ಮಾಲೆಗಾಂವ್‌ ಸ್ಫೋಟ ಕುರಿತ ಸಿನಿಮಾಗೆ ತಡೆ ನೀಡಲು ಕೋರಿದ್ದ ಲೆಫ್ಟಿನೆಂಟ್‌ ಕರ್ನಲ್‌ ಪುರೋಹಿತ್‌ ಅರ್ಜಿ ವಜಾ

ಸ್ಫೋಟ ಮತ್ತು ಆನಂತರದ ಬೆಳವಣಿಗೆಗಳನ್ನು ಸಿನಿಮಾದಲ್ಲಿ ತೋರಿಸಿರುವುದಕ್ಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಲೆಫ್ಟಿನೆಂಟ್‌ ಕರ್ನಲ್‌ ಪ್ರಸಾದ್‌ ಪುರೋಹಿತ್‌ ಆಕ್ಷೇಪಿಸಿದ್ದು, ಅದು ತಮ್ಮ ಘನತೆ, ವೃತ್ತಿಗೆ ಹಾನಿ ಮಾಡಲಿದೆ ಎಂದು ವಾದಿಸಿದ್ದರು.
Matchfixing-The Nation is at stake and Bombay High court
Matchfixing-The Nation is at stake and Bombay High court
Published on

ಮಾಲೆಗಾಂವ್‌ ಸ್ಫೋಟ ಪ್ರಕರಣ ಆಧಾರಿತ ʼಮ್ಯಾಚ್‌ಫಿಕ್ಸಿಂಗ್‌ - ದ ನೇಷನ್‌ ಈಸ್‌ ಅಟ್ ಸ್ಟೇಕ್‌ʼ ಸಿನಿಮಾಕ್ಕೆ ತಡೆ ನೀಡಬೇಕು ಎಂದು ಕೋರಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಈಚೆಗೆ ವಜಾ ಮಾಡಿದೆ. ಈ ಹಿನ್ನೆಲೆಯಲ್ಲಿ ನವೆಂಬರ್‌ 15ರಂದು ಚಿತ್ರವು ತೆರೆಗೆ ಬರಲಿದೆ.

2008ರಲ್ಲಿ ನಡೆದಿದ್ದ ಪ್ರಕರಣದಲ್ಲಿ ಆರೋಪಿಯಾಗಿರುವ ಲೆಫ್ಟಿನೆಂಟ್‌ ಕರ್ನಲ್‌ ಪ್ರಸಾದ್‌ ಪುರೋಹಿತ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ ಪಿ ಕೊಲಬಾವಾಲಾ ಮತ್ತು ಸೋಮಶೇಖರ್‌ ಸುಂದರೇಶ್‌ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸ್ಫೋಟ ಮತ್ತು ಆನಂತರದ ಬೆಳವಣಿಗೆಗಳನ್ನು ಸಿನಿಮಾದಲ್ಲಿ ತೋರಿಸಿರುವುದಕ್ಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಲೆಫ್ಟಿನೆಂಟ್‌ ಕರ್ನಲ್‌ ಪ್ರಸಾದ್‌ ಪುರೋಹಿತ್‌ ಆಕ್ಷೇಪಿಸಿದ್ದು, ಅದು ತಮ್ಮ ಘನತೆ ಮತ್ತು ವೃತ್ತಿಗೆ ಹಾನಿ ಮಾಡಲಿದೆ ಎಂದು ವಾದಿಸಿದ್ದರು.

ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್‌ಸಿ) ಸಿನಿಮಾ ಪ್ರಮಾಣಪತ್ರ ನೀಡುವಾಗ ಕೆಲವು ಆಕ್ಷೇಪಾರ್ಹ ಅಂಶಗಳನ್ನು ತೆಗೆದಿದೆ ಎಂದು ವಕೀಲ ದೀಪಕ್‌ ಶುಕ್ಲಾ ತಿಳಿಸಿದ ಹಿನ್ನೆಲೆಯಲ್ಲಿ ಮುಸ್ಲಿಮ್‌ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಸಿನಿಮಾ ಧಕ್ಕೆ ಉಂಟು ಮಾಡಿದೆ ಎಂದು ಆಕ್ಷೇಪಿಸಿದ್ದ ಅರ್ಜಿಯನ್ನು ನದೀಮ್‌ ಖಾನ್‌ ಹಿಂಪಡೆದಿದ್ದಾರೆ.

ಸಿನಿಮಾ ಬಿಡುಗಡೆಯು 2019ರಲ್ಲಿ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಲಿದೆ. ಸಾರ್ವಜನಿಕ ಅಭಿಪ್ರಾಯದ ಮೇಲೆ ಪರಿಣಾಮ ಮತ್ತು ವಿಚಾರಣೆಯಲ್ಲಿ ಮಧ್ಯಪ್ರವೇಶ ಮಾಡಿದಂತಾಗುವುದರಿಂದ ಅದೇ ನಿರ್ಬಂಧಗಳನ್ನು ಸಿನಿಮಾದ ಮೇಲೆ ಹೇರಬೇಕು ಎಂದು ಪುರೋಹಿತ್‌ ಕೋರಿದ್ದರು.

