್ಲಾ ಕಾರಣಗಳಿವೆ. ಭಾಷಣಕಾರರು ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸುವಾಗ, ಉಳಿದ ಧರ್ಮಗಳ ಸದಸ್ಯರನ್ನು ನೋಯಿಸದಂತೆ, ಬೇರೆ ಧರ್ಮದ ವಿರುದ್ಧ ನಿಲ್ಲದಂತೆ ನೋಡಿಕೊಳ್ಳಬೇಕು" ಎಂದಿದೆ.

"ಅವರೆಲ್ಲರೂ ಜವಾಬ್ದಾರಿಯುತ ನಾಗರಿಕರು ಎಂಬ ನಂಬಿಕೆ ನಮಗೆ ಇದ್ದು ಅವರು ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು. ಸೂಕ್ಷ್ಮತೆಯನ್ನು ಅತಿ ಎನಿಸುವಷ್ಟು ಉದ್ದೀಪಿಸಬಾರದು. ನಾವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಂಬುವ ಜೊತೆಗೆ ಸಹಬಾಳ್ವೆಯನ್ನೂ ನಂಬುತ್ತೇವೆ. ಅದು ಹೆಚ್ಚು ಮುಖ್ಯ... ನಿಮ್ಮ ನೆರೆಹೊರೆಯವರು ಸಂತೋಷವಾಗಿದ್ದರೆ, ನೀವು ಸಂತೋಷವಾಗಿರುತ್ತೀರಿ. ಬದುಕಿ- ಬದುಕಲು ಬಿಡಿ ಎಂಬುದರಲ್ಲಿ ನಮಗೆ ನಂಬಿಕೆ ಇದೆ" ಎಂದು ನ್ಯಾಯಾಲಯ ಹೇಳಿತು.

Also Read
[ಮಾಲೇಗಾಂವ್‌ ಸ್ಫೋಟ] ಎನ್‌ಐಎ ವಕೀಲರಾಗಿ ವಾದಿಸಿರುವುದನ್ನು ಉಲ್ಲೇಖಿಸಿದ ಆರೋಪಿ: ವಿಚಾರಣೆಯಿಂದ ಹಿಂಸರಿದ ನ್ಯಾ.ರೇವತಿ

ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸುವುದಿಲ್ಲ ಎಂಬ ಮುಚ್ಚಳಿಕೆಯನ್ನು ಆಯೋಜಕರು ಮಾರ್ಚ್ 29ರಂದು ಸಂಜೆ 6 ಗಂಟೆಯೊಳಗೆ ನಾಸಿಕ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಬೇಕು. ಜನದಟ್ಟಣೆ ಅಥವಾ ಜನದಟ್ಟಣೆಯ ಪ್ರದೇಶಗಳನ್ನು ಮೆರವಣಿಗೆ ತಪ್ಪಿಸುವಂತೆ ನೋಡಿಕೊಳ್ಳಲು ಪೊಲೀಸರು ನಿರ್ದಿಷ್ಟ ಮಾರ್ಗ ನಿಗದಿಪಡಿಸಬೇಕು. ಪೊಲೀಸರು ಕಾರ್ಯಕ್ರಮಕ್ಕೆ ಸಾಕಷ್ಟು ರಕ್ಷಣೆ ಒದಗಿಸಬೇಕಾಗುತ್ತದೆ, ಅದರ ವೆಚ್ಚಕ್ಕೆ ಸಂಬಂಧಿಸಿದಂತೆ ಅವರು ನಿರ್ಧಾರ ಕೈಗೊಳ್ಳಬಹುದು ಎಂದು ನ್ಯಾಯಾಲಯ ನುಡಿಯಿತು. 

ಪ್ರಜ್ಞಾ ಮತ್ತಿತರ ಭಾಷಣಕಾರರು ಪ್ರಚೋದನಕಾರಿ ಹೇಳಿಕೆ ನೀಡುತ್ತಾರೆಂಬ ಪೊಲೀಸ್‌ ವರದಿ ಉಲ್ಲೇಖಿಸಿ ನಾಸಿಕ್‌ ಜಿಲ್ಲಾಧಿಕಾರಿ ಮಾರ್ಚ್ 25 ರಂದುಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರು. ಹೀಗಾಗಿ ಸಂಘಟನೆ ಹೈಕೋರ್ಟ್‌ ಮೆಟ್ಟಿಲೇರಿತ್ತು.

Kannada Bar & Bench
kannada.barandbench.com