ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಕೋವಿಡ್ ಕಾರಣಕ್ಕೆ ನಾಲ್ಕು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಭಕ್ತರ ಹೂ ಅರ್ಪಣೆ ಪುನರಾರಂಭಕ್ಕೆ ಬಾಂಬೆ ಹೈಕೋರ್ಟ್ ಈಚೆಗೆ ಅನುಮತಿ ನೀಡಿದೆ [ಶ್ರೀ ಸಾಯಿಬಾಬಾ ಸಂಸ್ಥಾನ ಶಿರಡಿ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಹೂ / ಮಾಲೆ ಅರ್ಪಣೆ ಪುನರಾರಂಭಿಸುವ ನಿರ್ಣಯಕ್ಕೆ ಅನುಮೋದನೆ ಕೋರಿ ಸಂಸ್ಥಾನದ ಅಡ್-ಹಾಕ್ ಸಮಿತಿ ಸಲ್ಲಿಸಿದ್ದ ಮನವಿ ಮತ್ತು ದೇಗುಲ ಆವರಣದಲ್ಲಿ ಹೂ ಮಾರಾಟ ಮಾಡಲು ವ್ಯಾಪರಿಗಳು ಸಲ್ಲಿಸಿದ್ದ ಅರ್ಜಿ ಹೀಗೆ ಎರಡು ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮಂಗೇಶ್ ಪಾಟೀಲ್ ಮತ್ತು ಶೈಲೇಶ್ ಬ್ರಾಹ್ಮೆ ಅವರಿದ್ದ ಪೀಠ ಹೂ ಅರ್ಪಣೆ ಪುನರಾರಂಭಕ್ಕೆ ಅನುಮತಿಸಿತು.
ದೇಗುಲ ಅಥವಾ ಟ್ರಸ್ಟ್‌ಗೆ ಹೂ ಇಲ್ಲವೇ ಮಾಲೆ ಅರ್ಪಣೆ ಪುನರಾರಂಭ ನಿರ್ಣಯಕ್ಕೆ ಅನುಮತಿ ನೀಡುವುದು ಸೂಕ್ತ. ಹೂ ಅರ್ಪಣೆಯಿಂದ ಉಂಟಾಗುವ ತ್ಯಾಜ್ಯ ವಿಲೇವಾರಿಗೆ ಅಡ್‌ಹಾಕ್ ಸಮಿತಿ ಆದಷ್ಟು ಬೇಗ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.
ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನ ಆಡಳಿತ ವ್ಯವಸ್ಥೆ ಪ್ರಶ್ನಿಸಿ 2021ರಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಿಂದ (ಪಿಐಎಲ್) ಈ ಪ್ರಕರಣ ಟಿಸಿಲೊಡೆದಿದೆ. ಟ್ರಸ್ಟ್‌ಗೆ ಹೊಸ ವ್ಯವಸ್ಥಾಪಕ ಸಮಿತಿ ಸ್ಥಾಪಿಸಲು ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೆಪ್ಟೆಂಬರ್ 2022 ರಲ್ಲಿ ನಿರ್ದೇಶನ ನೀಡಿತ್ತು.
ಪ್ರಧಾನ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾಧಿಕಾರಿ ಮತ್ತು ಸಂಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದ ತಾತ್ಕಾಲಿಕ ಸಮಿತಿ ಅಂದಿನಿಂದ ದೇವಾಲಯದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದೆ.
ಸಾಂಕ್ರಾಮಿಕ ರೋಗದ ಹಿನ್ನೆಲೆ ಮತ್ತು ದೇಗುಲದ ಆವರಣದೊಳಗೆ ತ್ಯಾಜ್ಯ ನಿರ್ವಹಣೆಯ ಬಗೆಗಿನ ಕಳವಳದಿಂದಾಗಿ 2020 ರಿಂದ ಹೂವಿನ ಅರ್ಪಣೆ ಸ್ಥಗಿತಗೊಳಿಸಲಾಗಿತ್ತು.