ಸಿನಿಮಾ ನಿರ್ಮಾಪಕರನ್ನು ಪ್ರತಿನಿಧಿಸಿದ್ದ ವಕೀಲ ಆದಿತ್ಯ ಐಯ್ಯರ್‌ ಅವರು “ವಿಚಾರಣೆ ಆರಂಭವಾಗದೇ ಇರುವಾಗ ಮಾಧ್ಯಮ ನಿರ್ಬಂಧ ಆದೇಶ ಮಾಡಲಾಗಿದೆ. ಅದಲ್ಲದೇ ಇದು ಮಾಧ್ಯಮ ಸಂಸ್ಥೆಗಳಿಗೆ ಮಾತ್ರ ನಿರ್ಬಂಧ ವಿಧಿಸಿರುವ ಆದೇಶವಾಗಿದೆ. ಮೂರನೇ ವ್ಯಕ್ತಿಗಳಾಗಿರುವ ಸಿನಿಮಾ ನಿರ್ಮಾಪಕರಿಗೆ ಮಾಧ್ಯಮ ನಿರ್ಬಂಧ ಆದೇಶ ಅನ್ವಯಿಸುವುದಿಲ್ಲ 'ದ ಗೇಮ್‌ ಬಿಹೈಂಡ್‌ ಸ್ಯಾಫ್ರನ್‌ ಟೆರರ್‌' ಕೇಸರಿ ಭಯೋತ್ಪಾದನೆಯ ಹಿಂದಿನ ಆಟ ಎಂಬ ಕಾಲ್ಪನಿಕ ಕೃತಿ ಆಧರಿಸಿ ಸಿನಿಮಾ ರೂಪಿಸಲಾಗಿದೆ. ಇದು ಕಾಲ್ಪನಿಕವಾಗಿದ್ದು, ನೈಜ ಘಟನಾಧಾರಿತವಲ್ಲ” ಎಂದರು.

ಪುರೋಹಿತ್‌ ಪರ ವಕೀಲರು ಸ್ವಯಂತ್ರ ವಿಚಾರಣೆಯ ದೃಷ್ಟಿಯಿಂದ ಸಿನಿಮಾಗೆ ತಡೆ ವಿಧಿಸಬೇಕು ಎಂದು ಕೋರಿದರು. ಆಗ ಪೀಠವು “ನ್ಯಾಯಮೂರ್ತಿಗಳು ಸಿನಿಮಾ ನೋಡಿ ಪ್ರಭಾವಿತರಾಗಿ, ಸಾಕ್ಷಿಯನ್ನು ಮರೆಯುತ್ತಾರೆ ಎಂದು ನೀವು ಹೇಳುತ್ತಿದ್ದೀರಾ?” ಎಂದು ಪ್ರಶ್ನಿಸಿತು.

Also Read
ಪಾಕಿಸ್ತಾನದಲ್ಲಿ ತನ್ನ ಬಗ್ಗೆ ವೆಬ್ ಸರಣಿ: ಮುಂಬೈ ನ್ಯಾಯಾಲಯದಲ್ಲಿ ಮಾಲೆಗಾಂವ್ ಪ್ರಕರಣದ ಆರೋಪಿ ಪುರೋಹಿತ್ ಅಳಲು

2008ರ ಸೆಪ್ಟೆಂಬರ್‌ 29ರಂದು ನಡೆದಿದ್ದ ಮಾಲೆಗಾಂವ್‌ ಸ್ಫೋಟ ಪ್ರಕರಣದಲ್ಲಿ ಆರು ಮಂದಿ ಹತ್ಯೆಯಾಗಿದ್ದು, 100 ಗಾಯಗೊಂಡಿದ್ದರು. ಪುರೋಹಿತ್‌, ಬಿಜೆಪಿ ಮಾಜಿ ಸಂಸದೆ ಪ್ರಗ್ಯಾ ಸಿಂಗ್‌ ಠಾಕೂರ್‌ ಮತ್ತು ಇತರೆ ಐವರು ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯಿದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಗಳಲ್ಲಿ ಆರೋಪಿಗಳಾಗಿದ್ದಾರೆ.

ಮೊದಲಿಗೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಪ್ರಕರಣದ ತನಿಖೆ ನಡೆಸುತ್ತಿತ್ತು. 2011ರಲ್ಲಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿತ್ತು.

Kannada Bar & Bench
kannada.barandbench.com